Friday, November 20, 2026

ಪ್ರಾಯೋಗಿಕ ಆವೃತ್ತಿ

95 ಕೋಟಿ ರೂ. ವೆಚ್ಚದಲ್ಲಿ ಕೆಮ್ಮಣ್ಣು ನಾಲಾ ಆಧುನೀಕರಣ – ಶಾಸಕ ಉದಯ್

ಸಾಮಾನ್ಯ ರೈತ ಕುಟುಂಬದ ನನ್ನನ್ನು ಪ್ರಭಾವಿ ಮನೆತನಗಳ ರಾಜಕಾರಣಿಗಳನ್ನು ಬದಿಗೊತ್ತಿ ಚುನಾಯಿಸಿದ ರೈತರ ಸಂಕಷ್ಟ ನಿವಾರಣೆಗಾಗಿ ಕೆಮ್ಮಣ್ಣು ಆಧುನೀಕರಣವನ್ನು ಆದ್ಯತೆಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.

ಮದ್ದೂರು ಪಟ್ಟಣದಲ್ಲಿ ಹಾದು ಹೋಗುವ ಕೆಮ್ಮಣ್ಣು ನಾಲೆಯ ಆಧುನೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಬಾಲ್ಯದಲ್ಲಿ ಕೃಷಿಕರ ಭವಣೆಗಳನ್ನು ಕಂಡಿದ್ದೇನೆ, ನಾನು ಸಹ ರೈತನ ಮಗನಾಗಿದ್ದು ಕೃಷಿಕರ ಸಂಕಷ್ಟಗಳ ಅರಿವು ನನಗಿದ್ದು ಕ್ಷೇತ್ರದ ನೀರಾವರಿ ಯೋಜನೆಗಳ ಸಮಸ್ಯೆಗಳನ್ನು ನಿವಾರಣೆಗೊಳಿಸಲು ಸುಮಾರು 600 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಅಭಾರಿಯಾಗಿರುವುದುದಾಗಿ ತಿಳಿಸಿದರು.

ಸದರಿ ನಾಲಾ ಆಧುನೀಕರಣವನ್ನು 95 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರೈಸಲು ಉತ್ತಮ ಕೌಶಲ್ಯ ಹೊಂದಿರುವ ಅಮೃತ್ ಕನ್ ಸ್ಟ್ರಕ್ಷನ್ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದರು.

ಸುಮಾರು 15 ಹಳ್ಳಿಗಳ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಸದರಿ ಕಾಮಗಾರಿಗೆ ಅಡೆತಡೆ ವ್ಯಕ್ತವಾಗದಂತೆ ನಾಲೆ ಹಾಗೂ ಸರ್ವೀಸ್ ರಸ್ತೆಗಳ ಹದ್ದುಬಸ್ತು ನಿಗದಿಪಡಿಸಲಾಗಿದೆ. ರೈತರ ಸಹಕಾರದಿಂದ ಗುಣಮಟ್ಟದ ನಾಲಾ ಆಧುನೀಕರಣಕ್ಕೆ ಒತ್ತು ನೀಡಲಾಗುವುದು ಎಂದರು.

ಕುಹಕಗಳಿಗೆ ಅಭಿವೃದ್ದಿಯ ಉತ್ತರ

ನನ್ನ ಬಾಲ್ಯದಲ್ಲಿ ಎದುರಾದ ಸಂಕಷ್ಟದಿಂದ ತವರೂರು ತೊರದು ಬೆಂಗಳೂರು ಸೇರಿದೆ, ಹಲವು ಉದ್ಯಮ ವ್ಯವಹಾರಗಳಿಂದ ಗಳಿಸಿದ ಸಂಪಾದನೆಯ ಹಣವನ್ನು ಕರೋನಾ ಸಂಕಷ್ಟದಲ್ಲಿದ್ದ ಜನ ಸಾಮಾನ್ಯರಿಗೆ ತಲುಪಿಸಲು ಉದಯ್ ಚಾರಿಟಬಲ್ ಟ್ರಸ್ಟ್ ಮೂಲಕ ಸೇವಾ ಕಾರ್ಯಕ್ಕೆ ನಿರತನಾದೆ. ನನ್ನ ಸೇವೆಯಿಂದ ತೃಪ್ತರಾದ ಜನರು ನನಗೆ ಅಧಿಕಾರ ನೀಡಿದ್ದಾರೆ. ಆ ಅಧಿಕಾರ ಬಲದಿಂದ ಕ್ಷೇತ್ರದ ಅಭಿವೃದ್ದಿಗೆ ಅಂಕಿತ ಹಾಕಲಾಗಿದೆ ಎಂದರು.

