Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೊರೊನಾ ಸಂಕಷ್ಟದಲ್ಲಿ ಕೈ ಹಿಡಿದದ್ದು ಹೈನುಗಾರಿಕೆ

ಕೊರೊನಾ ಸಂಕಷ್ಟದ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾಗ, ರೈತರ ಕೈ ಹಿಡಿದದ್ದು ಹೈನುಗಾರಿಕೆ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಅನಿಸಿಕೆ ವ್ಯಕ್ತ ಪಡಿಸಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹಡವನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಹಾಲಿಗೆ ನೀರು, ಸಕ್ಕರೆ,ಉಪ್ಪನ್ನು ಕಲಬೆರಕೆ ಮಾಡದೇ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರ ಮೂಲಕ ಸಂಘದ ಬೆಳವಣಿಗೆ ಹಾಗೂ ನಿಮ್ಮ ಕುಟುಂಬ ಆರ್ಥಿಕವಾಗಿ ಪ್ರಗತಿ ಸಾಗಿಸಲು ಸಹಾಯವಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಅತಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಯಾಕೆಂದರೆ ಕೃಷಿಯಲ್ಲಿ ವಾರ್ಷಿಕವಾಗಿ ಆದಾಯವನ್ನು ಗಳಿಸಲು ಸಾಧ್ಯ. ಆದರೆ ಪ್ರತಿನಿತ್ಯ ಆದಾಯ ಗಳಿಸುವ ಯಾವುದಾದರೂ ಸಂಸ್ಥೆ ಇದ್ದರೆ ಅದು ಹೈನುಗಾರಿಕೆ ಮಾತ್ರ ಎಂದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಿಂದ ರಾಸುಗಳನ್ನು ಕೊಳ್ಳಲು ಹಾಗೂ ನಿರ್ವಹಣೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ರಾಸುಗಳಿಗೆ ಹಾಗೂ ವೈಯುಕ್ತಿಕವಾಗಿ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಶೇ.25% ರಷ್ಟು ವಿಮಾ ಕಂತನ್ನು ಪಾವತಿ ಮಾಡಿದರೆ ಉಳಿದ ಶೇ.75% ರಷ್ಟು ವಿಮಾ ಕಂತಿನ ಮೊತ್ತವನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪಾವತಿ ಮಾಡುತ್ತದೆ ಎಂದರು.

ಮನ್ಮುಲ್ ನಿರ್ದೇಶಕ ಹೆಚ್. ಟಿ. ಮಂಜು ಅವರು ಮಾತನಾಡಿ,ಸಹಕಾರ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೆರಸದೇ ಸಂಘದ ಅಭಿವೃದ್ಧಿಗೆ ಗ್ರಾಮದ ಎಲ್ಲರೂ ಕೈಜೋಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರು ಸಹ ಹೈನುಗಾರಿಕೆಯಲ್ಲಿ ಹೆಚ್ಚಾಗಿ ಪಾಲ್ಗೊಂಡು ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.ಆದ್ದರಿಂದ ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲು ಮಾರಾಟ ಹಾಗೂ ಹಾಲು ಶೇಖರಣೆಯಲ್ಲಿ ಎರಡನೇ ಸ್ಥಾನದಲ್ಲಿದೆ.ಇದಕ್ಕೆ ರೈತರು ಅತಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವುದೇ ಕಾರಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಳಮ್ಮಮಾಯಣ್ಣಗೌಡ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್ ಎ ಸುರಗಿಹಳ್ಳಿ, ನಾಗಪ್ಪ ಅಲ್ಲಿಬಾದಿ, ಸಂಘದ‌ ಉಪಾಧ್ಯಕ್ಷರಾದ ಮಂಜುಳಾದೇವರಾಜು, ಚಂದ್ರಮ್ಮ,ಮಣಿಯಮ್ಮ,ಲಕ್ಷ್ಮಮ್ಮ,ಭಾಗ್ಯಮ್ಮ,ಇಂದ್ರಮ್ಮ, ಶೋಭ,ರೇಖಾ,ಸಂಘದ ಕಾರ್ಯದರ್ಶಿ ಪ್ರೇಮ ಪುಟ್ಟಸ್ವಾಮಿಗೌಡ,ಹಾಲು ಪರೀಕ್ಷಕಿ ಪಾರ್ವತಮ್ಮಮೋಹನ್ ಸಹಾಯಕಿ ನಂಜಮ್ಮ, ಅಪ್ಪಾಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!