Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸುಸ್ಥಿರ ಅಭಿವೃದ್ಧಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಾತ್ರ ಮಹತ್ವದ್ದು: ನರೇಂದ್ರಸ್ವಾಮಿ

ಪರಿಸರ ಸಂರಕ್ಷಣೆ ಮತ್ತು ಕರ್ನಾಟಕದ ಸುಸ್ಥಿರ ಅಭಿವೃದ್ಧಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರ ಅತ್ಯಂತ ಮಹತ್ವದ್ದು. ಕಳೆದ ಐದು ದಶಕಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಸುಸ್ಥಿರ ಪ್ರಗತಿಗೆ ಪಾಲುದಾರವಾಗಿರುವತ್ತ ಹೆಜ್ಜೆ ಇಟ್ಟಿದ್ದು, ಕೈಗಾರಿಕೆಗಳು, ನಗರ ಸಂಸ್ಥೆಗಳು ಮತ್ತು ನಾಗರಿಕರನ್ನು ಶುದ್ಧ ತಂತ್ರಜ್ಞಾನ, ಉತ್ತಮ ತ್ಯಾಜ್ಯ ನಿರ್ವಹಣೆ ಮತ್ತು ಜವಾಬ್ದಾರಿಯುತ ಪರಿಸರ ಸಂರಕ್ಷಣೆಯತ್ತ ಕೊಂಡೊಯ್ದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಹೇಳಿದರು.

ಬೆಂಗಳೂರು ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ನಡೆದ “ಸರ್ಕ್ಯೂಲರ್ ಅರ್ಥವ್ಯವಸ್ಥೆ ಮತ್ತು ಸ್ಥಿರತೆ” ಕುರಿತು ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಐವತ್ತು ವರ್ಷ ಪೂರೈಸಿದೆ. ಕೈಗಾರಿಕಾ ಮಾಲಿನ್ಯದ ಆರಂಭಿಕ ಸವಾಲಗಳಿಂದ ಇಂದಿನ ಹವಾಮಾನ ಸಹಿಷ್ಣುತೆ ಮತ್ತು ಸಂಪನ್ಮೂಲ ದಕ್ಷತೆವರೆಗೆ ಸಂಸ್ಥೆ ತನ್ನ ಪಾತ್ರವನ್ನು ವಿಸ್ತರಿಸಿದೆ ಎಂದು ಹೇಳಿದರು.

