Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತೆ- ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನ ವಿರೋಧಿಸಿ ಪ್ರತಿಭಟನೆ

ಗುಜರಾತ್ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ ಚಿಟ್ ಕೊಟ್ಟ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮೀತ್ ಶಾ ಮತ್ತು ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ತೀಸ್ತಾ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ. ಇದು ಘೋರ ಅನ್ಯಾಯ. ಸರ್ವಾಧಿಕಾರಿ ದಬ್ಬಾಳಿಕೆ, ಆನಂದ್ ತೇಲ್ತುಂಬ್ಡೆ ಆದಿಯಾಗಿ ಅನೇಕ ಹೋರಾಟಗಾರರು ವರ್ಷಗಟ್ಟಲೆ ಜೈಲಿನಲ್ಲಿದ್ದಾರೆ. ಫಾ.ಸ್ಟ್ಯಾನ್ ಸ್ವಾಮಿಯವರನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇವೆ. ಈಗ ತೀಸ್ತಾ ಸರದಿ. ಈ ಸರ್ವಾಧಿಕಾರವನ್ನು ಸಹಿಸಿಕೊಳ್ಳುವಂತಿಲ್ಲ ಎಂದು ಇಂದು ರಾತ್ರಿ ಮಂಡ್ಯದ ಸಂಜಯ್ ವೃತ್ತದಲ್ಲಿ ಹಲವು ಪ್ರಗತಿಪರ ಸಂಘಟನೆಯ ಮುಂಖಡರುಗಳು ಪ್ರತಿಭಟನೆ ನಡೆಸಿದರು.

 

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ವಕೀಲರಾದ ಬಿ.ಟಿ.ವಿಶ್ವನಾಥ್ ತೀಸ್ತಾ ಸೆಟಲ್ವಾಡ್ ಅವರನ್ನು ಯಾವುದೇ ವಾರೆಂಟ್ ನೀಡದೆ ಆಕ್ರಮವಾಗಿ ಬಂಧಿಸಿದ್ದಾರೆ. 20002ರ ಗುಜರಾತ್ ನರಮೇಧ ದಲ್ಲಿ ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪತ್ರದ ಬಗ್ಗೆ SIT ಕ್ಲೀನ್ ಚಿಟ್ ಕೊಟ್ಟಿದ್ದನ್ನು ಪ್ರಶ್ನಿಸಿ ಆ ನರಮೇಧದಲ್ಲಿ ಭೀಕರವಾಗಿ ಹತ್ಯೆಯಾಗಿದ್ದ ಸಂಸದ ಎಷನ್ ಜಾಫ್ರಿ ಯವರ ಮಡದಿ ಜಾಕಿಯ ಜಾಫ್ರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ಅದರ ಬಗ್ಗೆ ತೀರ್ಪು ಪ್ರಕಟಿಸಿದ ನ್ಯಾ. ಕನ್ವಿಲ್ಕರ್ ನೇತೃತ್ವದ ಮೂರು ಸದಸ್ಯರ ಪೀಠ ಮೋದಿ ಮತ್ತವರ ಸಂಗಡಿಗರಿಗೆ ಕ್ಲೀನ್ ಚಿಟ್ ಕೊಟ್ಟಿದ್ದನ್ನು ಎತ್ತಿಹಿಡಿದಿದೆ.

ಇದನ್ನೇ ನೆಪವಾಗಿಟ್ಟುಕೊಂಡು ಗೃಹಮಂತ್ರಿ ಅಮಿತ ಶಾ ಅವರು ಕೆಲವು ಗಂಟೆಗಳ ಹಿಂದೆ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೂಡ ತೀಸ್ತಾ ಸೆಟಲ್ವಾಡ್ ಅವರ ಹೆಸರನ್ನು ಉಲ್ಲೇಖಿಸಿ ನಿಂದನಾತ್ಮಕ ಆರೋಪಗಳನ್ನು ಮಾಡಿದ್ದಾರೆ.

