Friday, September 20, 2024

ಪ್ರಾಯೋಗಿಕ ಆವೃತ್ತಿ

ಮಿಮ್ಸ್ ಪ್ರಯೋಗಾಲಯ ಖಾಸಗಿಗೆ ವಹಿಸಿದ್ದರಿಂದ ₹7 ಕೋಟಿ ಹೊರೆ; ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ


  • ಬಿಪಿಎಲ್, ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳಿಗೆ ಸಂಪೂರ್ಣ ರಿಯಾಯಿತಿ ರದ್ದು

  • ಪರೀಕ್ಷಾ ದರ ಏರಿಸಿ ಖಾಸಗಿ ಕಂಪನಿಗಳ ತುಂಬಿಸಲಾಗುತ್ತಿದೆ ಎಂಬ ಆರೋಪ

ಈವರೆಗೆ ವಾರ್ಷಿಕ ಎರಡೂವರೆ ಕೋಟಿ ರೂಪಾಯಿಗಳಲ್ಲಿ ಮುಗಿದು ಹೋಗುತ್ತಿದ್ದ ಮಂಡ್ಯ ಜಿಲ್ಲಾಸ್ಪತ್ರೆ (ಮಿಮ್ಸ್) ರೋಗ ಪರೀಕ್ಷೆ ಪ್ರಯೋಗಾಲಯವನ್ನು ಖಾಸಗಿಯವರಿಗೆ ವಹಿಸಿದ್ದಾಗಿನಿಂದ ವರ್ಷಕ್ಕೆ ಏಳು ಕೋಟಿ ಹೊರೆ ಮಿಮ್ಸ್ ಮೇಲೆ ಮೇಲೆ ಬಿದ್ದಿದೆ. ಆದ್ದರಿಂದ ಪ್ರಯೋಗಾಲಯವನ್ನು ಖಾಸಗಿಯವರಿಗೆ ವಹಿಸಿರುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರುನಾಡ ಸೇವಕರು ಸಂಘಟನೆಯ ಕಾರ್ಯಕರ್ತರು ಸೋಮವಾರ ಮಿಮ್ಸ್ ಎದುರು ಪ್ರತಿಭಟನೆ ನಡೆಸಿದರು.

ಪ್ರಯೋಗಾಲಯವನ್ನು ಖಾಸಗಿಯವರಿಗೆ ವಹಿಸಿರುವುದರಿಂದ ಈವರೆಗೆ ಬಿಪಿಎಲ್ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಕುಟುಂಬಗಳಿಗೆ ಇದ್ದ ಸಂಪೂರ್ಣ ರಿಯಾಯಿತಿಯನ್ನು ರದ್ದುಪಡಿಸಲಾಗಿದೆ. ಇನ್ನುಳಿದ ಪರೀಕ್ಷಾ ದರ ಏರಿಸಿ ಖಾಸಗಿ ಕಂಪನಿಗಳ ತುಂಬಿಸಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರ ಜೇಬಿನಿಂದ ಹಣ ಕಸಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ್ರಹಗಳು

ಅಪಘಾತ ಹಾಗೂ ತುರ್ತುಚಿಕಿತ್ಸಾ ಘಟಕ ಸೇರಿದಂತೆ ಎಲ್ಲ ವಿಭಾಗದಲ್ಲೂ ಕರ್ತವ್ಯ ನಿರತ ವೈದ್ಯರು ಸದಾ ಹಾಜರಿರುವಂತೆ ನೋಡಿಕೊಳ್ಳಬೇಕು.

ಸ್ತ್ರೀ ಮತ್ತು ಹೆರಿಗೆ ವಿಭಾಗದಲ್ಲಿ ಸುಸಜ್ಜಿತ ಮಕ್ಕಳ ತೀವ್ರ ಘಟಕ ಸ್ಥಾಪಿಸಬೇಕು. ಕರ್ತವ್ಯ ನಿರತಹಿರಿಯ ವೈದ್ಯರು ಹಾಜರಿರಬೇಕು.

ಹೊರರೋಗಿ ವಿಭಾಗದಲ್ಲಿ ಕಾರ್ಪೋರೇಟ್ ಮಾದರಿಯಲ್ಲಿ ಸುಗಮ ನಿರ್ವಹಣೆ ನಡೆಸಬೇಕು. ಒಳರೋಗಿ ವಿಭಾಗದಲ್ಲಿ ದಿನಕ್ಕೆ ಎರಡು ಬಾರಿ ವೈದ್ಯರು ತಪಾಸಣೆ ನಡೆಸಬೇಕು.

