Sunday, May 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬರು ಮತ ಚಲಾಯಿಸಿ ಯೋಗ್ಯರನ್ನು ಆಯ್ಕೆ ಮಾಡಲಿ: ಬಿ.ಜಿ. ರಮಾ

ಪ್ರಜೆಯೇ ಚುನಾವಣೆ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮಹತ್ವದ ಅಧಿಕಾರ ನೀಡಿರುವ ಮತದಾನದ ಹಕ್ಕು ಶ್ರೇಷ್ಠವಾಗಿದ್ದು, ಮತದಾರರು ರಾಷ್ಟ್ರೀಯ ಪ್ರಜ್ಞೆಯಿಂದ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮುಂದಾಗಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀರಾದ ಬಿ.ಜಿ. ರಮಾ ತಿಳಿಸಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಮತದಾರರಿಗೆ ಮತದಾನದ ಬಗ್ಗೆ ಇರುವ ಆಸ್ತಕ್ತಿ ವಯಸ್ಕರಿಗೆ ಇಲ್ಲದಿರುವುದು ಬೇಸರದ ಸಂಗತಿ. ನಮ್ಮ ಹಕ್ಕಿನ ಮೌಲ್ಯಕ್ಕಾಗಿ ವಿಶ್ವದಲ್ಲಿ ಹಲವಾರು ಆಂದೋಲನಗಳು ನಡೆದಿದ್ದು, ದಕ್ಷಿಣ ಆಫ್ರಿಕಾದಲ್ಲೂ ಮತದಾನದ ಹಕ್ಕು ಕೊಡಿಸಲು ಮಹಾತ್ಮ ಗಾಂಧೀಜಿ ವಕೀಲರಾಗಿ ಸೇವೆ ಸಲ್ಲಿಸಿದ ಹಿರಿಮೆ ನಮ್ಮದಾಗಿದೆ ಎಂದರು.

ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ದೊರಕಿರುವ ಸ್ವಾತಂತ್ರದ ಸದ್ಬಳಕೆ ಆಗಬೇಕಾದರೆ ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ನಗರ ಪ್ರದೇಶದ ಮತದಾರರು ಮತದಾನಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ನಗರ ಮತದಾರರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ಚುನಾವಣೆಯ ಪ್ರಾಮುಖ್ಯತೆಯನ್ನು ಅರಿತು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಜನವರಿ 25 ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾಗಿದ್ದು, ಅದರ ನೆನಪಿಗಾಗಿ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುವುದು. ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಭಾರತಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಭಾರತದಲ್ಲಿ ಮತದಾನ ಪ್ರಕ್ರಿಯೆಯಲ್ಲಿ 1979 ರಿಂದ ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ ಮೂಲಕ ಮತದಾನ ಮಾಡಲಾಗುತ್ತಿದ್ದು, ಅತ್ಯಂತ ನಿಷ್ಪಕ್ಷವಾಗಿ ಪಾರದರ್ಶಕವಾಗಿ ಸಮರ್ಥ ಹಾಗೂ ಯಶಸ್ವಿಯಾಗಿ ಚುನಾವಣೆಯನ್ನು ನಡೆಸುತ್ತಿದ್ದೇವೆ. ಈ ಮೂಲಕ ಬೇರೆ ದೇಶಕ್ಕೆ ಭಾರತ ದೇಶ ಮಾದರಿಯಾಗಿದೆಎಂದರು.

ದೇಶದ ಎಲ್ಲಾ ಪ್ರಜೆಗಳು ಮೂಲಭೂತ ಹಕ್ಕುಗಳನ್ನು ಪಡೆಯುವ ಮುಂಚೆ ಮೂಲಭೂತ ಕರ್ತವ್ಯವನ್ನು ಉತ್ತಮವಾಗಿ ನಿಭಾಯಿಸಬೇಕು. ಆಗ ಮಾತ್ರ ಮೂಲಭೂತ ಹಕ್ಕುಗಳನ್ನು ಪಡೆಯುವ ಅಧಿಕಾರವಿರುತ್ತದೆ. ಹಿಂದೆ ಮತದಾನ ಮಾಡಲು ಮತದಾರರಿಗೆ 21 ವರ್ಷ ವಯಸ್ಸಾಗಿರಬೇಕಿತ್ತು. ದೇಶದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾದಂತೆ 1989 ರಲ್ಲಿ 21 ರಿಂದ 18 ವರ್ಷಕ್ಕೆ ಸಡಿಲಗೊಳಿಸಲಾಯಿತು. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಲು ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವಂತಹ ದೊಡ್ಡ ದೇಶ ಭಾರತವಾಗಿದೆ. ಇದು ಹೆಮ್ಮೆಯ ವಿಷಯವಾಗಿದ್ದು ಈ ಮೂಲಕ ಎಲ್ಲಾ ಮತದಾರರು ಪ್ರಜಾಸತ್ತಾತ್ಮಕ ಮೌಲ್ಯವನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಕರೆ ನೀಡಿದರು.

ಕಳೆದ ಬಾರಿ ಚುನಾವಣೆಯಲ್ಲಿ ನಮ್ಮ ಜಿಲ್ಲೆ ಶೇ.82 ರಷ್ಟು ಮತದಾನ ಮಾಡಿದ್ದೂ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಜಿಲ್ಲೆಯಲ್ಲಿ ಪ್ರಜ್ಞಾವಂತ ನಾಗರೀಕರು ಇದ್ದಾರೆ ಎಂಬ ಸೂಚನೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜಿಲ್ಲೆಯ ಎಲ್ಲಾ ಮತದಾರರು ಸಹ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, 14 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷಣೆಯ ಮೂಲಕ ಮತದಾರರಲ್ಲಿ ಪ್ರಜ್ಞೆ ಮೂಡಿಸಬೇಕು ಎಂದರು.

ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸುಭದ್ರ ಪ್ರಜಾಪ್ರಭುತ್ವ ಸಾಧ್ಯ ಎಂಬಂತೆ ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಎಲ್ಲಾ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ. ಶೆಟ್ಟಿ , ಉಪವಿಭಾಗಾಧಿಕಾರಿ ಶಿವಮೂರ್ತಿ, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!