Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಸಮಸ್ಯೆಗೆ ರಾಷ್ಟ್ರೀಯ ಜಲನೀತಿ ರಚನೆಯೇ ಪರಿಹಾರ: ಅರ್ಜುನಹಳ್ಳಿ ಪ್ರಸನ್ನಕುಮಾರ್

2 ಶತಮಾನಗಳಿಂದ ಜೀವಂತವಾಗಿರುವ ಕಾವೇರಿ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ರಾಷ್ಟ್ರೀಯ ಜಲ ನೀತಿ ರಚನೆಯಾಗಬೇಕು, ಇಲ್ಲವೇ ಸುಪ್ರೀಂಕೋರ್ಟ್ ತನ್ನ ಅಂತರ್ಗತ ಅಧಿಕಾರ ಬಳಸಿ ಪ್ರಾಧಿಕಾರದ ಆದೇಶ ಮರು ಪರಿಶೀಲನೆಗೆ ಮುಂದಾಗಬೇಕು, ಆಗ ಮಾತ್ರ ಕಾವೇರಿ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಕಾವೇರಿ ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ಕಾವೇರಿ ವಿವಾದ ಎರಡು ಶತಮಾನಗಳಿಂದಲೂ ಜೀವಂತವಾಗಿದೆ. ಕರ್ನಾಟಕದ ರಾಜರು ಬಲಿಷ್ಠರಾಗಿದ್ದಾಗ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುತ್ತಿರಲಿಲ್ಲ. ಉಳಿದೆಲ್ಲಾ ಸಂದರ್ಭದಲ್ಲಿ ಕಾವೇರಿ ವಿಚಾರವಾಗಿ ಕರ್ನಾಟಕದ ಜನರನ್ನು ನೋಯಿಸಿದೆ. ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವಿಚಾರಗಳಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದ ಮಂಡಿಸುವಲ್ಲಿ ನಮ್ಮ ಸರಕಾರಗಳು ವಿಫಲವಾಗಿವೆ ಎಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.

ವಿರೇಂದ್ರ ಪಾಟೀಲರು ದೇವರಾಜ ಅರಸು ಮತ್ತು ಬಂಗಾರಪ್ಪ ಅವರಿಬ್ಬರೂ ಕಾವೇರಿ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ವೀರೇಂದ್ರ ಪಾಟೀಲರು 1969 ರಲ್ಲಿ ನೀರಾವರಿ ಆಯೋಗದ ಅನುಮತಿ ಇಲ್ಲದೆ ಹಾರಂಗಡಿ, ಮಂಚನಬೆಲೆ, ಗುಂಡಾಲ್, ತಾರಕ್, ಗೊರೂರು ಹೇಮಾವತಿ ಜಲಾಶಯ ನಿರ್ಮಾಣ ಕರ‍್ಯ ಆರಂಭಿಸಿದರು. ಅರಸುರವರು ವರುಣಾ ನಾಲೆ ನಿರ್ಮಾಣಕ್ಕೆ ಕಾರಣದರಾದರು. ಬಂಗಾರಪ್ಪ ಅವರು ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂಬ ದಿಟ್ಟ ನಿರ್ಧಾರ ತೆಗೆದುಕೊಂಡರು. ಆದರೆ, ಉಳಿದ ಮುಖ್ಯಮಂತ್ರಿಗಳ್ಯಾರೂ ಅಂತಹ ಬದ್ಧ ತೋರಲಿಲ್ಲ ಎಂದು ಆಪಾದಿಸಿದರು.

ಕಾವೇರಿ ನ್ಯಾಯ ಮಂಡಳಿ ಆದೇಶ ನೀಡಿದ 90 ದಿನಗಳಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಕರ್ನಾಟಕ ಸರಕಾರ ಮಾಡಲಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗೆ ಕರ್ನಾಟಕದ ಪ್ರತಿನಿಧಿಗಳನ್ನು ನೇಮಿಸುವುದು ಬೇಡವೆಂದರೂ ಪ್ರತಿನಿಧಿಗಳನ್ನು ನೇಮಿಸಲಾಯಿತು. ಅಲ್ಲಿಗೆ ಕಾವೇರಿ ಐತೀರ್ಪನ್ನು ಒಪ್ಪಿಕೊಂಡAತಾಯಿತು ಎಂದು ವಿವರಿಸಿದರು.

ಕಾವೇರಿ ತೀರ್ಪಿನಲ್ಲಿ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು ನಿಗದಿ ಪಡಿಸಲಾಗಿದೆಯೇ ಹೊರತು, ಕರ್ನಾಟಕ ಎಷ್ಟು ನೀರನ್ನು ಬಳಸಿಕೊಳ್ಳಬಹುದು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕರ್ನಾಟಕದಲ್ಲಿ ನೀರಿನ ಪ್ರಮಾಣವನ್ನು ಮೀಸಲಿಟ್ಟಲಿಲ್ಲ. ಕಾವೇರಿ ತೀರ್ಪನ್ನು ಪಾರ್ಲಿಮೆಂಟ್ ಕೂಡ ಚರ್ಚೆ ಮಾಡಿ, ತಿದ್ದುಪಡಿ ಮಾಡಲು ಅವಕಾಶವಿಲ್ಲ. ಅದು ಐತೀರ್ಪಿನ ಬದಲಿಗೆ ಬರೀ ತೀರ್ಪು ಆಗಿದ್ದರೆ ಕರ್ನಾಟಕದ ಹೋರಾಟಕ್ಕೆ ಹತ್ತಾರು ಅವಕಾಶಗಳಿದ್ದವು ಎಂದು ಹೇಳಿದರು.

ಕಾವೇರಿ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಲು ಹಾಗೂ ಇಷ್ಟೆಲ್ಲಾ ಅವಾಂತರಗಳಿಗೆ ಕರ್ನಾಟಕದ ಪರ ವಕೀಲರಾಗಿದ್ದ ನಾರಿಮನ್ ಅವರೇ ಕಾರಣ ಎಂದು ಆರೋಪಿಸಿದ ಅವರು, ಹೀಗಾಗಿ ಅವರ ಬದಲಾವಣೆಗೂ ಹಿಂದೆ ಸಾಕಷ್ಟು ಹೋರಾಟ ನಡೆದಿತ್ತು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈಸ್‌ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಜನಜಾಗೃತ ವೇದಿಕೆಯ ಮದ್ದೂರು ಲಿಂಗೇಗೌಡ, ಗಿರೀಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!