Sunday, October 27, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿಯವರು ಬಿಜೆಪಿ ಕೈಗೊಂಬೆಯಾಗಿರುವುದಕ್ಕೆ ಸಿಕ್ಕಿದೆ ಮತ್ತೊಂದು ಸಾಕ್ಷಿ!

✍️ ಮಾಚಯ್ಯ ಎಂ ಹಿಪ್ಪರಗಿ

ಯಾವ ಘಳಿಗೆಯಲ್ಲಿ ಬಿಜೆಪಿಯವರ ಲೆಟರ್‌ಹೆಡ್‌ನಲ್ಲಿ ತಾನೂ ಸಹಿ ಮಾಡಿ, ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಕುಮಾರಸ್ವಾಮಿಯವರು ದೂರು ಕೊಟ್ಟರೋ, ಆ ಕ್ಷಣವೇ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಒಳ-ಒಪ್ಪಂದ ಮಾಡಿಕೊಂಡಿರುವುದಕ್ಕೆ ಅಧಿಕೃತ ರುಜುವಾತು ಲಭಿಸಿದಂತಾಗಿತ್ತು. ಅಲ್ಲಿಂದಾಚೆಗೆ ನಡೆದ ಪ್ರತಿ ವಿದ್ಯಮಾನವೂ ಅದನ್ನು ಸಾಬೀತು ಮಾಡುತ್ತವೆ. ’ವಿರೋಧ ಪಕ್ಷವಾಗಿ, ಆಡಳಿತಾರೂಢ ಪಕ್ಷದ ವೈಫಲ್ಯವನ್ನು ಟೀಕಿಸುವುದು ನಮ್ಮ ಹೊಣೆ. ಆ ಕಾರಣಕ್ಕಾಗಿ, ಮತ್ತೊಂದು ವಿರೋಧ ಪಕ್ಷವಾದ ಬಿಜೆಪಿ ಜೊತೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಅಷ್ಟೆ. ಯಾವ ಮೈತ್ರಿ ಮಾತುಕತೆಯೂ ನಡೆದಿಲ್ಲ ಎಂದು ಕುಮಾರಸ್ವಾಮಿಯವರು ಏನೇ ಸಬೂಬು ಹೇಳಿದರೂ, ಜನ ಆ ಮಾತನ್ನು ಗುಮಾನಿಯಿಂದಲೇ ನೋಡಬೇಕಾಗಿದೆ. ಅದಕ್ಕೆ ಕಾರಣ ಸ್ವತಃ ಕುಮಾರಸ್ವಾಮಿಯವರೇ ಆಗಿದ್ದಾರೆ. ತನ್ನನ್ನು ತಾನು ‘ಸಾಂದರ್ಭಿಕ ಶಿಶು’ ಎಂದು ಕರೆದುಕೊಳ್ಳುವ ಅವರು, ಆ ರೂಪಕಕ್ಕೆ ತಕ್ಕಂತೆ, ತಾವಾಡಿದ ಮಾತುಗಳಿಗೇ ವ್ಯತಿರಿಕ್ತವಾಗಿ ವರ್ತಿಸುವುದು ಅವರ ವ್ಯಕ್ತಿತ್ವವೇ ಆಗಿಹೋಗಿದೆ. ಅದಕ್ಕೆ ಹಲವಾರು ನಿದರ್ಶನಗಳುಂಟು.

