ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಮಾತು ಕೇಳಿ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಕೆಲವು ಸಹಕಾರಿ ಸಂಘಗಳ ಸದಸ್ಯರನ್ನು ಉದ್ದೇಶ ಪೂರ್ವಕವಾಗಿ ಅನರ್ಹ ಮಾಡುತ್ತಿದ್ದಾರೆಂದು ಆರೋಪಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಕಾನೂನು ಬಾಹಿರವಾಗಿ ಅನರ್ಹ ಮಾಡಿರುವ ಸದಸ್ಯತ್ವನ್ನು ಮತ್ತೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಚಿವ ಚಲುವರಾಯಸ್ವಾಮಿ ಮಂಡ್ಯದಲ್ಲಿ ಸಹಕಾರ ಸಂಘದ ಸದಸ್ಯರನ್ನು ಅನರ್ಹ ಮಾಡಿಸುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಬೆಂಬಲಿತ ಸದಸ್ಯರನ್ನು ಅನರ್ಹ ಮಾಡ್ತಾ ಇದ್ದಾರೆ. ನಾಗಭೂಷಣ್ ಎಂಬ ಡಿಆರ್‌ನ್ನು ಬಳಕೆ ಮಾಡಿಕೊಂಡು ಅನರ್ಹ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಮನ್‌ಮುಲ್ ಚುನಾವಣೆಯ ದಿನಾಂಕ ಘೋಷಣೆ ಆಗಿದೆ. ಸೋಲಿನ ಭೀತಿಯಿಂದ ನಮ್ಮ ಸದಸ್ಯರನ್ನು ಅನರ್ಹ ಮಾಡಿಸುತ್ತಿದ್ದಾರೆ. ಚುನಾವಣಾ ಅಖಾಡಲ್ಲಿ ಹೆದರಿಸುವ ಬದಲು ಈ ಕೃತ್ಯಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಧಿಕಾರಿಗಳು ಸಚಿವರ ಚೇಲಾಗಳ ರೀತಿ ಕೆಲಸ ಮಾಡ್ತಾ ಇದ್ದಾರೆ. ಇದನ್ನು ಸರಿ ಪಡಿಸದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಾಸಕ ಎಚ್.ಟಿ.ಮಂಜು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಾಜಿ ಶಾಸಕ ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಜೆಡಿಎಸ್ ಮುಖಂಡರಾದ ಪುಟ್ಟಸ್ವಾಮಿ, ವೇಣುಗೋಪಾಲ್ ಮತ್ತಿತರರಿದ್ದರು.




