ರೇಷ್ಮೆ ಕೃಷಿಯಲ್ಲಿ ಅಧಿಕ ಆದಾಯವಿದ್ದು,ಉತ್ತಮ ರೇಷ್ಮೆ ಬೆಳೆದು ಅಧಿಕ ಆದಾಯ ಗಳಿಸಿ ಎಂದು ರೇಷ್ಮೆ ಇಲಾಖೆ ನಿವೃತ್ತ ನಿರ್ದೇಶಕ ಎನ್.ವೈ.ಚಿಗರಿ ಸಲಹೆ ನೀಡಿದರು.
ಮದ್ದೂರು ತಾಲ್ಲೂಕಿನ ತೊರೆಚಾಕನಹಳ್ಳಿಯಲ್ಲಿ ರೋಟರಿ ಭಾರತೀನಗರ ಸೆಂಟ್ರಲ್ ವತಿಯಿಂದ ನಡೆದ ರೇಷ್ಮೆ ಹುಳುಗಳಿಗೆ ತಗಲುವ ರೋಗಗಳ ನಿರ್ವಹಣೆ ಹಾಗೂ ಗಂಟು ರೋಗ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು,
ದೇಶದಲ್ಲಿ ಪ್ರತಿದಿನ ಅದಾಯ ತಂದು ಕೊಡುವ ಆರು ಇಲಾಖೆಗಳಲ್ಲಿ ರೇಷ್ಮೆ ಇಲಾಖೆ ಕೂಡ ಒಂದು ಎಂದರು.
ಯಾವ ಗೂಡು ರೋಗ ರಹಿತವಾಗಿದೆಯೋ ಅದು ಒಳ್ಳೆಯ ಗೂಡು. ರೋಗಕ್ಕೆ ತುತ್ತಾದ ಗೂಡನ್ನು ಹೂತು ಹಾಕಬೇಕು. ಇದರಿಂದ ಸಾರ್ವಜನಿಕರಿಗೆ ರೋಗ ಬರದಂತೆ ತಡೆಯಬಹುದು ಎಂದು ತಿಳಿಸಿದರು.
ಒಳ್ಳೆಯ ಗೂಡು ಬೆಳೆಯಬೇಕಾದರೆ ಸ್ವಚ್ಚತೆಗೆ ಅದ್ಯತೆ ನೀಡಬೇಕು.ರೋಗ ಹರಡುವುದನ್ನು ತಡೆಯಲು ಮೇಜಿನ ಸುತ್ತ ಔಷಧಿ ಸಿಂಪಡಿಸಬೇಕು. ಒಂದು ಚದರ ಮೀಟರ್ಗೆ 2.5ಲೀಟರ್ ಔಷಧ ಸಿಂಪಡಿಸಬೇಕು. ಯಾವ ಕಾರಣಕ್ಕೂ ಸೊಪ್ಪನ್ನು ನೆಲದ ಮೇಲೆ ಇಟ್ಟುಕೊಂಡು ಹಾಕಬಾರದು. ಔಷದಿ ಸಿಂಪಡಿಸಿದ 20 ದಿನಗಳ ನಂತರ ಸೊಪ್ಪನ್ನು ಹುಳು ಸಾಕಾಣಿಕೆ ಬಳಸಬೇಕು. ನುಸಿ ಪೀಡೆಗೆ ತುತ್ತಾಗುವುದನ್ನು ತಪ್ಪಿಸಲು ಶೇ.03ರ ಗಂದಕ ದ್ರಾವಣವನ್ನು ಸಿಂಪಡಿಸಬೇಕು ಎಂದರು.
ರೇಷ್ಮೆ ಇಲಾಖೆ ನಿರ್ದೇಶಕ ರಾಚಪ್ಪ ಮಾತನಾಡಿ, ರೇಷ್ಮೆ ಹುಳು ಕೊಡುವಾಗ ಎಲ್ಲಾ ಪರೀಕ್ಷೆ ಮಾಡಿ ಕೊಡುತ್ತೇವೆ. ರೈತರು ಶುಚಿಯಿಂದ ರೇಷ್ಮೆ ಹುಳುಗಳನ್ನು ಕಾಪಾಡಿ ಸಮರ್ಪಕವಾಗಿ ಇಲಾಖೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿದ್ದೇಗೌಡ, ರಾಚಪ್ಪ,ರೇಷ್ಮೆ ಮಂಡಳಿ ನಿರ್ದೇಶಕರಾದ ನವೀನ್,ವೆಂಕಟೇಶ್, ನಿವೃತ್ತ ರೇಷ್ಮೆ ವಿಸ್ತರಣಾಧಿಕಾರಿ ಪುಟ್ಟರಾಮು,ಸಿದ್ದರಾಮು,ರೋಟರಿ ನಿರ್ದೇಶಕರಾದ ಮಧುಸೂದನ್,ಶಿವರಾಮು, ಕೆಂಪೇಗೌಡ, ಪ್ರಸನ್ನ ವೆಂಕಟೇಶ್, ಹಾಗೂ ರೇಷ್ಮೆ ಬೆಳೆಗಾರರು ಹಾಜರಿದ್ದರು.