ಲೋಕಸಭಾ ಚುನಾವಣೆಗೆ, ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಆದರೆ ಕುಮಾರಸ್ವಾಮಿಯವರು ಈ ಬಗ್ಗೆ ಅತಿಯಾದ ಆಸಕ್ತಿಯನ್ನು ತೋರಿಸುತ್ತಿರುವುದು, ಜೆಡಿಎಸ್ ಪಕ್ಷದೊಳಗೆ ದೊಡ್ಡ ಆಂತರಿಕ ಕ್ಷೋಭೆಯನ್ನು ಹುಟ್ಟುಹಾಕಿರುವಂತಿದೆ. ಕುಮಾರಸ್ವಾಮಿಯವರು ವಿದೇಶ ಪ್ರವಾಸದಲ್ಲಿರುವಾಗ, ಅವರ ತಂದೆ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿ ’ನಮ್ಮ ಪಕ್ಷ ಯಾವ ಪಕ್ಷದೊಂದಿಗೂ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಪಕ್ಷ ಸಂಘಟಿಸುತ್ತೇವೆ’ ಎಂದು ಹೇಳಿದರೆ; ವಿದೇಶದಿಂದ ವಾಪಾಸು ಬಂದ ಕುಮಾರಸ್ವಾಮಿಯವರು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕೂತು ’ನಮ್ಮ ತಂದೆ ಜಾತ್ಯತೀತ ಸಿದ್ದಾಂತವನ್ನು ನಂಬಿ ಹಾಳಾದರು’ ಎಂದು ಕಮೆಂಟ್ ಮಾಡುತ್ತಾರೆ. ದೇವೇಗೌಡರ ರಾಜಕೀಯ ನಡೆಗಳ ಬಗ್ಗೆ ಹಲವರಿಗೆ ತಕರಾರುಗಳಿರಬಹುದು, ಆದರೆ ಅವರ ರಾಜಕೀಯ ಚಾಣಾಕ್ಷತೆಯ ಬಗ್ಗೆ ಮತ್ತು ತಂತ್ರಗಾರಿಕೆಗಳ ಬಗ್ಗೆ ಯಾರಿಗೂ ಗೊಂದಲವಿಲ್ಲ. ಹಾಗಾಗಿಯೇ ಅವರನ್ನು ಕರ್ನಾಟಕದ ಮಟ್ಟಿಗೆ ರಾಜಕಾರಣದ ಫೀನಿಕ್ಸ್ ಹಕ್ಕಿಗೆ ಹೋಲಿಸಲಾಗುತ್ತೆ. ಅಂತಹ ದೇವೇಗೌಡರ ರಾಜಕೀಯ ಸಿದ್ಧಾಂತವನ್ನು ತಪ್ಪು ಎಂದು ಅವರಿಗೆ ಬುದ್ದಿ ಹೇಳಲು ಕುಮಾರಸ್ವಾಮಿ ಮುಂದಾಗುತ್ತಾರೆಂದರೆ; ಕುಮಾರಸ್ವಾಮಿಯವರ ಅನುಪಸ್ಥಿತಿಯನ್ನು ನೋಡಿಕೊಂಡು ದೇವೇಗೌಡರು ಪ್ರೆಸ್‌ಮೀಟ್ ಮಾಡಿ, ಕುಮಾರಸ್ವಾಮಿಯವರ ಮೈತ್ರಿ ನಡೆಗೆ ಅಡ್ಡಗಾಲು ಹಾಕುವಂತೆ ‘ಸ್ವತಂತ್ರ ಸ್ಪರ್ಧೆಯ ಘೋಷಣೆ ಮೊಳಗಿಸುತ್ತಾರೆಂದರೆ, ಜೆಡಿಎಸ್ ಪಕ್ಷದೊಳಗೆ ಸಣ್ಣದಾಗಿ ಮಿಸುಕಾಡುತ್ತಿರುವ ಭಿನ್ನಮತವನ್ನು ನಾವು ಅಂದಾಜಿಸಬಹುದು. ಇದು ಕೇವಲ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಮಾತ್ರವಾಗಿರದೆ, ಕುಟುಂಬದೊಳಗಿನ ಬಿರುಕಿಗೂ ಕಾರಣವಾಗುವ ಸಾಧ್ಯತೆ ಇರುವುದರಿಂದ ಅಷ್ಟು ಸುಲಭಕ್ಕೆ ಈ ಯಾವ ವಿದ್ಯಮಾನಗಳನ್ನೂ ನಿರ್ಲಕ್ಷಿಸಲಾಗುವುದಿಲ್ಲ.