ವೆಂಟಿಲೇಟರ್ ಇದ್ದಾಗಿಯೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕುವ.ಎಲ್ಲದಕ್ಕು ಆಸ್ಪತ್ರೆ ಹೊರಗಡೆ ಮೆಡಿಕಲ್ ಹಾಗೂ ಡಯಾಗ್ನೋಷ್ಟಿಕ್ ಕೇಂದ್ರಗಳಿಗೆ ಅಟ್ಟುವ ಪ್ರವೃತ್ತಿ ನಿಲ್ಲಬೇಕು. ಪ್ರತಿ ವಿಭಾಗದಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಹ ಟ್ರಾಮಾಕೇರ್ ನಿರ್ಮಾಣ ಹಾಗೂ ಜಯದೇವ ಮಾದರಿಯ ಹೃದ್ರೋಗ ಘಟಕ ಸ್ಥಾಪನೆಗೆ ಕ್ರಮವಹಿಸಬೇಕು. ಈ ಸಂಬಂದ ಈಗಾಗಲೇ ಬಿಡುಗಡೆಯಾಗಿರುವ ಹಣ ಬಳಕೆಗೆ ಅನುವಾಗುವಂತೆ ತಮಿಳು ಕಾಲೋನಿ ಪ್ರದೇಶವನ್ನು ಹೈಕೋರ್ಟ್ ಆದೇಶದಂತೆ ಆಸ್ಪತ್ರೆಯ ವಶಕ್ಕೆ ಪಡೆಯಬೇಕು.

ಕ್ಯಾನ್ಸರ್ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ABRK ಅಡಿಯಲ್ಲಿ ಸರಕಾರಿ ಹಣ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಪೂರ್ಣಪ್ರಮಾಣದ ರೇಡಿಯೋ ಥೆರಪಿಸ್ಟ್ ನೇಮಕವಾಗಬೇಕು.

ರೋಗ ಪತ್ತೆ ನಿರ್ವಹಣೆ ಹಾಗೂ ರೋಗಪತ್ತೆಗಾಗಿ ಬಳಸುವ ರಾಸಯನಿಕಗಳ ಪೂರೈಕೆ ಹಾಗೂ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದ್ದು ಇದರಿಂದ ಆಸ್ಪತ್ರೆಗೆ ಪ್ರತೀ ವರ್ಷ ಐದು ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ರೋಗಪತ್ತೆ ಪ್ರಯೋಗಾಲಯದ ನಿರ್ವಹಣೆಯನ್ನು ನೇರವಾಗಿ ಆಸ್ಪತ್ರೆಯ ವತಿಯಿಂದ ನಿರ್ವಹಿಸಬೇಕು.

ಬಯೋಮೆಟ್ರಿಕ್ ಹಾಜರಾತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ABRK ದತ್ತಾಂಶ ಸಂಗ್ರಹ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿ, ಪ್ರತಿ ತಿಂಗಳು ಆಸ್ಪತ್ರೆಗೆ ಹೆಚ್ಚುವರಿ ಎರಡು ಲಕ್ಷ ಹೊರೆ ಬೀಳುತ್ತಿರುವುದನ್ನು ತಪ್ಪಿಸಲು ಮಿಮ್ಸ್ ವತಿಯಿಂದಲೇ ನಿರ್ವಹಿಸಬೇಕು.

ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಡೆದಿರುವ ಸಿವಿಲ್ ಕಾಮಗಾರಿಗಳ ಅಕ್ರಮದ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಬೇಕು.

ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭದ್ರತಾ ಸೇವೆ ಒದಗಿಸಿರುವ ಕೆಎಸ್ಎಫ್ -೯ ಸಂಸ್ಥೆ ನಕಲಿ ದಾಖಲೆ ಒದಗಿಸಿ ಟೆಂಡರ್ ಪಡೆದಿದ್ದೂ ಈ ಸಂಬಂದ ಚೆಸ್ಕಾಂ ನೀಡಿದ್ದ ಸೇವಾಪ್ರಮಾಣ ಪತ್ರವನ್ನು ಹಿಂಪಡೆದಿದ್ದರೂ ಸದರಿ ಏಜೆನ್ಸಿ ವಿರುದ್ದ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು.

ನಕಲಿ ಭೋದನಾ ಪ್ರಮಾಣಪತ್ರ ನೀಡಿದ ವೈದ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಪ್ರಯತ್ನಕ್ಕೆ ತಡೆಹಾಕಿ.ನಕಲಿ ಭೋದನಾ ಪ್ರಮಾಣಪತ್ರದ ಕುರಿತು ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಬೇಕು

ಈ ಎಲ್ಲ ಆಗ್ರಹಗಳ ಜಾರಿ ಸಂಬಂದ ಅಧಿಕಾರಿಗಳು ಸಚಿವರು ಹಾಗೂ ಸಂಘಟನೆಗಳ ಪ್ರತಿನಿಧಿಗಳ ಉನ್ನತಮಟ್ಟದ ಸಭೆ ಆಯೋಜಿಸಬೇಕು.

ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಹಾಲಿ ಮಿಮ್ಸ್ ನಿರ್ದೇಶಕರನ್ನು ಹುದ್ದೆಯಿಂದ ತೆರವುಗೊಳಿಸಿ ಅರ್ಹರನ್ನು ನಿರ್ದೇಶಕ ಹುದ್ದೆಗೆ ನೇಮಿಸಬೇಕು.

ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಹಾಗೂ ಆಡಳಿತಾಧಿಕಾರಿ ಜಾನ್ ಸನ್ ಅವರಿಗೆ ಮನವಿ ಸಲ್ಲಿಸಿದರು.

₹4 ಕೋಟಿ ಹೊರೆ ಬಿದ್ದಿದೆ

ಈ ಸಂದರ್ಭ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಬಿಪಿಎಲ್ ಕುಟುಂಬಗಳಿಗೆ ಈವರೆಗೆ ಇದ್ದ ಚಿಕಿತ್ಸಾ ವಿನಾಯತಿಯನ್ನು ರದ್ದುಪಡಿಸಿ ಶೇ.50ರಷ್ಟು ದರ ವಸೂಲು ಮಾಡುತ್ತಿರುವುದು ಬಡವರ ಜೇಬಿಗೆ ಕನ್ನ ಹಾಕಿದಂತಾಗಿದೆ. ಈವರಗೆ ಮಿಮ್ಸ್ ವತಿಯಿಂದಲೆ ರೋಗ ಪರೀಕ್ಷೆ ಹಾಗು ಚಿಕಿತ್ಸೆ ನೀಡಲಾಗುತಿತ್ತು. ಈಗ ಅಬಾಟ್ ಎಂಬ ಕಂಪನಿಗೆ ಕೇಂದ್ರ ಪ್ರಯೋಗಾಲಯದ ನಿರ್ವಹಣೆ ನೀಡಲಾಗಿದೆ ಇದರಿಂದ ಮಿಮ್ಸ್ ಗೆ ವಾರ್ಷಿಕ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿ ಹೊರೆ ಬಿದ್ದಿದೆ ಎಂದು ದೂರಿದರು.

ಅಧಿಕಾರಿಗಳು ಹಾಗೂ ಏಜೆನ್ಸಿ ಸಾರ್ವಜನಿಕರ ಹಣ ಲಪಟಾಯಿಸುವ ಸಲುವಾಗಿ ರೋಗ ಪರೀಕ್ಷೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಎಬಿ ಆರ್ ಕೆ ದತ್ತಾಂಶ ನಿರ್ವಹಣೆಯನ್ನು ಸಹ ಮಾಜಿ ಮುಖ್ಯಮಂತ್ರಿ ಪುತ್ರನಿಗೆ ಸೇರಿದ ಏಜೆನ್ಸಿಗೆ ಗುತ್ತಿಗೆ ನೀಡಿ ಸಾರ್ವಜನಿಕ ಆಸ್ಪತ್ರೆಯನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕರ್ತವ್ಯದ ವೇಳೆಯಲ್ಲಿ ಹಾಜರಿರಬೇಕಾದ ವೈದ್ಯರು ಆಸ್ಪತ್ರೆ ಬದಲು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಇದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರೆ ನಿರ್ದಿಷ್ಟ ದೂರು ಕೊಡಿ ಎನ್ನುತ್ತಿದ್ದಿರಿ .ಲಂಚಗುಳಿತನ ಕರ್ತವ್ಯ ಭ್ರಷ್ಟತೆಯನ್ನು ತಪ್ಪಿಸುವ ಬದಲು ಸಾರ್ವಜನಿಕರ ಮೇಲೆ ಹೊಣೆಗಾರಿಕೆ ಹಾಕುವ ನೀವು ಮೊದಲು ರಾಜೀನಾಮೆ ಕೊಡಿ ಸಮರ್ಥರು ಬರಲಿ ಎಂದು ಆಸಮಧಾನ ವ್ಯಕ್ತಪಡಿಸಿದರು.

