Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಬಂದ್ ವಿಫಲ| ಸಂಘ ಪರಿವಾರದ ರ್‍ಯಾಲಿಯಿಂದಲೂ ದೂರ ಉಳಿದ ಜೆಡಿಎಸ್

ಮಂಡ್ಯ ತಾಲ್ಲೂಕಿನ ಕೆರಗೋಡು ಹನುಮ ಧ್ವಜ ವಿವಾದದಲ್ಲಿ ಸ್ವತಃ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಸ್ಥಳೀಯ ಜೆಡಿಎಸ್ ನಾಯಕರು ಭಾಗವಹಿಸಿದ್ದು ಗಮನಾರ್ಹವಾಗಿತ್ತು. ಆದರೆ ಸಂಘ ಪರಿವಾರ ಫೆ.9ರಂದು ಕರೆ ನೀಡಿದ್ದ ಮಂಡ್ಯ ಬಂದ್ ಬೆಂಬಲಿಸುವ ಅಥವಾ ಬೆಂಬಲಿಸದಿರುವ ನಿರ್ಧಾರ ಕೈಗೊಳ್ಳದೇ ಮಂಡ್ಯದ ಜೆಡಿಎಸ್ ನಾಯಕರು, ತಟಸ್ಥ ನೀತಿ ಕೈಗೊಂಡು ಶುಕ್ರವಾರ ಮಂಡ್ಯದಲ್ಲಿ ನಡೆಸಿದ ರ್‍ಯಾಲಿಯಿಂದಲೂ ದೂರ ಉಳಿದರು.

ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರಾದ ಸಿ.ಎಸ್.ಪುಟ್ಟರಾಜು, ಕೆ.ಸುರೇಶ್ ಗೌಡ, ಬಿ.ಆರ್.ರಾಮಚಂದ್ರು ಸೇರಿದಂತೆ ಹಲವರು ಕೇಸರಿ ಶಾಲು ಧರಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಕೆರಗೋಡಿನಿಂದ ಮಂಡ್ಯದವರೆಗೆ ನಡೆಸಿದ ಪಾದಯಾತ್ರೆ ಸಂದರ್ಭದಲ್ಲಿ ಕೆಲವು ಕೇಸರಿ ಶಾಲು ಧರಿಸಿದ್ದ ಪುಂಡರು ಕಾಂಗ್ರೆಸ್ ನಾಯಕರ ಪ್ಲೇಕ್ಸ್ ಗಳನ್ನು ಹರಿದಿದ್ದರು, ಅಲ್ಲದೇ ಇದೇ ಗುಂಪು ಮಂಡ್ಯದ ಕುರುಬರ ಹಾಸ್ಟೆಲ್ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು ಮೂರು ಎಫ್ಐಆರ್ ಗಳನ್ನು ದಾಖಲಾಗಿದ್ದವು, ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 40 ರಿಂದ 50 ಜನರ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ.

ಆನಂತರ ನಡೆದ ಎಲ್ಲ ಬೆಳವಣಿಗೆಗಳಿಂದ ಜೆಡಿಎಸ್ ನಾಯಕರು ಸಂಘ ಪರಿವಾರ ಹೋರಾಟಗಳಿಂದ ಅಂತರ ಕಾಯ್ದುಕೊಂಡಿರುವುದು ಕಂಡು ಬಂದಿದೆ. ಅಲ್ಲದೇ ಸ್ವತಃ ಬಿಜೆಪಿ ಮುಖಂಡ ಅಶೋಕ್ ಜಯರಾಂ ಕೂಡ ಮಂಡ್ಯ ಬಂದ್ ಗೆ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದ್ದು, ಸಂಘ ಪರಿವಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಕೆಲವು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ಕೇಸರಿ ಶಾಲು ಹಾಕದೆ ಪಕ್ಷದ ಶಾಲು ಹಾಕಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಸಿಗದ ಜನ ಬೆಂಬಲ: ಬಿಜೆಪಿ, ಸಂಘ ಪರಿವಾರದ ಪ್ರತಿಭಟನೆ

ಬಿಜೆಪಿಗರ ಧ್ವಜ ವಿವಾದಕ್ಕೆ ಜನರು ಬೆಂಬಲ ನೀಡಲು ನಿರಾಕರಿಸಿದ್ದಾರೆ. ಮಂಡ್ಯ ನಗರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಶಾಲಾ ಕಾಲೇಜು, ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ಬಿಜೆಪಿ ಕಾರ್ಯಕರ್ತರು ಮಾತ್ರ ಸಂಘಪರಿವಾರದ ಪ್ರತಿಭಟನೆಯಲ್ಲಿ ಭಾಗಿಯಾದರು.

ಸಂಘಪರಿವಾರ ಕರೆಕೊಟ್ಟಿದ್ದ ಮೊದಲ ಮಂಡ್ಯ ಬಂದ್‌ ಸಂಪೂರ್ಣ ವಿಫಲವಾಗಿದೆ. ಬಂದ್‌ಗೆ ಬೆಂಬಲ ದೊರೆಯದ ಕಾರಣ, ಸಂಘ ಪರಿವಾದ ಕಾರ್ಯಕರ್ತರು ಕೆರಗೋಡಿನಿಂದ ಮಂಡ್ಯಕ್ಕೆ ಬೈಕ್ ರ್‍ಯಾಲಿ ನಡೆಸಿದ್ದು, ನಗರದ ವೀರಾಂಜನೇಯ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮಂಜುನಾಥ್, ಅರವಿಂದ್, ಶಿವಕುಮಾರ ಆರಾಧ್ಯ, ಸಿ.ಟಿ.ಮಂಜುನಾಥ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!