ಕುಮಾರಸ್ವಾಮಿಯವರು ಪಕ್ಷದ ಹಿತ ಮತ್ತು ಕುಟುಂಬದೊಳಗಿನ ಒಗ್ಗಟ್ಟನ್ನು ಧಿಕ್ಕರಿಸಿ ಬಿಜೆಪಿ ಸಖ್ಯಕ್ಕೆ ಹಾತೊರೆಯುತ್ತಿದ್ದಾರಾ? ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲು ಅವರು ತೋರುತ್ತಿರುವ ಆತುರ ಹಾಗೂ ಆ ಉದ್ದೇಶಕ್ಕಾಗಿ ಅವರು ಬಿಜೆಪಿಯನ್ನು ಅವಲಂಬಿಸುತ್ತಿರುವ ವೇಗಗಳನ್ನು ನೋಡಿದಾಗ ಇದು ನಿಜ ಎನ್ನಿಸದೆ ಇರಲಾರದು.

ಅದಕ್ಕೆ ಈಗ ಮತ್ತೊಂದು ಪುರಾವೆ ಸಿಕ್ಕಿದೆ. ಕರ್ನಾಟಕದ ಸೋಲಿನಿಂದ ಬಿಜೆಪಿ ಪಕ್ಷ ಅಕ್ಷರಶಃ ಹತಾಶವಾಗಿತ್ತು. ಸೋತದ್ದು ಮಾತ್ರವಲ್ಲ, ಕಾಂಗ್ರೆಸ್ ಜನರ ಮುಂದಿರಿಸಿದ್ದ ಗ್ಯಾರಂಟಿ ಯೋಜನೆಗಳು, ಬಿಜೆಪಿಯ ಚುನಾವಣಾ ತಂತ್ರಗಾರಿಕೆಗಳಿಗೆ ಭವಿಷ್ಯದ ಕಂಟಕಗಳಾಗಲಿವೆ ಎಂಬುದೂ ಬಿಜೆಪಿಯ ಆತಂಕಕ್ಕೆ ಮುಖ್ಯ ಕಾರಣ. ಅದಕ್ಕೋಸ್ಕರವೇ, ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಪಕ್ಷ ಸಾಧ್ಯವಾದಷ್ಟು ಅಪಪ್ರಚಾರ ಮಾಡಿತಲ್ಲದೇ, ಕೇಂದ್ರದ ತನ್ನ ಅಧಿಕಾರವನ್ನು ಬಳಸಿಕೊಂಡು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಅಸಹಕಾರ ತೋರಿತು. ಸಿದ್ದರಾಮಯ್ಯನವರು ನಿಪುಣ ರಾಜಕೀಯ ಅರ್ಥಶಾಸ್ತ್ರಜ್ಞ, ಸಾಲದ್ದಕ್ಕೆ ಹದಿನಾಲ್ಕು ಬಜೆಟ್‌ಗಳನ್ನು ಮಂಡಿಸಿದ ಅನುಭವವೂ ಅವರಿಗುಂಟು. ಅವರು ಗ್ಯಾರಂಟಿ ಯೋಜನೆಗಳನ್ನು ಖಂಡಿತವಾಗಿಯೂ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಹಾಗೇನಾದರು ಆದಲ್ಲಿ, ಬಿಜೆಪಿಯ ರಾಜಕೀಯ ಅಜೆಂಡಾಕ್ಕೆ ದೊಡ್ಡ ಏಟು ಬೀಳಲಿದೆ ಎಂಬುದನ್ನು ಮನಗಂಡ ಬಿಜೆಪಿ ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕ ದಾಳಿಗೂ ಮುಂದಾಯಿತು. ವೈಯಕ್ತಿಕ ಕಾರಣಕ್ಕೆ ಸಿದ್ದರಾಮಯ್ಯನವರ ಮೇಲೆ ಅಪಾರ ದ್ವೇಷವನ್ನು ಹೊಂದಿರುವ ಕುಮಾರಸ್ವಾಮಿಯವರು ಕೂಡಾ ಈ ದಾಳಿಯ ಭಾಗವಾಗಿ, ಸಿದ್ದರಾಮಯ್ಯ ಮತ್ತು ಅವರ ಮಗ ಡಾ. ಯತೀಂದ್ರ ಮೇಲೆ ಟ್ರಾನ್ಸ್ಫರ್ ದಂಧೆಯ ಆರೋಪಗಳ ಸುರಿಮಳೆಗರೆದರು.

