Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡರ ದೂರದರ್ಶಿತ್ವದ ಆಡಳಿತ ಇಂದಿಗೂ ಮಾದರಿ

ಎಲ್ಲರನ್ನೂ ಒಳಗೊಳ್ಳುವ ದೂರದರ್ಶಿತ್ವದ ಆಡಳಿತ ನೀಡಿದ ಮಾಗಡಿ ಕೆಂಪೇಗೌಡರ ಆಡಳಿತ ಇಂದಿಗೂ ಮಾದರಿ ಎಂದು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ನೀರಿನ ಸೌಲಭ್ಯ, ಬಯಲು ಪ್ರದೇಶ, ಹಲವು ಕೆರೆಗಳಿಂದ ಆವೃತವಾಗಿದ್ದ ಬೆಂಗಳೂರನ್ನು ಭೂಗೋಳಿಕ ಆಧಾರದ ಮೇಲೆ ನಿರ್ಮಾಣ ಮಾಡಿದ ಕೆಂಪೇಗೌಡರು ಎಂದು ವಿಶ್ವದಲ್ಲೇ ಬೆಂಗಳೂರು ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಹಲವು ಕೆರೆಗಳನ್ನು ಮುಚ್ಚಿದ್ದರಿಂದ ಒಂದು ದೊಡ್ಡ ಮಳೆ ಬಂದರೆ ಸಾಕು, ಬೆಂಗಳೂರಿನ ಜನರ ಆರ್ಭಟ ಹೆಚ್ಚಾಗುತ್ತದೆ.ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿದ ಬೆಂಗಳೂರನ್ನು ಇಂದು ಅದ್ವಾನದ ನಗರವಾಗಿ ಮಾಡಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆ ಕಾಲಕ್ಕೇ ಅರಳೇಪೇಟೆ, ಬಳೆಪೇಟೆ , ತಿಗಳರಪೇಟೆ, ಚಿಕ್ಕಪೇಟೆ, ನಗರ್ತ ಪೇಟೆ ಸೇರಿದಂತೆ ವಿವಿಧ ವೃತ್ತಿಗಳ ಹೆಸರಿನಲ್ಲಿ 50ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿಸಿ ಪ್ರಜೆಗಳಗೆ ಬದುಕು ಕಟ್ಟಿಕೊಟ್ಟವರು ಕೆಂಪೇಗೌಡರು.ಕೃಷಿಗೆ ಪೂರಕ ಚಟುವಟಿಕೆಗಳಿಗೆ ಸ್ಥಾನ ಕಲ್ಲಿಸುವ ಉದ್ದೇಶದಿಂದ ಬೆಂಗಳೂರು ಸ್ಥಾಪನೆ ಮಾಡಿದರು.

ಧರ್ಮಾಂಬುಧಿ ಕೆರೆ, ಕೆಂಪಾಂಬುದಿ ಕೆರೆ, ಹಲಸೂರು ಸೇರಿದಂತೆ ನೂರಾರು ಕೆರೆ-ಕಟ್ಟೆ, ಕಲ್ಯಾಣಿಗಳನ್ನು ನಿರ್ಮಿಸಿ ಬೆಂಗಳೂರಿನ ಜಲದಾಹ ನೀಗಿಸಿದವರು.ಹಲವು ಐತಿಹಾಸಿಕ ದೇಗುಲಗಳನ್ನು ಸ್ಥಾಪಿಸಿ ಭಕ್ತಿ ಪಾರಮ್ಯ ಮೆರೆದವರು ನಾಡಪ್ರಭು ಕೆಂಪೇಗೌಡ ರವರು ಎಂದರು.

ಜಿಲ್ಲಾಧಿಕಾರಿ ಎಸ್. ಅಶ್ವತಿ ಮಾತನಾಡಿ, ಜನಪರ ಯೋಜನೆಗಳ ಮೂಲಕ ಜನನಾಯಕರಾದ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಹಬ್ಬವಾಗಿಸಿ ಸಂಭ್ರಮಿಸುತ್ತಿರುವುದು ಬೆಂಗಳೂರು ನಿರ್ಮಾತೃಗೆ ಸಲ್ಲಿಸುತ್ತಿರುವ ಗೌರವ.ಕೆಂಪೇಗೌಡರ ಆದರ್ಶ, ಆಡಳಿತ, ಕೊಡುಗೆಗಳನ್ನು ನಾಡಿನ ಜನರು ಸದಾ ನೆನೆಯಬೇಕು ಎಂದರು.

ಕೆಂಪೇಗೌಡ ಅವರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು,16ನೇ ಶತಮಾನದಲ್ಲಿಯೇ ಕೆರೆಗಳನ್ನು ನಿರ್ಮಾಣ ಮಾಡಿ ಸಂರಕ್ಷಣೆ ಮಾಡಿದರು. ಉದ್ಯಾನವನಗಳನ್ನು ನಿರ್ಮಾಣ ಮಾಡಿ ಸಂರಕ್ಷಣೆ ಮಾಡಿದರು. ಜನರ ಜೀವನಕ್ಕೆ ಬೇಕಿರುವ ರಸ್ತೆ, ನೀರು ಮತ್ತಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಜೀವ ವೈವಿಧ್ಯತೆಯ ಸಮತೋಲನ ಕಾಪಾಡಲು ಕೆರೆ, ಉದ್ಯಾನವನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ ‌ಎಂದು ತಿಳಿಸಿದರು.

ನಾಡ ಪ್ರಭು ಕೆಂಪೇಗೌಡ ಅವರು ಆಡಳಿತದಲ್ಲಿ ಪ್ರಜೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರಜಾಪ್ರಭುತ್ವ ವನ್ನು ಎತ್ತಿಹಿಡಿದಿದ್ದಾರೆ. ಕೆಂಪೇಗೌಡರು ನೀಡಿದ ತತ್ವ ಹಾಗೂ ಆದರ್ಶಗಳು ನಮಗೆ ದಾರಿ ದೀಪ. ದಕ್ಷತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಆದಿಚುಂಚನಗಿರಿ ಕ್ಷೇತ್ರದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮಂಜು ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ,ಜಿ‌.ಪಂ.ಸಿಇಓ ದಿವ್ಯಾಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ,ತಹಶೀಲ್ದಾರ್ ಕುಂಇ ಅಹಮದ್,ಡಿಎಚ್ಓ ಧನಂಜಯ,ಎಇಇ ನಾಗರಾಜ್,ನಗರ ಸಭೆ ಆಯುಕ್ತ ಆರ್.ಮಂಜುನಾಥ್, ನಗರ ಸಭೆ ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯ್ ಕುಮಾರ್,ಕಸಾಪ ಅಧ್ಯಕ್ಷ ರವಿಕುಮಾರ್, ಮುಖಂಡರುಗಳಾದ ಬಾಣಸವಾಡಿ ನಾಗಣ್ಣ,ಎಲ್.ಕೃಷ್ಣ,ಕೆ‌.ಸಿ.ನಾಗಮ್ಮ ರಮೇಶ್,ವಿಶಾಲ್ ರಘು,ನಾರಾಯಣ್, ವಾಗೀಶ್ ಚಂದ್ರಗುರು, ಕೆ.ಸಿ.ರವೀಂದ್ರ, ಕನ್ನಡಸೇನೆ ಮಂಜುನಾಥ್, ಮಂಗಲ ಲಂಕೇಶ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!