ಇದು ಪ್ರಸಾರವಾದ ಕೆಲವೇ ಗಂಟೆಗಳಲ್ಲಿ,  ಗುಜರಾತಿನ ATS ಪೊಲೀಸರು ಸುಳ್ಳು ಕೇಸಿನಲ್ಲಿ, ಕಾನೂನುಬಾಹಿರವಾಗಿ ತೀಸ್ತಾ ಅವರನ್ನು ಮುಂಬೈ ನಲ್ಲಿ ಕಷ್ಟಡಿಗೆ ತೆಗೆದುಕೊಂಡಿದ್ದಾರೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದಹರಣ, ವಾಕ್ ಸ್ವಾತಂತ್ರ್ಯವನ್ನು ಯಾರೆಲ್ಲಾ ಪ್ರಭುತ್ವದ ಆಕ್ರಮಗಳನ್ನು ಮಾತನಾಡುತ್ತಿರುವರೋ ಅವರೆಲ್ಲರನ್ನು ಬಾಯಿಮುಚ್ಚಿಸಿ ಜೈಲಿಗೆ ತಳ್ಳುವ ಕೆಲಸವನ್ನು ಕೇಂದ್ರಸರ್ಕಾರ ಮಾಡುತ್ತಿದೆ ಎಂದು ಪ್ರಗತಿಪರ ವಕೀಲರಾದ ಬಿ.ಟಿ.ವಿಶ್ವನಾಥ್ ಕಿಡಿಕಾರಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯರಾದ ಪೂರ್ಣಿಮರವರು ಮಾತನಾಡುತ್ತಾ, ತೀಸ್ತಾ ಸೆಟಲ್ವಾಡ್ ಅವರನ್ನು ಬಂದಿಸಿರುವುದು ಖಂಡನೀಯವಾದದ್ದು, ಮಾನವವ ಪರವಾಗಿ ಹೋರಾಟವನ್ನು ಮಾಡುವವರನ್ನು, ಸಾಮಾಜಿಕ ಪರವಾಗಿ ನ್ಯಾಯಗಳನ್ನು ಕೇಳುವವರನ್ನು ಮತ್ತು ಇಂತಹ ಹತ್ಯಾಕಾಂಡಗಳ ವಿರುದ್ದ ಧ್ವನಿಯೆತ್ತುವವರನ್ನು ಜೈಲಿಗೆ ಕಳುಹಿಸಿದ್ದಾರೆ. ಇದೇ ರೀತಿ ತೀಸ್ತಾ ಅವರಿಗೆ ಮಾಡಿದ್ದಾರೆ, ಇದನ್ನು ಕಠಿಣವಾಗಿ ವಿರೋಧಿಸುತ್ತೇವೆ. ಈ ಕಾನೂನುಬಾಹಿರವಾಗಿ ಬಂಧಿಸಿರುವ ತೀಸ್ತಾ ಸೆಟೆಲ್ವಾಡ್ ಅವರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನದಲ್ಲಿ ಒಂದು ದೊಡ್ಡಮಟ್ಟದ ಹೋರಾಟವನ್ನು ಮಾಡುತ್ತೇವೆ ಎಂದ ಆಗ್ರಹಿಸಿದರು.

