ಮಾಜಿ ಪ್ರಧಾನಿ ಹಾಗೂ ಜಾ.ದಳ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ವಿರುದ್ಧ ಜಾ.ದಳ ಮುಖಂಡ ಬಿ.ಎಂ.ಕಿರಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ ತಾಲ್ಲೂಕಿನ ಕಾರ್ಯಕ್ರಮವೊಂದರಲ್ಲಿ ರಾಜಣ್ಣ ನಾಲಗೆ ಹರಿ ಬಿಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮನೆ ಬಾಗಿಲು ಕಾದು ಕುಳಿತಿದ್ದ ವ್ಯಕ್ತಿ ರಾಜಣ್ಣ.ಇಂದು ದೇವೇಗೌಡರು ಈ ರಾಜ್ಯಕ್ಕೆ, ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದನ್ನು ಮರೆತು, ಬಾಯಿಗೆ ಬಂದಂತೆ ಮಾತನಾಡಿರುವುದು ಆತನ ಮನಃಸ್ಥಿತಿಯನ್ನು ತೋರಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಈ ವ್ಯಕ್ತಿ ಕೂಡಲೇ ದೇವೇಗೌಡರ ಕಾಲಿಗೆ ಬಿದ್ದು ಕ್ಷಮೆ ಕೇಳದಿದ್ದರೆ,ಆತ ಎಲ್ಲೇ ಸಿಕ್ಕಿದರೂ ನಮ್ಮ ಪಕ್ಷದ ಕಾರ್ಯಕರ್ತರು ಸರಿಯಾದ ಪಾಠ ಕಲಿಸದೆ ಬಿಡುವುದಿಲ್ಲ. ಕಾಂಗ್ರೆಸ್ ನಾಯಕರು ಕೂಡಲೇ ರಾಜಣ್ಣನಿಗೆ ಬುದ್ಧಿ ಹೇಳಬೇಕೆಂದು ಕಿರಣ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಾ.ದಳ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಐನೋರಹಳ್ಳಿ ಮಲ್ಲೇಶ್, ಬಾಲಚಂದ್ರು , ರಾಜೇಶ್, ಸಾಧುಗೋನಹಳ್ಳಿ ಲೋಕೇಶ್, ಪಾಪಣ್ಣಿ, ಅನಿಲ್ ಮತ್ತಿತರರಿದ್ದರು.