Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವಕರ್ಮ ಸಮುದಾಯದ ಸಾಮಾಜಿಕ ನ್ಯಾಯಕ್ಕಾಗಿ ಎಸ್.ಟಿ ಗೆ ಸೇರಿಸಿ: ಕೆ.ಪಿ ನಂಜುಂಡಿ

ವಿಶ್ವಕರ್ಮ ಸಮಾಜಕ್ಕೆ ತಲ ತಲಾಂತರಗಳಿಂದ  ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ವಿಶ್ವಕರ್ಮರ ಸಮಗ್ರ ಅಭಿವೃದ್ದಿಯಾಗಬೇಕಾದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಎಸ್.ಟಿ ವರ್ಗಕ್ಕೆ ನಮ್ಮ ಸಮಾಜವನ್ನು ಸೇರಿಸಬೇಕು. ಇದಕ್ಕಾಗಿ  ಎಚ್ಚೆತ್ತುಕೊಂಡು ಸಂಘಟಿತರಾಗಿ  ಹೋರಾಟಕ್ಕೆ ವಿಶ್ವಕರ್ಮ ಸಮಾಜ  ಸಜ್ಜಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲ್ಲೂಕು ವಿಶ್ವಕರ್ಮ ಸಂಘಟನೆಗಳ ಒಕ್ಕೂಟದ  ವತಿಯಿಂದ  ನಡೆದ  ತಾಲ್ಲೂಕು ಮಟ್ಟದ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ವಿಶ್ವಕರ್ಮ ಸಮುದಾಯ ಕುರಿತು ಆಶಯ ನುಡಿಗಳನ್ನಾಡಿ ವಿಶ್ವಕರ್ಮ ಸಮುದಾಯವು ಸಂಘಟಿತರಾಗದೇ ಇದ್ದಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
1976ರಲ್ಲಿ ಮುಖ್ಯಮಂತ್ರಿಗಳಾಗಿದ್ದ  ದೇವರಾಜ ಅರಸು ರವರು  ಹಾವನೂರು ಆಯೋಗ ರಚನೆ ಮಾಡಿ   ನಿರ್ಲಕ್ಷ್ಯ ವಂಚಿತ ಜಾತಿಗಳಿಗೆ ಅಳೆದು ತೂಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರು. ಇದರಿಂದ ಸಣ್ಣ ಸಣ್ಣ ಜಾತಿಗಳಿಗೆ ಅನುಕೂಲವಾಯಿತು.  ಈ ಸಂದರ್ಭದಲ್ಲಿ  ನಮ್ಮ ವಿಶ್ವಕರ್ಮ ಸಮಾಜದ ಮುಖಂಡರು ಸಂಘಟಿತರಾಗಿ ಹೋರಾಟ ಮಾಡಿದ್ದರೆ. ನಮನ್ನು ಎಸ್.ಟಿ.ವರ್ಗಕ್ಕೆ ಸೇರ್ಪಡೆ ಮಾಡಿಸಿದ್ದರೆ. ನಮ್ಮ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿತ್ತು.  ನಮ್ಮ ನಿರಂತರ 9ವರ್ಷಗಳ ಹೋರಾಟದ ಫಲವಾಗಿ ವಿಶ್ವಕರ್ಮ ಜಯಂತಿ ಆಚರಣೆ ಆರಂಭಿಸಲಾಯಿತು. ನಂತರ ವಿಶ್ವಕರ್ಮ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲಾಯಿತು ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮಾತನಾಡಿ, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ. ಇದನ್ನು ತಾವು ಸದುಪಯೋಗ ಪಡಿಸಿಕೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆ ಅಡಿ ಕುಡಿಯುವ ನೀರಿಗೆ 192ಕೋಟಿ, ಗ್ರಾಮಸಡಕ್ ಯೋಜನೆಗೆ  20ಕೋಟಿ, ಎಸ್.ಸಿ,ಪಿ,  ಎಸ್.ಟಿ.ಪಿ. 32ಕೋಟಿ, ಆದರ್ಶ ಗ್ರಾಮ ಸೇರಿದಂತೆ ಒಟ್ಟು  245ಕೋಟಿ ಅನುದಾನವನ್ನು ಕೆ.ಆರ್.ಪೇಟೆ ತಾಲ್ಲೂಕಿಗೆ  ನೀಡಿದ್ದೇನೆ. ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾಗುವ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ   ಕಟ್ಡಡ ನಿರ್ಮಾಣ ಅಗತ್ಯ ಅನುದಾನವನ್ನು ನೀಡುವ ಭರವಸೆ ನೀಡಿದರು.
ಮಾಜಿ ಸಚಿವ ಡಾ.ನಾರಾಯಣಗೌಡ ಮಾತನಾಡಿ, ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಿಶ್ವಕರ್ಮ ಭವನದ ನಿರ್ಮಾಣಕ್ಕೆ ಸರ್ಕಾರದಿಂದ 50 ಲಕ್ಷರೂ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿದ್ದಲ್ಲದೇ ನನ್ನ ಅನುದಾನದಿಂದಲೂ 10 ಲಕ್ಷರೂ ಅನುದಾನ ನೀಡಿದ್ದೆ. ನಾನೀಗ ಶಾಸಕನಲ್ಲ, ಕ್ಷೇತ್ರದ ಹಾಲಿ ಶಾಸಕರಾದ ಮಂಜುನಾಥ್ ಅವರು ಸರ್ಕಾರದಿಂದ ವಿಶೇಷ ಅನುದಾನ 50 ಲಕ್ಷರೂ ಬಿಡುಗಡೆ ಮಾಡಿಸಲು ಹೋರಾಟ ನಡೆಸಬೇಕು ಎಂದರು.
ಶಾಸಕರಾದ ಹೆಚ್.ಟಿ.ಮಂಜು ಮಾತನಾಡಿ ತಾಲ್ಲೂಕಿನ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ. ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಬರುವ ಅನುಧಾನ, ಗಂಗಾಕಲ್ಯಾಣ ಯೋಜನೆ, ಸೇರಿದಂತೆ ಎಲ್ಲಾ ಯೋಜನೆಗೆ ಫಲಾನುಭವಿಗಳನ್ನು  ತಾಲ್ಲೂಕು ವಿಶ್ವಕರ್ಮ ಮುಖಂಡರ ಸಲಹೆ ಪಡೆದು ಅರ್ಹರನ್ನು  ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.
ವಿಶ್ವಕರ್ಮ ಮಹಾಸಂಸ್ಥಾನ ಮಠದ ಶ್ರೀಗುರುಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ  ಮಲ್ಲಿಕಾರ್ಜುನ್, ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಬಿಜೆಪಿ ಮುಖಂಡ ಸಚ್ಚಿದಾನಂದ,  ರಾಜ್ಯ ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ ವಿಕ್ರಮ್. ಆಚಾರ್ಯ, ರಾಜ್ಯ ಸಹಕಾರ ಮಾರಾಟ
ಮಹಾಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್, ತಾ.ಪಂ.ಮಾಜಿ ಅಧ್ಯಕ್ಷ ಜವರಾಯಿಗೌಡ,  ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್,  ಜಿಲ್ಲಾ ಹಾಫ್‌ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಡಾಲುರವಿ,
ಪುರಸಭೆ ಅಧ್ಯಕ್ಷ ನಟರಾಜು ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!