“ಸರ್ಕ್ಯೂಲರ್ ಅರ್ಥವ್ಯವಸ್ಥೆ ಮತ್ತು ಸ್ಥಿರತೆ” ಎಂಬ ಇಂದಿನ ಸಂವಾದದ ವಿಷಯ ಈಗಿನ ಕಾಲಘಟ್ಟದ ಅಗತ್ಯವಷ್ಟೇ ಅಲ್ಲ. ನವೀನ ತಂತ್ರಜ್ಞಾನ, ಉತ್ತಮ ತ್ಯಾಜ್ಯ ನಿರ್ವಹಣೆ ಮತ್ತು ಜವಾಬ್ದಾರಿ ಇರುವ ಪರಿಸರ ಸಂರಕ್ಷಣೆಯ ಕಡೆಗೆ ಮುನ್ನಡೆಸಲು ನೆರವಾಗಲಿದೆ. ಆರಂಭದ ಸಂದರ್ಭದಲ್ಲಿ ಕೈಗಾರಿಕಾ ಮಾಲಿನ್ಯ ನಿಯಂತ್ರಣ ಸಮಸ್ಯೆಗಳನ್ನು ಎದುರಿಸಿದ ಮಂಡಳಿ ಇಂದು ಹವಾಮಾನ ಸ್ಥಿರತೆ ಮತ್ತು ಸಂಪನ್ಮೂಲ ಕಾರ್ಯಕ್ಷಮತೆ ಎಂಬ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಹವಾಮಾನ ಪರಿವರ್ತನೆ, ಜೀವವೈವಿಧ್ಯ ಹಾನಿ, ಮತ್ತು ತ್ಯಾಜ್ಯ ನಿರ್ವಹಣೆಗೆ ಸಮರ್ಪಕವಾದ, ಕ್ರಾಂತಿಕಾರಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ. ತ್ಯಾಜ್ಯವನ್ನು ಕಡಿಮೆ ಮಾಡಿ, ವಸ್ತುಗಳ ಮರುಬಳಕೆಯನ್ನು ಗರಿಷ್ಠಗೊಳಿಸಿ, ಸಂಪನ್ಮೂಲಗಳನ್ನು ದೀರ್ಘಾವಧಿ ಚಲಾವಣೆಯಲ್ಲಿ ಇರಿಸುವುದರಿಂದ ಸಂಪನ್ಮೂಲ ಸಂರಕ್ಷಣೆ ಮತ್ತು ಪರಿಸರ ಸುಧಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 1,407 ಪ್ಲಾಸ್ಟಿಕ್ ತ್ಯಾಜ್ಯ ಘಟಕಗಳು ಮತ್ತು 1,063 ಇ-ತ್ಯಾಜ್ಯ ಘಟಕಗಳು, 11 ಬ್ಯಾಟರಿ ತ್ಯಾಜ್ಯ ಘಟಕಗಳು ನೋಂದಣಿಯಾಗಿದ್ದು, ಲಿಥಿಯಂ, ಕೋಬಾಲ್ಟ್, ನಿಕೇಲ್ ಮುಂತಾದ ಅಪರೂಪದ ಲೋಹಗಳ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತಿದೆ. ಸರ್ಕ್ಯುಲರ್ ಅರ್ಥವ್ಯವಸ್ಥೆ ಜಾರಿಯಾದರೆ ಜಾಗತಿಕವಾಗಿ ವರ್ಷಕ್ಕೆ 1 ಟ್ರಿಲಿಯನ್ ಡಾಲರ್ ಮೌಲ್ಯದ ಸಂಪನ್ಮೂಲ ಉಳಿತಾಯ ಸಾಧ್ಯವೆಂದು ಅವರು ಉಲ್ಲೇಖಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ ಮಾಲಿನ್ಯ ನಿಯಂತ್ರಕ ಸಂಸ್ಥೆಯಲ್ಲ. ಬದಲಾವಣೆಗಾಗಿ ಪ್ರೇರಕ ಶಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ–ಕೈಗಾರಿಕೆ–ಅಕಾಡೆಮಿಯಾ ನಡುವೆ ಸಹಕಾರದ ಸೇತುವೆ ನಿರ್ಮಿಸಿ, ಶುದ್ಧ ಉತ್ಪಾದನೆ ಮತ್ತು ವಲಯ ಆರ್ಥಿಕತೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಈ ಸಂವಾದವು ಹೊಸ ಚಿಂತನೆ, ಹೊಸ ಸಹಕಾರ ಮತ್ತು ಮುಂದಿನ ಐವತ್ತು ವರ್ಷಗಳ ಪರಿಸರ ಕಾರ್ಯಚಟುವಟಿಕೆಗಳಿಗೆ ಗುರಿ ನಿಗದಿ ಮಾಡುವ ವೇದಿಕೆಯಾಗಿದೆ. ಮುಂದಿನ ಪೀಳಿಗೆಗಳಿಗೆ ಹಸಿರು, ಸ್ವಚ್ಛ, ಸುಸ್ಥಿರ ರಾಜ್ಯವನ್ನು ಮಾಡುವ ಗುರಿ ಹೊಂದಲಾಗಿದೆ. ಕಳೆದ ಒಂದು ತಿಂಗಳಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ 14 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಂಪನ್ಮೂಲ ಸಂರಕ್ಷಣೆಗೆ ಪುನರ್ ಬಳಕೆ, ಮರು ಬಳಕೆಗೆ ಒತ್ತು ಅಗತ್ಯ

ನೈಸರ್ಗಿಕ ಸಂಪನ್ಮೂಲಗಳ ಸುದೀರ್ಘ ಬಳಕೆ ಮತ್ತು ಸಂರಕ್ಷಣೆಗಾಗಿ ಮರು ಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಪ್ರಕೃತಿಯೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂಬುದು ನಮ್ಮ ಸರ್ಕಾರದ ನಿಲುವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

1987 ರಲ್ಲಿ, ವಿಶ್ವಸಂಸ್ಥೆಯ ಬ್ರಂಡ್ಲ್ಯಾಂಡ್ ಆಯೋಗ “ಭವಿಷ್ಯದ ಪೀಳಿಗೆಯ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದು”. ‘ಸುಸ್ಥಿರತೆ’ ಎಂದು ವ್ಯಾಖ್ಯಾನಿಸಿದೆ. ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗುವುದರ ಜೊತೆಗೆ ಪ್ರಕೃತಿ ಪರಿಸರ ಉಳಿಸಬೇಕಿದೆ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪರಿಸರ ಸ್ನೇಹಿ ರೂಢಿಗಳ ಉತ್ತೇಜನ, ಆಧುನಿಕ ತಂತ್ರಜ್ಞಾನದ ಬಳಕೆ, ನಾವೀನ್ಯತೆಗೆ ಒತ್ತು ನೀಡಿ ಒಟ್ಟಾರೆ ಸುಸ್ಥಿರತೆ ಮಾದರಿಯ ಪರಿಣಾಮಕಾರಿ ಅನುಷ್ಠಾನ ಮಾಡುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.

