Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ| ರೈತ ಹೋರಾಟದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರದಿಂದ ತಡೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಡೆ ಒಡ್ಡಿದೆ.

ಸೆನ್ಸಾರ್ ಮಾಡಿಸದ ಚಿತ್ರಗಳ ಪ್ರದರ್ಶನಕ್ಕೆ ಮುನ್ನ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳಬೇಕು. ಹಾಗಾಗಿ, ಅನುಮತಿ ಪಡೆಯಲು ರಾಜ್ಯ ಸರ್ಕಾರ ಪಟ್ಟಿ ಕಳುಹಿಸಿತ್ತು. ಈ ವೇಳೆ ಕಿಸಾನ್ ಸತ್ಯಾಗ್ರಹ ಸಾಕ್ಷ್ಯಚಿತ್ರ, ಇಸ್ರೇಲ್ ಮತ್ತು ಉಕ್ರೇನ್‌ನ ಎರಡು ಸಿನಿಮಾಗಳ ಪ್ರದರ್ಶನಕ್ಕೆ ಸಚಿವಾಲಯ ತಡೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಾಕ್ಷ್ಯಚಿತ್ರ ನಿರ್ದೇಶಕ ಕೇಸರಿ ಹರವು, “ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದಿಂದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರದಿಂದ ನನಗೆ ಮಾಹಿತಿ ಬಂದಿದೆ. ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಪಡೆಯದ ಚಿತ್ರಗಳ ಪ್ರದರ್ಶನ ಚಲನಚಿತ್ರೋತ್ಸವದಲ್ಲಿ ಮಾಡುವಂತಿಲ್ಲ ಎಂಬ ನಿಯಮ ಇಲ್ಲ. ಆದರೆ, ಪ್ರಮಾಣ ಪತ್ರ ಪಡೆಯದ ಸಿನಿಮಾ, ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಮುನ್ನ ಕೇಂದ್ರಕ್ಕೆ ಪಟ್ಟಿ ನೀಡಬೇಕಿದೆ. ಅದರಂತೆ ರಾಜ್ಯ ಸರ್ಕಾರ ಪಟ್ಟಿ ಕಳಿಸಿತ್ತು. ಪ್ರಮಾಣ ಪತ್ರ ಪಡೆದಿಲ್ಲ ಎಂಬ ಕಾರಣ ನೀಡಿ ಪ್ರದರ್ಶನಕ್ಕೆ ತಡೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ” ಎಂದಿದ್ದಾರೆ.

“ನಮ್ಮ ಸಾಕ್ಷ್ಯಚಿತ್ರದ ಜೊತೆಗೆ ಉಕ್ರೇನ್ ಮತ್ತು ಇಸ್ರೇಲ್‌ನ ಎರಡು ಸಿನಿಮಾಗಳ ಪ್ರದರ್ಶನಕ್ಕೆ ತಡೆ ಒಡ್ಡಲಾಗಿದೆ. ಅವುಗಳೂ ಕೂಡ ಯುದ್ಧಕ್ಕೆ ಸಂಬಂಧಿಸಿದ್ದಾಗಿವೆ” ಎಂದು ಹರವು ಹೇಳಿದ್ದಾರೆ. “ಕಳೆದ ವರ್ಷ ನಮ್ಮ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಅವಕಾಶ ಕೋರಿದ್ದೆವು. ಆಗ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವುದಿಲ್ಲ ಎಂದು ಸರ್ಕಾರದ ಕಡೆಯಿಂದ ತಿಳಿಸಿದ್ದರು. ಬಳಿಕ, ಅವರು ಕೆಲ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ನನಗೆ ಅವರು ಸುಳ್ಳು ಹೇಳಿದ್ದರು. ಈ ಬಾರಿ ನಾವು ಪ್ರದರ್ಶನಕ್ಕೆ ಮನವಿ ಮಾಡಿರಲಿಲ್ಲ. ಆದರೆ, ಸರ್ಕಾರದ ಕಡೆಯಿಂದಲೇ ಪ್ರದರ್ಶನಕ್ಕೆ ಅನುಮತಿ ಕೇಳಿದ್ದರು. ಚಲನಚಿತ್ರೋತ್ಸವದ ಮಾಹಿತಿ ಕೈಪಿಡಿಯ 236ನೇ ಪುಟದಲ್ಲಿ ನಮ್ಮ ಚಿತ್ರ ಪ್ರದರ್ಶನದ ಬಗ್ಗೆ ಪ್ರಕಟಿಸಲಾಗಿದೆ. ಆದರೆ, ಈಗ ಕೇಂದ್ರದಿಂದ ತಡೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

“ನಮ್ಮದು ದೆಹಲಿಯ ರೈತ ಹೋರಾಟದ ಕುರಿತ ಸಾಕ್ಷ್ಯ ಚಿತ್ರ. ಉಕ್ರೇನ್ ಮತ್ತು ಇಸ್ರೇಲ್‌ನದ್ದು ಅಲ್ಲಿನ ಯುದ್ಧ ಭೀಕರತೆಯ ಕುರಿತ ಚಿತ್ರಗಳಾಗಿವೆ. ಈ ಮೂರು ಚಿತ್ರಗಳ ಪ್ರದರ್ಶನದ ತಡೆ ಹಿಡಿದಿರುವುದರ ಹಿಂದೆ ದುರುದ್ದೇಶವಿದೆ” ಎಂದು ಹರವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!