ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕರ್ನಾಟಕ ಜನಶಕ್ತಿ ಸಂಘಟನೆ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಮೂಲಭೂತ ಸೌಕರ್ಯಗಳಾದ ಭೂಮಿ ಮತ್ತು ಹಕ್ಕುಪತ್ರಗಳ ಕುರಿತು ಪ್ರತಿಭಟನೆ ನಡೆಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಸಿದ್ದರಾಜುರವರು ಮಾತನಾಡಿ,ಜಿಲ್ಲಾಡಳಿತ ಮತ್ತು ಶಾಸಕರಾದ ಎಂ. ಶ್ರೀನಿವಾಸ್ ರವರು ಸ್ಲಂ ಜನರ ಮತವನ್ನು ಪಡೆದುಕೊಂಡು ಅವರನ್ನು ಅನಾಥರನ್ನಾಗಿ ಮಾಡಿದ್ದಾರೆ. ಕರ್ನಾಟಕ ಜನಶಕ್ತಿ ಸಂಘಟನೆ ಹತ್ತಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕುರಿತು ಹೋರಾಟ ಮಾಡುತ್ತಲೇ ಇದೆ. ಆದರೆ ಜಿಲ್ಲಾಡಳಿತ ಮತ್ತು ಶಾಸಕರು ಯಾವುದೇ ರೀತಿಯ ಸೌಕರ್ಯಗಳನ್ನು ಕೊಡದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಡಿಸೆಂಬರ್ 1 ರಂದು ಅಮರಣಾಂತ ಸತ್ಯಾಗ್ರಹವನ್ನು ನಡೆಸುತ್ತಿದ್ದಾಗ ಇದೇ ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ನಿಮ್ಮ ಮೂಲಭೂತ ಸೌಲಭ್ಯಗಳಾದ ಭೂಮಿ, ವಸತಿ,ಹಕ್ಕುಪತ್ರ ಹಾಗೂ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಭರವಸೆಯ ಮಾತುಗಳನ್ನು ನೀಡಿದ್ದರು .ಆದರೆ ಇವರು ಹೇಳಿದ ಮಾತಿನಂತೆ ನಡೆದುಕೊಳ್ಳದೆ, ಕಾಳಿಕಾಂಬ ಸ್ಲಂ ನಲ್ಲಿ 2 ಶೌಚಾಲಯಗಳನ್ನು ಬಿಟ್ಟರೆ ಬೇರೆ ಇನ್ಯಾವ ಕೆಲಸವು ಇವರಿಂದ ಆಗಿಲ್ಲ ಎಂದು ಟೀಕಿಸಿದರು.
ಮಹಿಳಾ ಮುನ್ನಡೆಯ ಮುಖಂಡರಾದ ಪೂರ್ಣಿಮಾ ರವರು ಮಾತನಾಡಿ ಶಾಸಕರಿಗೆ ಮತ್ತು ಜಿಲ್ಲಾಡಳಿತಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ, ಬಡವರ ಪರವಾಗಿ ಕೆಲಸ ಮಾಡಬೇಕಾಗಿತ್ತು. ಆದರೆ ದ್ರೋಹ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಶೆಡ್ ಗಳಲ್ಲಿ ವಾಸಮಾಡುತ್ತಿರುವ ಶ್ರಮಿಕರ ಮನೆಗಳಿಗೆ ಭದ್ರತೆ ಇಲ್ಲ, ಮಳೆಗಾಲದಲ್ಲಿ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗುವುದಿಲ್ಲ. ಮಕ್ಕಳು ಓದಲು ಮತ್ತು ಮಲಗೋದು ಕಷ್ಟವಾಗಿದೆ. ಎಷ್ಟೋ ಮನೆಗಳಲ್ಲಿ ವಿದ್ಯುತ್ ಇಲ್ಲ. ಹೀಗೆ ಇವರ ಕಷ್ಟಗಳು ನೂರೆಂಟು ಇದ್ದರೂ ಅದನ್ನು ಪರಿಹರಿಸಲು ಯಾರೂ ಮುಂದಾಗಿಲ್ಲ ಎಂದು ಕಿಡಿ ಕಾರಿದರು.
ಬಡವರ ಬಗ್ಗೆ ಕಾಳಜಿ ಇರುವ ಶಾಸಕರಾಗಿದ್ದರೆ ಒಂದು ದಿನ ಸಾಧ್ಯವಾದರೆ ಬಡವರ ಮನೆಗೆ ಬಂದು ತಂಗಲಿ. ಆಗಲಾದರೂ ಅವರಿಗೆ ಬಡವರ ಬದುಕು ಬವಣೆಗಳು ಅರ್ಥವಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್. ಕೃಷ್ಣಪ್ಪ. ವಿದ್ಯಾರ್ಥಿ ಸಂಘಟನೆಯ ಅಂಜಲಿ, ಮಂಜುಳಮ್ಮ. ನಿಂಗಮ್ಮ. ಶಿಲ್ಪ.ಇನ್ನೂ ಹಲವರು ಇದ್ದರು.
ಇದನ್ನು ಓದಿ : ಜಿಲ್ಲೆಯ ಚಳವಳಿಗಳೊಂದಿಗೆ ನಿರಂತರ ಒಡನಾಟವಿಟ್ಟುಕೊಂಡಿದ್ದ ಜಿ. ವಿ. ಶ್ರೀರಾಮರೆಡ್ಡಿ ನಿಧನ