Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೂಡಲಪಾಯ ಯಕ್ಷಗಾನ ಕಲೆಯು ಗತವೈಭವಕ್ಕೆ ಮರಳಲಿ- ಜಯರಾಮ ರಾಯಪುರ

ಭಾವ, ರಾಗ, ತಾಳ ಸೇರಿದಂತೆ ನವರಸಗಳನ್ನು ಹೊಂದಿರುವ ಮಂಡ್ಯ ಜಿಲ್ಲೆಯ ಗ್ರಾಮೀಣ ಜನರ ಗಂಡು ಕಲೆಯಾಗಿರುವ ಮೂಡಲಪಾಯ ಯಕ್ಷಗಾನ ಕಲೆಯು ಇಂದು ನೇಪಥ್ಯಕ್ಕೆ ಸರಿದು ಕಣ್ಮರೆಯಾಗುತ್ತಿದೆ. ಈ ಕಲೆ ಗತವೈಭವವನ್ನು ಮರು ಸ್ಥಾಪಿಸುವ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಯಕ್ಷಗಾನ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹಾಗೂ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ಗೌರವಾಧ್ಯಕ್ಷ ಜಯರಾಮ ರಾಯಪುರ ಹೇಳಿದರು.

ಕೆಆರ್ ಪೇಟೆ ತಾಲೂಕಿನ ಶೆಟ್ಟನಾಯಕನ ಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ, ಕರ್ನಾಟಕ ಸಂಘ ಮಂಡ್ಯ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೆ.ಆರ್. ಪೇಟೆ ತಾಲ್ಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮೂಡಲಪಾಯ ಯಕ್ಷಗಾನವು ಇಂದು ಚಲನಚಿತ್ರಗಳು ಹಾಗೂ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಕಣ್ಮರೆಯಾಗಿ ನೇಪದ್ಯಕ್ಕೆ ಸರಿಯುತ್ತಿದೆ. ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಮ್ಮ ಬದುಕಿನ ಕೈಗನ್ನಡಿಯಾಗಿರುವ ಮೂಡಲಪಾಯ ಯಕ್ಷಗಾನ ಕಲೆಯು ಪಡುವಲಪಾಯ ಯಕ್ಷಗಾನ ಕಲೆಗಿಂತಲೂ ವಿಭಿನ್ನವಾಗಿದ್ದು ವಿಶೇಷವಾಗಿದೆ ಎಂದರು.

ತನ್ನದೇ ಆದ ತಾಳಮದ್ದಲೆ ಸಂಗೀತ, ರಾಗ ಹಾಗೂ ನೃತ್ಯವನ್ನು ಒಳಗೊಂಡಿರುವ ಮೂಡಲಪಾಯ ಯಕ್ಷಗಾನ ಕಲೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಅಭಿರುಚಿಯನ್ನು ಮೂಡಿಸುವ ದಿಕ್ಕಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಮೂಡಲಪಾಯ ಯಕ್ಷಗಾನ ಪರಿಷತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿವೆ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಜಾನಪದ ಕಲಾ ಚಟುವಟಿಕೆಗಳಿಗೂ ಒತ್ತು ನೀಡುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಾಸಗೊಳಿಸಿಕೊಳ್ಳಬೇಕು ಸಲಹೆ ನೀಡಿದರು.

ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಮೂಡಲಪಾಯ ಯಕ್ಷಗಾನ ಕಲೆಯ ಬಗ್ಗೆ ಯುವಜನರಲ್ಲಿ ಅಭಿರುಚಿಯನ್ನು ಮೂಡಿಸುವ ಸಲುವಾಗಿ ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನರು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡುವಷ್ಟೇ ಆದ್ಯತೆ ಹಾಗೂ ಮಹತ್ವವನ್ನು ಮೂಡಲಪಾಯ ಯಕ್ಷಗಾನ ಕಲೆಯ ಬಗ್ಗೆಯೂ ನೀಡಬೇಕು ಎಂದು ಹೇಳಿದರು.

ತಿಪಟೂರಿನ ಮೂಡಲಪಾಯ ಯಕ್ಷಗಾನ ಭಾಗವತರಾದ ಶಿವಣ್ಣ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬಗ್ಗೆ ಜಾಗೃತಿ ಮೂಡಿಸಿದರು. ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತಿನ ಕಾರ್ಯದರ್ಶಿ ಶಶಿಧರ್ ಭಾರಿಘಾಟ್, ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕೆ ಆರ್ ಪೇಟೆ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಪವಿತ್ರ, ನಿಲಯಪಾಲಕಿ ನಗಿನಾ ಬಾನು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ರಂಗಭೂಮಿ ಕಲೆಗಳನ್ನು ಪ್ರದರ್ಶಿಸಿ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!