“ರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬ ಹೆಸರಿರಲಿಲ್ಲ. ವೈನವಂ, ಶೈವಂ ಮತ್ತು ಸಮಾನಂ ಇತ್ತು ಮತ್ತು ಹಿಂದೂ ಎಂಬ ಪದವನ್ನು ಬ್ರಿಟಿಷರು ಸೃಷ್ಟಿಸಿದರು ಎಂದು ಖ್ಯಾತ ಚಿತ್ರ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ.
ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ಇತ್ತಿಚೇಗೆ ರಾಜ ರಾಜ ಚೋಳ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು. ಅವರ ಹೇಳಿಕೆಯನ್ನು ಕಮಲ್ ಹಾಸನ್ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ನಿರ್ದೇಶಕ ವೆಟ್ರಿಮಾರನ್ ಅವರು “ರಾಜ ರಾಜ ಚೋಳನ್ ಹಿಂದೂ ಅಲ್ಲ, ಆದರೆ ಬಿಜೆಪಿಯವರು ಅವರನ್ನು ಕೇಸರೀಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಈಗಾಗಲೇ ತಿರುವಳ್ಳುವರ್ ಅವರನ್ನು ಕೇಸರೀಕರಣ ಮಾಡಲು ಪ್ರಯತ್ನಿಸಿದ್ದಾರೆ, ನಾವು ಎಂದಿಗೂ ಇದಕ್ಕೆ ಅವಕಾಶ ನೀಡಬಾರದು ಹೇಳಿದ್ದರು.
ಬ್ರಿಟಿಷರು ತುತ್ತುಕುಡಿಯನ್ನು ಹೇಗೆ ಟುಟಿಕೋರಿನ್ ಆಗಿ ಬದಲಾಯಿಸಿದರು, ಹಾಗೇಯೇ ಸಿಂಧೂ ಪದವು ಹಿಂದೂವಾಗಿದೆಯಷ್ಟೆ, ಆದರೆ ಹಿಂದೂ ಧರ್ಮವೆಂಬುದು ಆಗ ಇರಲೇ ಇಲ್ಲ ಎಂದು ಕಮಲ್ ಹಾಸನ್ ಉಲ್ಲೇಖಿಸಿದ್ದಾರೆ.
ರಾಜ ರಾಜ ಚೋಳರಿಂದ ಪ್ರೇರಿತವಾದ ಕಾಲ್ಪನಿಕ ಕಾದಂಬರಿಯನ್ನು ಆಧರಿಸಿದ ‘ಪೊನ್ನಿಯಿನ್ ಸೆಲ್ವನ್: 1 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ ವೆಟ್ರಿಮಾರನ್ ಈ ಹೇಳಿಕೆ ನೀಡಿದ್ದಾರೆ. ವೆಟ್ರಿಮಾರನ್ ಕಮಲ್ ಹಾಸನ್ ಅವರ ಬೆಂಬಲ ಪಡೆದಿದ್ದರೂ ಬಿಜೆಪಿಯೂ ಅವರನ್ನು ದೂಷಿಸಿದೆ.
ರಾಜರಾಜ ಚೋಳ ನಿಜವಾಗಿಯೂ ಹಿಂದೂ ರಾಜನಾಗಿದ್ದ ಎಂದು ಬಿಜೆಪಿ ಮುಖಂಡ ಹೆಚ್.ರಾಜಾ ಹೇಳಿಕೆ ನೀಡಿದ್ದು, ಅವರು ವೆಟ್ರಿಮಾರನ್ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. “ನಾನು ವೆಟ್ರಿಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ, ಆದರೆ ರಾಜ ರಾಜ ಚೋಳನು ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಅವರು ಎತ್ತಿ ತೋರಿಸಲಿ ಎಂದು ತಿರುಗೇಟು ನೀಡಿದ್ಧಾರೆ.
ರಾಜ ರಾಜ ಚೋಳನ ಕುರಿತಾದ ಹೇಳಿಕೆ ತಮಿಳುನಾಡಿನಲ್ಲಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಚಲನಚಿತ್ರ ನಿರ್ದೇಶಕ ಪಿ.ಎ.ರಂಜಿತ್ ಅವರು ರಾಜನನ್ನು ಟೀಕಿಸಿದ ನಂತರ ವಿವಾದವನ್ನು ಹುಟ್ಟು ಹಾಕಿದ್ದರು.
ಹಿಂದಿನ ಅರಸರ ಆಡಳಿತ ದಲಿತರ ಪಾಲಿಗೆ ಕರಾಳ ಯುಗವಾಗಿತ್ತು. ರಾಜ ರಾಜ ಚೋಳನ ಆಳ್ವಿಕೆಯಲ್ಲಿ ದಲಿತರಿಂದ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲಾಯಿತು ಮತ್ತು ಜಾತಿ ದಬ್ಬಾಳಿಕೆಯ ಹಲವು ರೂಪಗಳು ಪ್ರಾರಂಭವಾಯಿತು ಎಂದು ರಂಜಿ ಪ್ರತಿಪಾದಿಸಿದ್ದರು.




