ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಆರೋಪಿಸಿದರು.
ಪಾಂಡವಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 161 ಮಂದಿಯ ಪೈಕಿ 40 ಕುಟುಂಬಗಳಿಗೆ ಮಾತ್ರ ಕೇಂದ್ರ ಸರ್ಕಾರದ 50 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಸೇರಿದಂತೆ 1.50ಲಕ್ಷ ರೂ. ಪರಿಹಾರ ಪಾವತಿಯಾಗಿದೆ. ಆದರೆ ಉಳಿದವರಿಗೆ ಹಣ ಪಾವತಿಯಾಗಿಲ್ಲ ಎಂದರು. 121ಮಂದಿಗೆ ಕೇವಲ ಕೇಂದ್ರದ 50 ಸಾವಿರ ರೂ.ಮಾತ್ರ ಸಿಕ್ಕಿದೆ. ರಾಜ್ಯ ಸರ್ಕಾರದಿಂದ ಒಂದು ರೂ. ಪರಿಹಾರ ಸಿಕ್ಕಿಲ್ಲ. ಈ ಮೂಲಕ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಲ್ಲದೆ ಕೋವಿಡ್ ನಿಂದ ಮೃತಪಟ್ಟ 9 ಮಂದಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಅದರಲ್ಲಿ 6 ಅರ್ಜಿಗಳನ್ನು ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. 2 ಅರ್ಜಿಗಳು ನಮೂನೆ-4 ಇಲ್ಲ ಎಂದು ತಡೆಹಿಡಿದಿದ್ದು, ಒಂದು ಅರ್ಜಿ ತಿರಸ್ಕೃತಗೊಂಡಿದೆ. ಹೀಗಾಗಿ ಉಳಿದ 6ಮಂದಿ ಪರಿಹಾರಕ್ಕಾಗಿ ಇನ್ನೆಷ್ಟು ದಿನ ಜಾತಕ ಪಕ್ಷಿಯಂತೆ ಕಾಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಕೋವಿಡ್ ವೇಳೆ ಔಷಧಿ ಖರೀದಿ, ಹಾಸಿಗೆ, ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದ ಬಿಜೆಪಿ ಸರ್ಕಾರ ಇತ್ತೀಚಿನ ಪಿಎಸ್ಐ ನೇಮಕಾತಿ, ಉಪನ್ಯಾಸಕರ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಸಿದ್ದು,ಗುತ್ತಿಗೆದಾರರಿಂದ ಶೇ.40 ಕಮೀಷನ್ ಪಡೆಯುವ ಕಡು ಭ್ರಷ್ಟ ಸರ್ಕಾರ ಎಂದು ಲೇವಡಿ ಮಾಡಿದರು.
ಸರ್ಕಾರ ಈ ಕೂಡಲೇ ಕೋವಿಡ್ ನಿಂದ ಮೃತಪಟ್ಟ ನೊಂದ ಕುಟುಂಬಗಳಿಗೆ ಕೋವಿಡ್ ಪರಿಹಾರ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋ.ಪು.ಗುಣಶೇಖರ್ ಹಾಜರಿದ್ದರು.