Thursday, July 25, 2024

ಪ್ರಾಯೋಗಿಕ ಆವೃತ್ತಿ

ಜನಮಾನಸದ ಮೈಸೂರಿನ ದೊರೆ ನಾಲ್ವಡಿ : ತಗ್ಗಹಳ್ಳಿ ವೆಂಕಟೇಶ್

ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಮಾನಸದ ದೊರೆಯಾಗಿ ಹತ್ತಾರು ಜನಪರ ಕಾರ್ಯಗಳನ್ನು ಕೈಗೊಂಡ ಮಹನೀಯರಾಗಿದ್ದಾರೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.

ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಗೆಳೆಯರ ಬಳಗ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ನಾಲ್ವಡಿಯವರ 140ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ, ಶಿಕ್ಷಣ, ಕೈಗಾರಿಕೆ, ಆರೋಗ್ಯ, ನೀರಾವರಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅಲ್ಲದೇ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಈ ಭಾಗದ ಜನರ ಅನ್ನದಾತರಾಗಿದ್ದಾರೆ. ಇವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಟ್ರಸ್ಟ್ ಮಂಡ್ಯ ಜಿಲ್ಲೆಯಾದ್ಯಂತ ನಾಲ್ವಡಿಯವರ ಸ್ಮರಣೆಯನ್ನು ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಉಪನ್ಯಾಸಕ ಚಂದಗಾಲು ಲೋಕೇಶ್ ಮಾತನಾಡಿ, ಬೆಳಿಗ್ಗೆ ಎದ್ದು ಮಂಡ್ಯ ಜಿಲ್ಲೆಯ ಜನತೆ ನಾಲ್ವಡಿಯವರನ್ನು ನೆನೆದು ದಿನದ ಕೆಲಸವನ್ನು ಪ್ರಾರಂಭಿಸಬೇಕು. ರಾಜಪ್ರಭುತ್ವ ಜನಸಾಮಾನ್ಯರ ಕೈಯಲ್ಲಿ ಇತ್ತು ಎಂದರೆ ಅದು ನಾಲ್ವಡಿಯವರ ಕಾಲದಲ್ಲಿ ಮಾತ್ರ ಎಂದು ಸ್ಮರಿಸಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್ ಮಾತನಾಡಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶೂದ್ರರಿಗೆ ಅರಮನೆ ಪ್ರವೇಶ, ಉದ್ಯೋಗದಲ್ಲಿ ಮೀಸಲಾತಿ ನೀಡಿ ಸಮಸಮಾಜದ ಕನಸು ಕಂಡರು. ಸಮಾಜದ ಮೌಢ್ಯ ಮತ್ತು ಅನಿಷ್ಠ ಪದ್ದತಿಗಳ ನಿರ್ಮೂಲನೆಗೆ ಮುಂದಾದರು ಎಂದರು.

ಸಮಾನ ಮನಸ್ಕರ ವೇದಿಕೆಯ ಟಿ.ಡಿ.ನಾಗರಾಜ್ ಮಾತನಾಡಿ,  ದಲಿತ ಸಮುದಾಯಕ್ಕೆ ಮೊಟ್ಟ ಮೊದಲು ಕಡ್ಡಾಯ ಶಿಕ್ಷಣ ನೀಡಿ, ಶಾಲೆಗಳನ್ನು ತೆರೆದು, ವಿಶೇಷವಾಗಿ ಕಿವುಡ, ಮೂಗ ಮತ್ತು ಅಂಧರಿಗೆ ಶಾಲೆ ಮತ್ತು ಆಸ್ಪತ್ರೆಗಳನ್ನು ತೆರೆದರು. ಇದನ್ನು ನಾವು ಸ್ಮರಿಸಬೇಕೆಂದರು.

ವೇದಿಕೆಯಲ್ಲಿ ವಕೀಲ ಲಕ್ಷ್ಮಣ್ ಚೀರನಹಳ್ಳಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಎಂ. ಸುರೇಶ್, ಗ್ರಾ.ಪಂ.ಸದಸ್ಯ ಲಿಂಗಣ್ಣ, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಸಿದ್ದರಾಜು, ವಿಎಸ್ಎಸ್ಎನ್ ಸಿಇಓ ಟಿ.ಕೆ.ಸಿದ್ದರಾಜು, ಟ್ರಸ್ಟ್ ನ ಮಂಜು ಟಿ.ಎಸ್, ಚಂದನ್, ವಿಶ್ವಜ್ಞಾನಿ ಅಂಬೇಡ್ಕರ್ ಗೆಳಯರ ಬಳಗದ ಅಧ್ಯಕ್ಷ ರಾಜು, ಖಜಾಂಚಿ ಹೇಮಂತ್, ವಿವೇಕ್, ರವಿ, ಸಿದ್ದರಾಜು, ಲಿಂಗರಾಜು, ದೇವಯ್ಯ, ನಾರಾಯಣ ಹಾಗೂ ಪದ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!