Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಕ್ರಮ ಗಣಿಗಾರಿಕೆಯಿಂದ ವಿ.ಸಿ.ನಾಲೆ ಸುರಂಗಕ್ಕೆ ಅಪಾಯ : ಕೆಂಪೂಗೌಡ

ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ಹೇಮಲತಾ ಬಸವರಾಜು ಹಾಗೂ ಅಶೋಕ್ ಪಾಟೀಲ್ ಎಂಬುವವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಹುಲಿಗೆರೆ ಬಳಿ ಇರುವ ವಿ.ಸಿ.ನಾಲೆ ಸುರಂಗಕ್ಕೆ ಆಪಾಯ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆತಂಕ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಮೆಗಾ ಸ್ಪೋಟಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುಮತಿ ಪಡೆದಿದ್ದು, ಆದರೂ ದೊಡ್ಡ ಪ್ರಮಾಣದಲ್ಲಿ ಸ್ಪೋಟಗಳನ್ನು ನಡೆಸುತ್ತಿದೆ, ಇದರಿಂದ ಸ್ಥಳದಲ್ಲಿ ದೊಡ್ಡ ಹಳ್ಳ ನಿರ್ಮಾಣವಾಗಿದೆ, ಈ ಜಾಗವು ವಿ.ಸಿ.ನಾಲೆ ಸುರಂಗದಿಂದ ಕೇವಲ 200 ಮೀಟರ್ ದೂರದಲ್ಲಿದೆ, ಇದೇ ರೀತಿ ಅಕ್ರಮ ಗಣಿಗಾರಿಕೆ ಮುಂದುವರೆದರೆ  ಸುಮಾರು 2 ಕಿ.ಮೀ. ಉದ್ದವಿರುವ ವಿ.ಸಿ.ನಾಲೆಯ ಸುರಂಗಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದರು.

ಈ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಮತ್ತು ಗಣಿ ಮಾಲೀಕರ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ, ರೈತ ಹೋರಾಟವನ್ನು ಹತ್ತಿಕ್ಕುವ ಉದ್ಧೇಶದಿಂದ ಗಣಿ ಮಾಲೀಕರು ರೈತ ಮೇಲೆ ಕೇಸುಗಳನ್ನು ದಾಖಲಿಸಿ ಕುರುಕುಳ ನೀಡುತ್ತಿದ್ದಾರೆ, ಇದಕ್ಕೆ ಜಿಲ್ಲಾಡಳಿತವು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಅವರು, ಈ ಗಣಿಗಾರಿಕೆ ಕೆ ಆರ್ ಎಸ್ ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯ ಹೊರಗಿದೆ ಎಂದು ಹೇಳಿಕೆ ನೀಡುತ್ತಿರುವುದು ನಮಗೆ ಆಶ್ಚರ್ಯವನ್ನುಂಟು ಮಾಡಿದೆ, ನನ್ನ ಪ್ರಕಾರ ಜಿಲ್ಲಾಡಳಿತದ ಮೇಲೆ ರಾಜ್ಯ ಬಿಜೆಪಿ ಸರ್ಕಾರದ ಒತ್ತಡವಿದೆ ಎಂದು ಅನಿಸುತ್ತದೆ ಎಂಬ ಅನುಮಾನ ಉಂಟಾಗುತ್ತದೆ ಎಂದು ಹೇಳಿದರು.

ಈ ಅಕ್ರಮ ಗಣಿಗಾರಿಕೆ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರ ಗಮನ ಸೆಳೆಯಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪುಟ್ಟರಾಜು ಅವರು ಅಕ್ರಮ ಗಣಿಗಾರಿಕೆಯ ಫಲಾನುಭವಿ. ಹಾಗಾಗಿ ಅವರಿಂದ ಇಂತಹ ಅಕ್ರಮಗಳ ವಿರುದ್ಧ ಹೋರಾಟ ಸಾಧ್ಯವಿಲ್ಲ ಎಂದು ಉತ್ತರಿಸಿದರು.

ಬೆಳಗಿನ ಸಮಯದಲ್ಲೆ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಿ 

ಸರ್ಕಾರವು ರೈತರ ಪಂಪ್ ಸೆಟ್ ಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುತ್ತಿದೆ, ಈಗ ಎಲ್ಲಾ ಕಡೆ ಚಿರತೆ ಹಾವಳಿ ಮಿತಿ ಮೀರಿದೆ, ಇದರಿಂದ ಚಿರತೆಗಳಿಂದ ರೈತರ ಮೇಲೆ ದಾಳಿಯಾಗುವ ಅಪಾಯವಿದೆ. ಆದ್ದರಿಂದ ಬೆಳಗ್ಗಿನ ವೇಳೆಯಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಕೆಲವು ಮೂಲಗಳ ಪ್ರಕಾರ ರಾಜ್ಯದಾದ್ಯಂತ 2 ಸಾವಿರಕ್ಕೂ ಹೆಚ್ಚು ಚಿರತೆಗಳು ಕಾಡಿನಿಂದ ನಾಡಿಗೆ ಬಂದಿವೆ ಎಂಬ ಮಾಹಿತಿ ಇದೆ, ಆದ್ದರಿಂದ ಇವುಗಳನ್ನು ಸೆರೆಯಿಡಿದು ನಾಡಿನ ಜನರ ಪ್ರಾಣ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!