Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಅಸ್ಮಿತೆ ಉಳಿಸುವುದು ಅತ್ಯಾವಶ್ಯಕ : ಅಶೋಕ್ ಜಯರಾಂ

ತಮಿಳಿನ ನಂತರ ಪ್ರಾಚೀನ ಭಾಷೆಯಾಗಿರುವ ಕನ್ನಡದ ಘನತೆ ಹಾಗೂ ಅಸ್ಮಿತೆ ಉಳಿಸುವುದು ಅಗತ್ಯವೆಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ಜಯರಾಂ ಹೇಳಿದರು.

ಮಂಡ್ಯ ನಗರದ ಜಿಲ್ಲಾ ಬಾಲಭವನದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕೋಟಿ ಕಂಠ ಗಾಯನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನ ಅಭಿಯಾನವನ್ನು ಆಚರಿಸಲು ಕರೆಕೊಟ್ಟ ಹಿನ್ನಲೆಯಲ್ಲಿ ವಿಶ್ವದ ನಾನಾ ರಾಷ್ಟ್ರಗಳಲ್ಲಿರುವ ಕೋಟಿ ಕೋಟಿ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ನುಡಿದರು.

ದೈನಂದಿನ ಬದುಕಿನಲ್ಲಿ ಕನ್ನಡ ಬಳಕೆಯನ್ನು ಮೈಗೂಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕೋಟಿ ಕಂಠ ಗಾಯನ ಅಭಿಯಾನವನ್ನು ರಾಜ್ಯ ಸರ್ಕಾರ ಮಾಡಿದೆ, ಈ ಸಂಭ್ರಮ ಕೇವಲ ವರ್ಷದ ಒಂದು ದಿನಕ್ಕೆ ಮೀಸಲಾಗದೆ  ಪ್ರತಿನಿತ್ಯ ಕನ್ನಡ ಬಳಕೆ ಮಾಡಬೇಕೆಂದು ಹೇಳಿದರು.

ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್ ಮಾತನಾಡಿ, ಯಾವುದೇ ಭಾಷೆ ಉಳಿವಿಗೆ ಪದಗಳ ಬಳಕೆ ಮಾಡುವುದು ಬಹಳ ಮುಖ್ಯ, ಕನ್ನಡ ಭಾಷೆಗೆ ಐತಿಹ್ಯವಿದೆ, ವೈಭವವಿದೆ, ಮಾತನಾಡಿದಂತೆ ಬರೆಯುವ ಅಕ್ಷರಗಳಿವೆ, ಹೆಚ್ಚು ಹೆಚ್ಚು ಕನ್ನಡ ಪದಗಳನ್ನು ಬಳಸಿದರೆ ಬೆಳೆಯುತ್ತ ಉಳಿದುಕೊಳ್ಳುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಗಾಯಕರು, ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ-ಸಂಸ್ಥೆಗಳ ಸಂಘಟಕರು, ನಾಗರೀಕರು ಪಾಲ್ಗೊಂಡು ಮಾತಾಡ್ ಮಾತಾಡು ಕನ್ನಡ- ಕೋಟಿ ಕಂಠ ಗಾಯನದಲ್ಲಿ ಒಟ್ಟು 5 ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಪಿ. ಮಹೇಶ್, ನಗರಸಭಾ ಸದಸ್ಯರಾದ ಶಿವಕುಮಾರ್‌ಕೆಂಪಯ್ಯ, ಪ್ರಸನ್ನ, ಗಾಯಕರಾದ ಹನಿಯಂಬಾಡಿ ಶೇಖರ್, ವೈರಮುಡಿ, ಯರಹಳ್ಳಿಪುಟ್ಟಸ್ವಾಮಿ, ನೀನಾಪಟೇಲ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!