ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿಡುಗಡೆಯಾಗಲಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯ ಕುರಿತು ಶುಕ್ರವಾರ (ಮೇ 9) ಸಂಜೆ 4 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯಬೇಕಿದ್ದ ಸಮಾಲೋಚನಾ ಸಭೆಗೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಗೈರಾದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜೋಶಿ ಮಾಡಿದ ಅವಾಂತರಗಳ ವಿರುದ್ದ ಮಂಡ್ಯದ ಎಲ್ಲಾ ಕನ್ನಡಪರ, ಸಾಹಿತ್ಯ, ಸಂಘ-ಸಂಸ್ಥೆಗಳ ಮುಖಂಡರಿಗೆ ಆಕ್ರೋಶ ಮಡುಗಟ್ಟಿದ್ದು, ಈ ಆಕ್ರೋಶ ಪ್ರತಿಭಟನೆಯ ರೂಪದಲ್ಲಿ ಸ್ಪೋಟಿಸಲಿದೆ ಎಂಬ ಮಾಹಿತಿ ಅರಿತ ಜೋಶಿ ಮಂಡ್ಯ ಭೇಟಿಯಿಂದ ಹಿಂದೆ ಸರಿದಿದ್ಧಾರೆಂಬ ಮಾಹಿತಿ ತಿಳಿದು ಬಂದಿದೆ.

ಮಹೇಶ್ ಜೋಶಿ ವಿರುದ್ದ ಪ್ರತಿಭಟಿಸಲು ಕಾದು ಕುಳಿತ ಪ್ರಗತಿಪರ ಸಂಘಟನೆಗಳ ಮುಖಂಡರು, ಜೋಶಿ ಗೈರಿನ ನಡುವೆಯೂ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವುದಲ್ಲದೇ, ವಜಾಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರೊ.ಜಯಪ್ರಕಾಶ್ ಗೌಡ ಮಾತನಾಡಿ, ಸ್ಮರಣೆ ಸಂಚಿಕೆ ಈ ಕೂಡಲೇ ಪ್ರಕಟವಾಗಬೇಕು, ಜೋಶಿ ಅನುಪಸ್ಥಿತಿಯಲ್ಲೇ ಸಂಚಿಕೆಯನ್ನು ಜಿಲ್ಲಾಡಳಿತ ಹೊರ ತರಬೇಕೆಂದು ಒತ್ತಾಯಿಸಿದರು.
ಜೋಶಿಯು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಾನು ವೆಚ್ಚ ಮಾಡಿದ 2.50 ಕೋಟಿ ರೂ. ಗೆ ಲೆಕ್ಕವನ್ನೇ ಕೊಟ್ಟಿಲ್ಲ, ಆಗಲೇ ಮುಂದೆ ಬಳ್ಳಾರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 40 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ, ಹಾಗಾಗಿ ಜೋಶಿಯನ್ನು ಕಸಾಪದಿಂದ ವಜಗೊಳಿಸಬೇಕೆಂದು ಒತ್ತಾಯಿಸಿದರು. ಕೊನೆಗೆ ಮೊಟ್ಟೆ ವಿತರಣೆ ಮಾಡಿದರು.
ಮೇ 17 ರಂದು ಜೋಶಿ ವಿರುದ್ದ ಮೈಸೂರು ವಿಭಾಗ ಮಟ್ಟದ ಪ್ರತಿಭಟನಾ ಸಭೆಯನ್ನು ಮಂಡ್ಯದಲ್ಲಿ ಹಮ್ಮಿಕೊಂಡಿದ್ದೇವೆ, ಈ ಸಭೆಯಿಂದಲೇ ಜೋಶಿ ಅವನತಿ ಪ್ರಾರಂಭವಾಗಲಿದೆ, ಜೋಶಿ ಹೊರದೇಶದಿಂದ ಸಂಗ್ರಹಿಸಿದ ಹಣಕ್ಕೆ ಲೆಕ್ಕವಿಲ್ಲ, ಅಲ್ಲದೇ ವಿದೇಶಿ ಪ್ರವಾಸಕ್ಕೆ 20 ಲಕ್ಷ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ, ಅದಕ್ಕೆ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಕೆ ಬೋರಯ್ಯ, ಸುನಂದ ಜಯರಾಂ, ಮುದ್ದೇಗೌಡ, ಕೃಷ್ಣಪ್ರಕಾಶ್, ಕಾರಸವಾಡಿ ಮಹದೇವು, ಟಿ ಎಲ್ ಕೃಷ್ಣೆಗೌಡ, ಸಿ ಕುಮಾರಿ, ಮಂಗಲ ಲಂಕೇಶ್, ಯೋಗಣ್ಣ, ಜಯರಾಂ, ವೆಂಕಟಗಿರಿಯಯ್ಯ ನರಸಿಂಹಮೂರ್ತಿ, ಹುರುಗಲವಾಡಿ ರಾಮಯ್ಯ ಹಾಗೂ ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