ತಾಲ್ಲೂಕಿನ ಕೆಲವು ನಿರುದ್ಯೋಗಿ ಜನರು ನನ್ನ ಬಗ್ಗೆ ಕುಹಕದ ಮಾತನಾಡುತ್ತಾರೆ. ಸುಮಾರು ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ನಾಲಾ ಆಧುನೀಕರಣ ಇವರಿಂದ ಸಾಧ್ಯವೇ ? ಗೆದ್ದ ನಂತರ ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎಂದು ಮಾತನಾಡುತ್ತಿದ್ದರು. ಅಂತವರಿಗೆ ಅಭಿವೃದ್ದಿಯ ಮೂಲಕ ಉತ್ತರ ನೀಡುತ್ತಿದ್ದೇನೆಂದರು.

ವಾರದ ಆರು ದಿನಗಳ ಕಾಲ ಕ್ಷೇತ್ರದಲ್ಲಿದ್ದು ಸಾಮಾನ್ಯ ಜನರ ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದೇನೆ. ಕೆಮ್ಮಣ್ಣು ನಾಲೆ ಆಧುನೀಕರಣದಿಂದ ಪಟ್ಟಣ ವ್ಯಾಪ್ತಿಯಲ್ಲಿ ಸೊಳ್ಳೆಗಳ ತಂಗುದಾಣವಾಗಿದ್ದ ನಾಲೆಗೆ ಮುಕ್ತಿ ದೊರೆಯಲಿದೆ ಎಂದರು.

ಕೆಮ್ಮಣ್ಣು ನಾಲೆ ಆಧುನೀಕರಣದಿಂದ 13 ಗ್ರಾಮಗಳ ವ್ಯಾಪ್ತಿಯ 21.75 ಕಿ.ಮೀ ವಿಸ್ತೀರ್ಣದ ನಾಲೆ ಆಧುನೀಕರಣವಾಗಲಿದ್ದು, 3123 ಎಕರೆ ಭೂ ಪ್ರದೇಶಕ್ಕೆ ಸುಗಮ ನೀರಾವರಿ ವ್ಯವಸ್ಥೆಯಾಗಲಿದ್ದು,
ದೇಸಹಳ್ಳಿ, ಚಾಮನಹಳ್ಳಿ, ಶಿವಪುರ, ಮದ್ದೂರು, ಚನ್ನಸಂದ್ರ, ಉಪ್ಪಿನಕೆರೆ, ನಗರಕೆರೆ, ಗೊರವನಹಳ್ಳಿ, ಸೋಂಪುರ, ಅಜ್ಜಹಳ್ಳಿ, ಮಾಲಗಾರನಹಳ್ಳಿ, ವೈದ್ಯನಾಥಪುರ ಹಾಗೂ ತೊರೆಚಾಕನಹಳ್ಳಿ ಗ್ರಾಮಗಳ ರೈತರಿಗೆ ಸದರಿ ಯೋಜನೆ ವರದಾನವಾಗಲಿದೆ.

ಮದ್ದೂರು ಪಟ್ಟಣ ವ್ಯಾಪ್ತಿಯ  ನಾಲೆಗೆ ಬಾಕ್ಸ್ ಮಾದರಿಯಲ್ಲಿ ನಿರ್ಮಾಣ ಮಾಡಿ ಯಾವುದೇ ಕಸ ಕಡ್ಡಿ ಸೇರ್ಪಡೆಗೆ ಅವಕಾಶವಿಲ್ಲದಂತೆ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ. ರೈತರು ಸಹ ಆಸಕ್ತಿ ತೋರಿ ಅನಗತ್ಯ ಕಿರಿಕಿರಿ ಮಾಡುವ ವ್ಯಕ್ತಿಗಳ ಬಗ್ಗೆ ಜಾಗೃತಿ ವಹಿಸಿದರೆ, ಮುಂದಿನ ಏಳೆಂಟು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.

ಕ್ಷೇತ್ರದ ವ್ಯಾಪ್ತಿಯ ರೈತರ ಹಿತದೃಷ್ಠಿಯಿಂದ ಸೂಳೆಕೆರೆಯ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಭೈರನ್ ನಾಲಾ ಆಧುನೀಕರಣಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ನಾಲೆಗೆ ಸೇರ್ಪಡೆಯಾಗುತ್ತಿದ್ದ ಯುಜಿಡಿ ನೀರು ಸಂಪರ್ಕವನ್ನು ತಪ್ಪಿಸಿ ಯುಜಿಡಿ ಜಾಲವನ್ನು ಬಲಗೊಳಿಸಲು 16.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ  ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ ಕುಮಾರ್, ಪುರಸಭಾ ಸದಸ್ಯರಾದ ಬಿ.ಸಿ.ಸರ್ವಮಂಗಳ, ವನಿತಾ, ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜು, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ದೇಶಹಳ್ಳಿ ಮೋಹನ್ ಕುಮಾರ್, ಎಂ.ಡಿ.ಮಹಾಲಿಂಗಯ್ಯ, ನ.ಲಿ.ಕೃ‍ಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಸುರೇಶ್ ಕಂಠಿ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