ಪ್ತತಿಭಟನೆಯನ್ನು ಉದ್ದೇಶಿಸಿ  ರೈತ ಸಂಘದ ಸುನಂದ ಜಯರಾಂ ರವರು ಮಾತನಾಡಿ ಹೋರಾಟಗಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳು ನಡೆಯುತ್ತಿದೆ. ಇಡೀ ಕರ್ನಾಟಕದ ಎಲ್ಲಾ ಜನಪರ, ಜೀವಪರ ಸಂಘಟನೆಗಳು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ರೀತಿಯ ಮಾನವ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಏನಾದರೂ ನಮ್ಮ ಹೋರಾಟದ ಶಕ್ತಿಯನ್ನು ಕುಗ್ಗಿಸುತ್ತವೆ, ಈ ದೇಶದಲ್ಲಿ ಕೋಮುವಾದವನ್ನು ಬೇರುಬಿಡಿಸುತ್ತೇವೆ ಎಂಬ ಕಲ್ಪನೆಯೇನಾದರೂ ಇದ್ದರೆ ಅದು ಖಂಡಿತ ಸುಳ್ಳು. ತೀಸ್ತಾ ಸೆಟಲ್ವಾಡ್ ಅವರ ಈ ಬಂಧನದ ಕೃತ್ಯವನ್ನು ಖಂಡಿಸುತ್ತೇವೆ, ಸರ್ಕಾರ ಬಹುಬೇಗ ಏನೆಲ್ಲಾ ಬದಲಾವಣೆಯನ್ನು ಕ್ರಮವನ್ನು ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಂಡು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಸಮಾನ ಮನಸ್ಕರ ವೇದಿಕೆಯ ಮುಖಂಡರಾದ ವಕೀಲ ಲಕ್ಷಣ್ ಚೀರನಳ್ಳಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮೋದಿ ಮತ್ತು ಅಮಿತ್ ಷಾ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ನ್ಯಾಯವಾದಿ, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಮಾತನಾಡಿದರು.

ದಮನಿತರ ದನಿಯಾಗಿದ್ಕ ತೀಸ್ತಾ ಸೆಟಲ್ವಾಡ್ ಕರ್ನಾಟಕದ ಹಲವಾರು ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು ಮುಖ್ಯವಾಗಿ ಕರ್ನಾಟಕದಲ್ಲಿ ಬಾಬಾಬುಡನ್ ಗಿರಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಹಲವು ಪ್ರಗತಿಪರರನ್ನು, ಜೆಎನ್ ಯು ಪ್ರೊಪೆಸರ್ ಗಳನ್ನು,ಪ್ರಗತಿಪರ ಪತ್ರಕರ್ತರನ್ನು, ದೇಶದ ಹೆಸರಾಂತ ಬುದ್ದಿಜೀವಿ ಆನಂದ್ ತೇಲ್ ತುಂಬ್ಡೆಯವರನ್ನು, ಆಂಧ್ರಪ್ರದೇಶದ ವರವರರಾವ್, ಸಾಯಿಬಾಬಾ ರವರನ್ನು ಇದೇ ರೀತಿ ಯಾವುದೇ ಆಧಾರವಿಲ್ಲದ, ಸಾಭೀತು ಮಾಡಲಾಗದ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಹಾಕಿದ್ದಾರೆ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಕಿಡಿಕಾರಿದರು.

ಆದೇ ರೀತಿ ಇಂದು ನ್ಯಾಯವಾದಿ ತೀಸ್ತಾ ಸೆಟೆಲ್ವಾಡ್ ಅವರನ್ನು ಬಂಧಿಸಿದ್ದಾರೆ. ಎಲ್ಲಾ ಸಂವಿಧಾನದ ನಿಯಮಗಳನ್ನು ಗಾಳಿ ತೂರುತ್ತಿದ್ದಾರೆ. ತೀಸ್ತಾ ಸೆಟೆಲ್ವಾಡ್ ಅವರನ್ನು ಬಿಡುಗಡೆ ಮಾಡದಿದ್ದರೆ, ಜಿಲ್ಲಾದ್ಯಾಂತ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಶಿಲ್ಪ, ಕಮಲ, ಸಮಾನ ಮನಸ್ಕರ ವೇದಿಕೆಯ ಟಿ.ಡಿ.ನಾಗರಾಜು, ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ್, ನೆಲದನಿ ಬಳಗದ ಯೋಗೇಶ್, ಮಂಗಲ ಲಂಕೇಶ್, ರೈತ ಸಂಘದ ಮುದ್ದೇಗೌಡ ಮತ್ತಿತರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!