ಮರುಬಳಕೆ, ದುರಸ್ತಿ, ಪುನರ್ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಮ್ಮ ಭೂಗ್ರಹ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು, ಹಸಿರು ಪಟಾಕಿ ಬಳಕೆ ಇದಕ್ಕೆ ಉತ್ತಮ ನಿದರ್ಶನ. ಇದರಿಂದ ಪರಿಸರದ ಮೇಲಿನ ಮಾಲಿನ್ಯ ಕಡಿಮೆಯಾಗುವಂತಾಯಿತು ಎಂದರು.

ಸಮ್ಮೇಳನದಲ್ಲಿ ತ್ಯಾಜ್ಯ ನೀರು ಮರುಬಳಕೆ, ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮತ್ತು ಇತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸುಭಾಷ್ ಬಿ. ಆದಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ, ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಚರ್ಚೆಯಾದ ವಿಷಯಗಳು

“ಸರ್ಕ್ಯುಲರ್ ಅರ್ಥವ್ಯವಸ್ಥೆ ಮತ್ತು ಸ್ಥಿರತೆ” ಕುರಿತ ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಇ–ತ್ಯಾಜ್ಯ ನಿಯಂತ್ರಣ, ಪುನರುಪಯೋಗ ವ್ಯವಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಪಾತ್ರದ ಬಗ್ಗೆ ತಜ್ಞರು ಆಳವಾದ ಚರ್ಚೆ ನಡೆಸಿದರು.

“ಸ್ಥಳೀಯ ಸಂಸ್ಥೆಗಳಿಂದ ಪರಿಸರ ಕಾನೂನುಗಳ ಅನುಸರಣೆ” ಕುರಿತ ಸಂವಾದದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆ, ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ನಿರ್ವಹಣೆ ವಿಷಯಗಳ ಕುರಿತು ಚರ್ಚೆ ನಡೆಯಿತು. ಸರ್ಕ್ಯುಲರ್ ಅರ್ಥವ್ಯವಸ್ಥೆ ಅಗತ್ಯ, ಅದರ ಜಾಗತಿಕ ಪ್ರಾಮುಖ್ಯತೆ ಹಾಗೂ ರಾಜ್ಯ ಮಟ್ಟದ ಅನುಷ್ಠಾನ ಕುರಿತ ಚರ್ಚೆಗಳು ನಡೆದವು.

ತ್ಯಾಜ್ಯ ವಿಂಗಡನೆ, ಕಸದಿಂದ ಸಂಪತ್ತು ತಯಾರು ಮಾಡುವ ಮಾದರಿ ಯೋಜನೆಗಳು, ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ, ಹಾಗೂ ಪುನರ್ ಉತ್ಪತ್ತಿ ತಂತ್ರಜ್ಞಾನಗಳ ಅಭಿವೃದ್ಧಿ ಬಗ್ಗೆ ಪ್ರಸ್ತುತಿಗಳು ನಡೆದವು.

ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ, ಬೃಹತ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು. ಸಿಇಇಎನ್ ಆರ್, ಐಎಸ್ ಇಸಿ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಎ.ವಿ.ಮಂಜುನಾಥ ಅವರು, “ತ್ಯಾಜ್ಯ ನಿರ್ವಹಣೆಯಲ್ಲಿ ಸರ್ಕ್ಯುಲರ್ ಅರ್ಥವ್ಯವಸ್ಥೆ” ಕುರಿತು ವಿಷಯ ಮಂಡಿಸಿದರು. ಐಐಎಂನ ಸಹಪ್ರಾಧ್ಯಾಪಕ ಪ್ರೋ. ರಾಜೀವ್ ಆರ್. ತ್ರಿಪಾಠಿ ಅವರು “ವ್ಯವಹಾರಿಕ ಹೊಣೆಗಾರಿಕೆ ಮತ್ತು ಸ್ಥಿರತೆಯ ಸೂಚ್ಯಂಕ ನಿರ್ಮಾಣದ ಮಹತ್ವ” ಕುರಿತು ಮಾತನಾಡಿದರು. “ವಿಸ್ತೃತ ಉತ್ಪಾದಕ ಹೊಣೆಗಾರಿಕೆ ವ್ಯವಸ್ಥೆ” ಬಗ್ಗೆ ಬಿಸಿಐಸಿ ಸಂಸ್ಥೆಯ ಸಹ ಅಧ್ಯಕ್ಷರಾದ ಡಾ. ಕೆ.ಎಸ್.ರವಿಚಂದ್ರನ್ ಅವರು ವಿಷಯ ಮಂಡನೆ ಮಾಡಿದರು.

“ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬ್ಯಾಟರಿ ತ್ಯಾಜ್ಯ ನಿರ್ವಹಣೆ ” ವಿಷಯದ ಕುರಿತು ಸೆಪೆಟ್ ಸಂಸ್ಥೆಯ ಡಾ. ಸುಶಾಂತ್ ಕುಮಾರ್, ಇಸ್ರೋ ನಿವೃತ್ತ ವಿಜ್ಞಾನಿ ವಿ.ಜಗನ್ನಾಥ, ಎನ್ ಐಟಿಕೆ ಸಂಸ್ಥೆಯ ಡಾ. ಜಿ.ಶ್ರೀನಿಕೇತನ, ವೇಸ್ಡ್ ಇಂಪ್ಯಾಕ್ಟ್ ಟ್ರಸ್ಟ್ ನ ಎಚ್.ವಿ‌.ಗಾಯಿತ್ರಿ ಸಂವಾದದಲ್ಲಿ ಭಾಗವಹಿಸಿದ್ದರು. ತ್ಯಾಜ್ಯ ಉತ್ಪತ್ತಿ, ಸಂಗ್ರಹಣೆ, ಇ–ತ್ಯಾಜ್ಯ ನಿಭಾಯಿಕೆ, ಪರಿಸರ ಸ್ನೇಹಿ ನಗರ ಯೋಜನೆ, ಹಾಗೂ ಪೌರಕಾರ್ಮಿಕರ ಸಾಮರ್ಥ್ಯ ವೃದ್ಧಿ ಕುರಿತಾಗಿ ಪರಿಣಿತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಬ್ಯಾಟರಿ ತ್ಯಾಜ್ಯ ನಿರ್ವಹಣೆ ಮತ್ತು ವರ್ತುಲತೆ ಬಗ್ಗೆ ಐಐಎಂಬಿ ಸಂಸ್ಥೆಯ ಡಾ. ಮೋಹನ್ ಕೃಷ್ಣ ವಿಷಯ ಪ್ರಸ್ತುತಪಡಿಸಿದರು. 2030ರ ವೇಳೆಗೆ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ 200 ಮಿಲಿಯನ್ ಮಾರಾಟವಾಗಲಿದ್ದು, 30 ಸಾವಿರ ಟನ್ ಬ್ಯಾಟರಿ ತ್ಯಾಜ್ಯ ಉತ್ಪತ್ತಿಯಾಗಲಿದೆ. 2050ರ ವೇಳೆಗೆ 1.5 ಮಿಲಿಯನ್ ಬ್ಯಾಟರಿ ತ್ಯಾಜ್ಯ ಸೃಷ್ಟಿಯಾಗಲಿದೆ ಎಂಬುದು ಅಧ್ಯಯನ ವರದಿಯಿಂದ ಕಂಡುಬಂದಿದೆ ಎಂದು ವಿವರಿಸಿದರು.

ಬೆಂಗಳೂರು ನಗರದಲ್ಲಿ ವಿಕೇಂದ್ರೀಕೃತ ಜಲ ತ್ಯಾಜ್ಯ ನಿರ್ವಹಣೆ ಪ್ರಸ್ತುತ ಅಭ್ಯಾಸಗಳು ಮತ್ತು ಹೊಸ ಅವಕಾಶಗಳ ಬಗ್ಗೆ ವೆಲ್ ಲ್ಯಾಬ್ ಸಂಸ್ಥೆಯ ಹಿರಿಯ ಸಂಶೋಧನಾ ಸಹಾಯಕಿ ಶ್ರೀಮತಿ ಚೇಷ್ಠಾ ರಜೋರಾ ಅವರು ಮಾತನಾಡಿದರೆ ರಿಯಲ್ ಟೈಮ್ ಪರಿಸರ ಗುಣಮಟ್ಟ ನಿಗಾ ವ್ಯವಸ್ಥೆಗಳ ಬಗ್ಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಪ್ರೊಫೆಸರ್ ಡಾ. ಗುಫ್ರಾನ್ ಬೇಗ್ ಅವರು ವಿಷಯ ಮಂಡನೆ ಮಾಡಿದರು.

ಸಂವಾದದಲ್ಲಿ ಮುಂದಿನ ಕಾರ್ಯತಂತ್ರ, ನೀತಿ ಬದಲಾವಣೆಗಳ ಅಗತ್ಯ ಹಾಗೂ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು. ತಜ್ಞರು ನವೀನ ತಂತ್ರಜ್ಞಾನಗಳ ಬಳಕೆ ಮತ್ತು ಸಮುದಾಯದ ಜಾಗೃತಿ ಹೆಚ್ಚಿಸುವುದೇ ಯಶಸ್ಸಿನ ಸೂಚಕ ಎಂದು ಅಭಿಪ್ರಾಯಪಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