ಆದರೆ, ಜನರ ನಡುವೆ ಸಿದ್ದರಾಮಯ್ಯನವರ ಸುದೀರ್ಘ ಸ್ವಚ್ಛ ಆಡಳಿತ ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಅವರ ಮೇಲೆ ಮಾಡಲಾದ ಭ್ರಷ್ಟಾಚಾರದ ಯಾವ ಆರೋಪಗಳನ್ನು ಜನ ಸ್ವೀಕರಿಸಲಿಲ್ಲ.

ಅಲ್ಲಿಯವರೆಗೂ ಬಿಜೆಪಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ತನ್ನ ದಾಳಿಯ ಗುರಿಯಾಗಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣವುಂಟು. ಕಾಂಗ್ರೆಸ್ ಪಕ್ಷದೊಳಗೆ ಇಂದಲ್ಲ, ನಾಳೆ ಅಧಿಕಾರ ಹಂಚಿಕೆಯ ಕುರಿತು ಏನಾದರು ಪರಿಣಾಮಕಾರಿ ಭಿನ್ನಾಭಿಪ್ರಾಯಗಳು ಭುಗಿಲೇಳುವ ಸಾಧ್ಯತೆ ಇದ್ದರೆ ಅದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಮಾತ್ರ ಎಂಬುದು ಬಿಜೆಪಿಯ ನಿರೀಕ್ಷೆ. ಹಾಗಾಗಿ, ಡಿಕೆ ಶಿವಕುಮಾರ್ ಅವರ ಆಡಳಿತ ವೈಖರಿ ಅಥವಾ ವ್ಯಕ್ತಿತ್ವದ ಮೇಲೆ ದಾಳಿ ಮಾಡಲು ಮುಂದಾಗಿರಲಿಲ್ಲ. ಅವರನ್ನು ಸ್ವಚ್ಛಂಧವಾಗಿ ಬೆಳೆಯಲು ಬಿಟ್ಟು, ಸಿದ್ದರಾಮಯ್ಯನವರಿಗೆ ಸಮನಾಂತರ ನಾಯಕನ ವಾತಾವರಣ ಸೃಷ್ಟಿಸಿ, ಆಗ ಭುಗಿಲೇಳುವ ಭಿನ್ನಮತದ ಲಾಭವನ್ನು ತನ್ನ ಆಪರೇಷನ್ ಕಮಲಕ್ಕೆ ಬಳಸಿಕೊಳ್ಳುವುದು ಬಿಜೆಪಿಯ ಮುಂದಾಲೋಚನೆಯಾಗಿತ್ತು.

ಆದರೆ ಅವರ ಲೆಕ್ಕಾಚಾರವೇ ತಲೆಕೆಳಗಾಗುವಂತೆ, ಕಾಂಗ್ರೆಸ್ ಸಂಸ್ಕೃತಿಗೆ ಅಪವಾದವೆಂಬಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಸಣ್ಣಪುಟ್ಟ ಮನಸ್ತಾಪಗಳನ್ನು ನಿವಾರಿಸಿಕೊಂಡು ಹೈಕಮಾಂಡ್‌ನ ಸಂಧಾನಸೂತ್ರದ ಪ್ರಕಾರ ಪಕ್ಷವನ್ನು ಮುನ್ನಡೆಸಲು ಶುರು ಮಾಡಿದರು. ಅಲ್ಲದೇ, ಬಿಜೆಪಿಯ ಆಪರೇಷನ್ ಲೆಕ್ಕಾಚಾರಕ್ಕೆ ತಿರುಮಂತ್ರ ತೀಡುವಂತೆ ವಲಸಿಗ ಬಿಜೆಪಿ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಗೂ ಶಿವಕುಮಾರ್ ಮುಂದಾದರು.

