ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಮಾಲೀಕರಾದ ಪುಷ್ಷಲತಾ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ರವಿಕುಮಾರ್ ಎಂಬ ಆರೋಪಿಯನ್ನು ಹತ್ಯೆ ಮಾಡಿದ 24 ಗಂಟೆಯಲ್ಲಿಯೇ ಕೆ.ಆರ್.ಪೇಟೆ ಪೋಲಿಸರು ಬಂಧಿಸಿದ್ದಾರೆ. ಕಿಕ್ಕೇರಿ ಹೋಬಳಿಯ ಉದ್ದಿನ ಮಲ್ಲನ ಹೊಸೂರು ಗ್ರಾಮದ ರವಿಕುಮಾರ್ ಹೆಚ್.ಜೆ. ಎಂಬಾತನೇ ಪುಷ್ಪಲತಾ ಅವರ ಕೊಲೆ ಆರೋಪಿ.
ಆರೋಪಿ ರವಿಕುಮಾರ್ ಹಾಗೂ ಕಿಕ್ಕೇರಿಯ ಶ್ರೀಕಾಂತ್ ಮೆಡಿಕಲ್ ಸ್ಟೋರ್ ನ ಪುಷ್ಪಲತಾ ಅವರಿಗೂ ಹಣಕಾಸಿನ ವ್ಯವಹಾರದಲ್ಲಿ ಉಂಟಾದ ವೈಮನಸ್ಯವೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ರವಿಕುಮಾರ್ ಪುಷ್ಪಲತಾ ಅವರ ಜಮೀನಿನಲ್ಲಿ ಟ್ಯಾಕ್ಟರ್ ಓಡಿಸಿಕೊಂಡಿದ್ದ.
ಈತನ ಹೆಸರಿಗೆ ಪುಷ್ಪಲತಾ ಅವರು ಸೈಟು ಮಾಡಿದ್ದಲ್ಲದೆ,ಸಾಕಷ್ಟು ನಗದು ಹಣವನ್ನು ನೀಡಿದ್ದರು.ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿತ್ತು. ನಿನ್ನೆ ಜೂನ್ 15ರಂದು ಪುಷ್ಪಲತಾ ಅವರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಆರೋಪಿ ರವಿಕುಮಾರ್ ಪುಷ್ಪಲತಾ ಅವರ ಮನೆಗೆ ಬಂದು ಅವರ ಕತ್ತನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಪುಷ್ಪಲತಾ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್,ಎಎಸ್ಪಿ ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿದ್ದ ಸಿಪಿಐ ದೀಪಕ್, ಪಿಎಸ್ಐಗಳಾದ ಸಿದ್ದಲಿಂಗ ಬಾನಸೆ, ಸುನಿಲ್, ಬಸವರಾಜ್, ಪೊಲೀಸ್ ಸಿಬ್ಬಂದಿಗಳಾದ ಕುಮಾರ್, ವಿನೋದ್, ಮಹಾದೇವ, ಮಂಜುನಾಥ, ಪ್ರದೀಪ್, ರವಿಕಿರಣ್,ಲೋಕೇಶ್, ವಿನಯ್ ಕುಮಾರ್ ಅವರ ತಂಡ ಪುಷ್ಪಲತಾ ಅವರು ಕೊಲೆಯಾದ 24 ಗಂಟೆಯಲ್ಲಿಯೇ ಆರೋಪಿ ರವಿಕುಮಾರನ್ನು ಬಂಧಿಸಿದ್ದಾರೆ. ಕೆ.ಆರ್.ಪೇಟೆ ಪೋಲೀಸರ ಕಾರ್ಯಾಚರಣೆಯನ್ನು ಎಸ್ಪಿ ಯತೀಶ್ ಪ್ರಶಂಸಿದ್ದಾರೆ.
ಘಟನೆ ವಿವರ
ಕಿಕ್ಕೇರಿ ಪಟ್ಟಣದಲ್ಲಿರುವ ಮೈಸೂರು- ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಮಾಲೀಕರಾದ ಪುಷ್ಪಲತಾ@ ನಳಿನ (45) ಅವರನ್ನು ಅವರ ಮನೆಯಲ್ಲಿಯೇ ಕತ್ತು ಕುಯ್ದು ಭೀಕರವಾಗಿ ನಿನ್ನೆ ಹತ್ಯೆ ಮಾಡಲಾಗಿತ್ತು.ಹಾಡು ಹಗಲೇ ನಡೆದಿರುವ ಭೀಕರ ಹತ್ಯೆಯಿಂದ ಕಿಕ್ಕೇರಿ ಪಟ್ಟಣ ನಾಗರಿಕರು ಬೆಚ್ಚಿ ಬಿದ್ದಿದ್ದರು.
ಕಿಕ್ಕೇರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀಕಾಂತ್ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಪುಷ್ಪಲತಾ ಅವರ ಪತಿ ನಿಧನದ ಬಳಿಕ ಅವರೇ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು.ನಿನ್ನೆ ಬೆಳಿಗ್ಗೆ ಕೂಡ ಅವರೇ ಮೆಡಿಕಲ್ ತೆರೆದು ವ್ಯಾಪಾರ ಮಾಡಿ, ತಿಂಡಿ ತಿನ್ನಲು ಅಂಗಡಿಯ ಎದುರುಗಡೆ ಇರುವ ಮನೆಗೆ ಹೋಗಿದ್ದರು. ಮಧ್ಯಾಹ್ನವಾದರೂ ಮೆಡಿಕಲ್ ಸ್ಟೋರ್ ಗೆ ಬರದ ಹಿನ್ನೆಲೆಯಲ್ಲಿ ಮನೆಗೆ ಹೋಗಿ ನೋಡಿದಾಗ ಪುಷ್ಪಲತಾ ಅವರು ಬರ್ಬರವಾಗಿ ಕೊಲೆಯಾಗಿದ್ದರು.
ಕಿಕ್ಕೇರಿ ಹೋಬಳಿಯ ಡಾಣನಹಳ್ಳಿ ಗ್ರಾಮದ ಪುಷ್ಪಲತಾ ಅವರು ಪತಿಯ ನಿಧನದ ನಂತರ ತಾವೇ ಮೆಡಿಕಲ್ ಸ್ಟೋರ್ ನಡೆಸುತ್ತಿದರು.ಅವರ ತೋಟ, ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ ರವಿಕುಮಾರ್ ಎಂಬಾತನೇ ಈಗ ಅವರನ್ನು ಹತ್ಯೆ ಮಾಡಿದ್ದು,ಪೋಲಿಸರ ಬಲೆಗೆ ಬಿದ್ದಿದ್ದಾನೆ.