Saturday, May 18, 2024

ಪ್ರಾಯೋಗಿಕ ಆವೃತ್ತಿ

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಲು ಸರ್ಕಾರದ ನಿರ್ಧಾರ


  • ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಮಿತಿ ವರದಿ ಅಂಗೀಕಾರ 

  • ಸರ್ವಪಕ್ಷ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ತನ್ನ ಸಮ್ಮತಿಯನ್ನು ನೀಡಿದೆ.

ಈ ಸಂಬಂಧ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರ ಪ್ರಕಟಿಸಿದರು.

ಎಸ್ಸಿ ಮೀಸಲಾತಿಯನ್ನು ಹಾಲಿ ಇರುವ ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಹಾಲಿ ಶೇ 3ರಿಂದ 7ಕ್ಕೆ ಹೆಚ್ಚಿಸಲು ಸರ್ವಪಕ್ಷ ಸಭೆಯ ಈ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಇರಿಸಿ ಅಂಗೀಕರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕಾಗಿದೆ. ಈ ಬಗ್ಗೆಯೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇತರ ಹಿಂದುಳಿದ ವರ್ಗದವರ ಬಗ್ಗೆಯೂ ವರದಿಗಳು ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸರ್ವಪಕ್ಷ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಬಗ್ಗೆ ಸಂವಿಧಾನವು ಪ್ರಸ್ತಾಪಿಸಿದೆ. ಅದರ ಆಶಯದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ನಮ್ಮ ನಿರ್ಧಾರ. ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಒಟ್ಟಾರೆ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಸಮಿತಿ ಅಧ್ಯಯನ ಮಾಡಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ವಪಕ್ಷ ಸಭೆಯಲ್ಲಿ ಅನುಷ್ಠಾನ ಸಂಬಂಧ ಚರ್ಚೆ ನಡೆಸಿದೆ. ಸರ್ವಪಕ್ಷ ಸಭೆಯ ನಿರ್ಣಯವನ್ನು ನಾಳೆ (ಅ 8) ಸಂಪುಟದಲ್ಲಿ ಇರಿಸಿ ಅಂಗೀಕಾರ ತೆಗೆದುಕೊಳ್ಳುತ್ತೇವೆ. ಬಹಳ ವರ್ಷಗಳ ನ್ಯಾಯಸಮ್ಮತ ಬೇಡಿಕೆ ಸಲ್ಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನುಡಿದರು.

ಈ ನಿರ್ಧಾರವನ್ನು ಸಚಿವ ಶ್ರೀರಾಮುಲು, ರಾಜುಗೌಡ, ರಮೇಶ್ ಜಾರಕಿಹೊಳಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಸ್ವಾಗತಿಸಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚನೆಯಾಗಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಅನುಮೋದನೆ ಕೊಟ್ಟರು. ಸಮಿತಿಯು 7 ನ್ಯಾಯಸಮ್ಮತ ಶಿಫಾರಸನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದು ಸಿಎಂ ಹೇಳಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಒಟ್ಟಾರೆ ಮೀಸಲಾತಿ ಶೇ.50 ಮೀರಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ ತಮಿಳುನಾಡಿನಲ್ಲಿ ಇದಕ್ಕೆ ಅವಕಾಶ ಕೊಡಲಾಗಿದೆ, ಕೇಂದ್ರ ಸರ್ಕಾರದಿಂದ ಅಗತ್ಯ ತಿದ್ದುಪಡಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಧರಣಿ ನಿಲ್ಲಿಸಿ

ಸರ್ವಪಕ್ಷ ಸಭೆಯಲ್ಲಿ ಮೀಸಲಾತಿ ಕೊಡುವ ಬಗ್ಗೆ ನಿರ್ಧಾರವಾಗಿದೆ. ಇನ್ನು ಮುಂದಾದರೂ ವಾಲ್ಮೀಕಿ ಶ್ರೀಗಳು ಧರಣಿ ನಿಲ್ಲಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು. ಮುಂದಿನ ಅಧಿವೇಶನದಲ್ಲಿ ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸುಗ್ರೀವಾಜ್ಞೆ ಹೊರಡಿಸಲು ಸಿದ್ದರಾಮಯ್ಯ ಆಗ್ರಹ 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 2019ರ ಜುಲೈನಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರಚಿಸಿದ್ದೆವು. 2020ರ ಜುಲೈ 2ರಂದು ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಸಿ 2 ವರ್ಷವಾಗಿದೆ. 2011ರ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಸಮಿತಿಯು ಶಿಫಾರಸು ಮಾಡಿದೆ ಎಂದು ಹೇಳಿದರು.

ಮೀಸಲಾತಿ ಅಂತಿಮ ತೀರ್ಮಾನವನ್ನು ಕೇಂದ್ರವೂ ಒಪ್ಪಬಹುದು, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇವೆ, ಹಾಗಾಗಿ ಸಮಸ್ಯೆಯಾಗಲಾರದು. ಮೀಸಲಾತಿ ಪ್ರಮಾಣಕ್ಕೆ ರಾಜ್ಯ ಸರ್ಕಾರವು ಶೀಘ್ರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಸಭೆ ಕರೆದದ್ದು ತುಂಬಾ ತಡವಾಯ್ತು, ಇದರ ಬಗ್ಗೆ ಹಲವು ಬಾರಿ ನಾನು ಒತ್ತಾಯ ಮಾಡಿದ್ದೆ. ನಾಗಮೋಹನ್ ದಾಸ್ ವರದಿಯನ್ನ ಅನುಷ್ಠಾನಕ್ಕೆ ತರಲು ತಕ್ಷಣ ವಿಧಾನಸಭೆ ಅಧಿವೇಶನ ಕರೆಯಬೇಕು ಅಂತ ನಾನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ವಿವರಿಸಿದರು.

ಸಭೆಯ ಬಳಿಕ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದು. ವರದಿ ಅನುಷ್ಠಾನದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರವು ಕಾನೂನು ರೂಪಕ್ಕೆ ತರಲಿದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!