ಕೆಎಸ್ ಎಫ್-9 ಏಜೆನ್ಸಿಯ ನಕಲಿ ಸೇವಾಪ್ರಮಾಣ ಪತ್ರ

ಪ್ರಭಾವಿ ರಾಜಕಾರಿಣಿಗೆ ಸೇರಿದ ಕೆಎಸ್ ಎಫ್-9 ಎಂಬ ಏಜೆನ್ಸಿ ನಕಲಿ ಸೇವಾಪ್ರಮಾಣ ಪತ್ರ ಸಲ್ಲಿಸಿ ಭದ್ರತಾ ಏಜೆನ್ಸಿ ಗುತ್ತಿಗೆ ಪಡೆದಿದೆ. ಈ ಸಂಸ್ಥೆಗೆ ನಕಲಿ ಸೇವಾ ಪ್ರಮಾಣ ಪತ್ರ ನೀಡಿದ್ದ ಚೆಸ್ಕಾಂ ಸೇವಾಪ್ರಮಾಣ ಪತ್ರ ಹಿಂಪಡೆದಿದ್ದರು ಏಜೆನ್ಸಿ ವಿರುದ್ದ ಯಾವುದೇ ಕ್ರಮ ಜರುಗಿಸಿಲ್ಲ. ಈ ಎಲ್ಲ ಅಕ್ರಮಗಳಲ್ಲಿ ಮಿಮ್ಸ್ ನಿರ್ದೇಶಕ ಮಹೇಂದ್ರ ಹಾಗೂ ಆಡಳಿತಾಧಿಕಾರಿ ಜಾನ್ ಸನ್ ಶಾಮೀಲಾಗಿದ್ದಾರೆಂದು ಅಧಿಕಾರಿಗಳ ಎದುರೇ ಆರೋಪಿಸಿದರು.

ಸುಳ್ಳು ಭೋದನಾ ಪ್ರಮಾಣಪತ್ರ ಸಲ್ಲಿಸಿ ಆರ್ಥಿಕ ಅನುಕೂಲ ಪಡೆಯಲು ಮುಂದಾಗಿರುವ ವೈದ್ಯರಿಗೆ ಆರ್ಥಿಕ ಸೌಲಭ್ಯ ತಡೆಹಿಡಿಯಬೇಕು. ಬಿಪಿಎಲ್ ಕುಟುಂಬಗಳಿಗೆ ಚಿಕಿತ್ಸೆಯಲ್ಲಿ ವಿನಾಯತಿ ಮುಂದುವರಿಸಬೇಕು. ತಮಿಳು ಕಾಲೋನಿ ಪ್ರದೇಶವನ್ನು ವಶಕ್ಕೆ ಪಡೆದು ಟ್ರಾಮಾಕೇರ್ ಹಾಗೂ ಜಯದೇವ ಮಾದರಿಯ ಆಸ್ಪತ್ರೆಯನ್ನು ನಿರ್ಮಿಸಬೇಕು ಕ್ಯಾನ್ಸರ್ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನೇಮಕಾತಿ ನಡೆಸುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ನಿರ್ದೇಶಕ ಡಾ.ಮಹೇಂದ್ರ, ಬಿಪಿಎಲ್ ಕುಟುಂಬಗಳಿಗೆ ಚಿಕಿತ್ಸೆಯಲ್ಲಿ ಇದ್ದ ವಿನಾಯಿತಿಯನ್ನು ಮುಂದುವರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ದ ಕ್ರಮ ಜರುಗಿಸಲಾಗುವುದು. ತಮಿಳು ಕಾಲೋನಿ ಪ್ರದೇಶ ವಶಕ್ಕೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಅಗತ್ಯ ಪ್ರಕ್ರಿಯೆ ನಡೆಸಲಾಗುವುದು. ನಕಲಿ ಸೇವಾ ಪ್ರಮಾಣಪತ್ರ ಸಲ್ಲಿಸಿರುವ ಕೆಎಸ್ ಎಫ್-9 ವಿರುದ್ದ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಾರದೊಳಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ತಪ್ಪಿದಲ್ಲಿ ಬೆಂಗಳೂರಿನಲ್ಲಿ ವೈದ್ಯಕೀಯ ಸಚಿವರ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಮಂಡ್ಯ ನಗರಾಧ್ಯಕ್ಷ ಎಂ.ಎನ್ ಚಂದ್ರು, ಮದ್ದೂರು ನಗರ ಅಧ್ಯಕ್ಷ ಸುರೇಶ್, ಮಂಡ್ಯ ಗ್ರಾಮಾಂತರ ಮುಖಂಡರಾದ ತಿಮ್ಮೇಗೌಡ, ಜೋಗಿಗೌಡ, ಸಿದ್ದೇಗೌಡ, ಶೇಖರ್ ಕರ್ನಾಟಕ ರಕ್ಷಣಾ ವೇದಿಕೆಯ ಎಚ್ ಡಿ ಜಯರಾಂ, ಆಟೋ ಚಾಲಕರ ಸಂಘದ ಹೊಸಳ್ಳಿ ಸತ್ಯ, ಕೃಷ್ಣ, ಪುರುಷೋತ್ತಮ, ಟಿ.ಡಿ.ನಾಗರಾಜು ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!