Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ

ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸಿ, ಮದ್ದೂರು ತಾಲ್ಲೂಕಿನ ಕಸಾಪ ಪದಾಧಿಕಾರಿಗಳ ಬದಲಾವಣೆ ಮಾಡಿದ್ದಾನೆಂದು ಆರೋಪಿಸಿ ಹಲವು ಪರಿಷತ್ ಸದಸ್ಯರು ಜಿಲ್ಲಾಧ್ಯಕ್ಷರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕಸಾಪ 5ನೇ ನಗರ ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿದ್ದಂತೆ ಏಕಾಏಕಿ ವೇದಿಕೆಯ ಮುಂಭಾಗ ಬಂದ ಮದ್ದೂರು ತಾಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರು ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ, ಧರಣಿ ನಡೆಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಿಢೀರ್ ಪ್ರತಿಭಟನೆಯಿಂದ ಸಮ್ಮೇಳನದ ಉದ್ಘಾಟನೆ ವೇಳೆ ಗದ್ದಲದ ಪರಿಸ್ಥಿತಿ ನಿರ್ಮಾಣಗೊಂಡು ಸಮ್ಮೇಳನದ ಉದ್ಘಾಟನೆಗೆ ಅಡೆತಡೆಯಾಯಿತು. ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರ ಸಾಹಸ ಪಟ್ಟರು.

ಕಪ್ಪು ಬಾವುಟ ಹಿಡಿದು ಧಿಕ್ಕಾರದ ಘೋಷಣೆ

ಸಮ್ಮೇಳನದಲ್ಲಿ ಸ್ವಾಗತ ಭಾಷಣ ಮಾಡಲು ರವಿಕುಮಾರ್ ಚಾಮಲಾಪುರ ಮುಂದಾದಾಗ, ಸಭಿಕರ ಸಾಲಿ ನಲ್ಲಿದ್ದ ಪರಿಷತ್ ಸದಸ್ಯರು ಕಪ್ಪು ಬಾವುಟ ಹಿಡಿದು ಧಿಕ್ಕಾರದ ಘೋಷಣೆ ಕೂಗುತ್ತಾ ವೇದಿಕೆಯತ್ತ ನುಗ್ಗಿದರು. ಇವರನ್ನು ಪೊಲೀಸರು ತಡೆಯಲು ಮುಂದಾದಾಗ, ಲೆಕ್ಕಿಸದೆ ವೇದಿಕೆ ಮುಂಭಾಗಕ್ಕೆ ತೆರಳಿ ಧರಣಿ ಕುಳಿತರು. ಪರಿಷತ್ ನ ಜಿಲ್ಲಾಧ್ಯಕ್ಷ ಸಮ್ಮೇಳನದ ವೇದಿಕೆ ಮೇಲೆ ಕುಳಿತಿದ್ದಾಗ ನಮ್ಮನ್ನು ನೋಡಿ ಕಾಲು ಮೇಲೆ ಎತ್ತಿ ಚಪ್ಪಲಿ ತೋರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಾಧಿಕಾರಿ ಧೋರಣೆಗೆ ಕಿಡಿ

ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನೀಲ್, ಕಾರ್ಯದರ್ಶಿ ಪಣ್ಣೆದೊಡ್ಡಿ ಹರ್ಷರನ್ನು ಪದಾಧಿಕಾರಿ ಸ್ಥಾನದಿಂದ ವಜಾ ಮಾಡುವ ಮೂಲಕ ಜಿಲ್ಲಾಧ್ಯಕ್ಷ ರವಿಕುಮಾರ್ ದುರಂಹಕಾರಿ, ಸರ್ವಾ ಧಿಕಾರಿತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಜಯರಾಮ್ ಮಾತನಾಡಿ, ನೀವೆಲ್ಲ ಕನ್ನಡಕ್ಕಾಗಿ ಕೆಲಸ ಮಾಡಿದ್ದೀರಿ, ಪರಿಷತ್ ನಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದರೆ ಮುಂದಿನ ದಿನಗಳಲ್ಲಿ ಎಲ್ಲರೂ ಕುಳಿತು ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸೋಣ. ಸಮ್ಮೇಳನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿದರು. ಅನಂತರ ಸಮ್ಮೇಳನದ ಉದ್ಘಾಟನೆ ಸುಗಮವಾಗಿ ನಡೆಯಿತು.

ರಾಜೀನಾಮೆ ನೀಡಲಿ

ಪಣ್ಣೆದೊಡ್ಡಿ ಹರ್ಷ ಮಾತನಾಡಿ, ಮದ್ದೂರಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಲೇಖಕ ಗುಬ್ಬಿಗೂಡು ರಮೇಶ್ ಅವರನ್ನು ಅತಿಥಿಯಾಗಿ ಆಹ್ವಾನ ಮಾಡಿದ್ದಕ್ಕೆ ಪದಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ. ವೈಯಕ್ತಿಕವಾಗಿ ಗುಬ್ಬಿಗೂಡು ರಮೇಶ್ ಬಗ್ಗೆ ಪರಿಷತ್ ನ ಜಿಲ್ಲಾಧ್ಯಕ್ಷರಿಗೆ ಅಸಮಾಧಾನ ಇದೆ, ತಮಗೆ ಆಗದವರನ್ನು ಕರೆಸಿ ಸಮಾರಂಭ ಮಾಡಿದ್ದರಿಂದ ಪದಾಧಿಕಾರಿಗಳನ್ನು ಕೈ ಬಿಡುವ ಮೂಲಕ ಸರ್ವಾಧಿಕಾರಿತನ ಮೆರೆದಿದ್ದಾರೆ ಎಂದು ಕಿಡಿಕಾರಿದರು.

ಒಬ್ಬ ಜಿಲ್ಲಾಧ್ಯಕ್ಷನಾಗಿ ದುರಂಹಕಾರದಿಂದ ವರ್ತಿಸಿ ಚಪ್ಪಲಿ ತೋರಿಸುತ್ತಾನೆಂದರೆ ಈತ ಎಂತಹ ಅಯೋಗ್ಯ ಎಂಬುದು ಗೊತ್ತಾಗುತ್ತದೆ. ಈತನಿಗೆ ಕಸಾಪ ಅಧ್ಯಕ್ಷನಾಗಿ ಮುಂದುರಿಯಲು ಯೋಗ್ಯತೆಯಿಲ್ಲ. ಕೂಡಲೇ ಈತ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.

ಸಮ್ಮೇಳನದ ಹೆಸರಿನಲ್ಲಿ ವಸೂಲಿ

ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಇಡೀ ಜಿಲ್ಲೆಯಲ್ಲಿ ಅಧಿಕಾರಿಗಳ ಬಳಿ,ಅಂಗಡಿ ಮಾಲೀಕರ ಬಳಿ ವಸೂಲಿ ಮಾಡುತ್ತಾನೆ.ತಾಲೂಕು ಅಧ್ಯಕ್ಷರಲ್ಲೂ ವಸೂಲಿ ಮಾಡುತ್ತಾನೆಂದರೆ ಈತ ಎಂತಹ ರೋಲ್ ಕಾಲ್ ಎಂಬುದು ತಿಳಿಯುತ್ತದೆ.ಜಿಲ್ಲೆಯ ಗೌರವಾನ್ವಿತ ಕನ್ನಡಾಭಿಮಾನಿಗಳು,ಅಧಿಕಾರಿಗಳು ಈತನನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!