ಇನ್ಮುಂದೆ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಗ್ರೇಸ್ ನೀಡದೆ, ಅವರನ್ನು ಟಾರ್ಗೆಟ್ ಮಾಡಿಕೊಳ್ಳಬೇಕು ಅಂತ ಬಿಜೆಪಿ ತೀರ್ಮಾನಿಸಿದ್ದೇ ಆಗ. ಅಲ್ಲದೇ, ಕಾಂಗ್ರೆಸ್ ಸರ್ಕಾರಕ್ಕೆ ತಾವು ಕೆಟ್ಟ ಹೆಸರು ತರಬೇಕೆಂದರೆ, ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡಿದರೆ ಪ್ರಯೋಜನವಿಲ್ಲ, ಅದನ್ನು ಜನ ನಂಬುವುದೂ ಇಲ್ಲ. ಡಿಕೆ ಶಿವಕುಮಾರ್ ಹೆಸರನ್ನು ಮುಂದಿಟ್ಟುಕೊಂಡು ಆರೋಪ ಮಾಡಿದರೆ, ಜನರೂ ನಂಬುತ್ತಾರೆ, ಸರ್ಕಾರಕ್ಕೆ ಕೆಟ್ಟ ಹೆಸರು ತರಬಹುದು ಎಂಬುದು ಬಿಜೆಪಿಯ ಹೊಸ ಲೆಕ್ಕಾಚಾರವಾಯ್ತು.

ಹಾಗಾಗಿಯೇ ಕಂಟ್ರ್ಯಾಕ್ಟರುಗಳ ಕಮೀಷನ್ ಹಗರಣವನ್ನು ಬಿಜೆಪಿಯವರು ಡಿಕೆ ಶಿವಕುಮಾರ್ ಮೇಲೆ ಹೊರಿಸಿದ್ದು. ಯಾವಾಗ ಜನ ಸ್ವಲ್ಪ ಮಟ್ಟಿಗೆ ಆ ಆರೋಪವನ್ನು ಗಂಭೀರವಾಗಿ ಪರಿಗಣಿಸಿದರೋ, ಆಗ ಬಿಜೆಪಿ ಸಿದ್ದರಾಮಯ್ಯನವರಿಂದ ತನ್ನ ಟಾರ್ಗೆಟ್ ಬದಲಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡಿತು. ಅಷ್ಟೇ ಅಲ್ಲ, ಕುಮಾರಸ್ವಾಮಿಯವರಿಗೂ ಈ ಹೊಸ ಟಾರ್ಗೆಟ್ ಅನ್ನು ಡೈರೆಕ್ಟ್ ಮಾಡಲಾಯಿತು.

ಅದರ ಭಾಗವಾಗಿಯೇ, ಇಷ್ಟು ದಿನ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿದ್ದ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಸಾಫ್ಟ್ ಕಾರ್ನರ್ ಪ್ರದರ್ಶಿಸುತ್ತಾ ಬಂದಿದ್ದ ಕುಮಾರಸ್ವಾಮಿಯವರು ಈಗ ಏಕಾಏಕಿ ಶಿವಕುಮಾರ್ ಅವರ ಮೇಲೆ ೨೦೦೪ರ ನೈಸ್ ಹಗರಣವನ್ನು ಮುಂದಿಟ್ಟುಕೊಂಡು ದಾಳಿಗಿಳಿದಿದ್ದಾರೆ. ‘೫೦ ಕೋಟಿಯಿಂದ ಶಿವಕುಮಾರ್ ೧೫೦೦ ಕೋಟಿ ಆಸ್ತಿ ಹೇಗೆ ಮಾಡಿಕೊಂಡರು? ನನ್ನ ಬಳಿ ಡಿಕೆ ಬ್ರದರ‍್ಸ್ ಹಗರಣದ ದಾಖಲೆಗಳಿವೆ. ಬಿಡುಗಡೆ ಮಾಡುವೆ’ ಎಂದು ಹೇಳುತ್ತಿದ್ದಾರೆ.

ಹಾಗೆ ನೋಡಿದರೆ, ಡಿಕೆ ಶಿವಕುಮಾರ್ ಮತ್ತು ದೇವೇಗೌಡ ಕುಟುಂಬದ ನಡುವೆ ಜಿದ್ದಾಜಿದ್ದಿ ಇಂದು ನಿನ್ನೆಯದಲ್ಲ. ವಕ್ಕಲಿಗ ಸಮುದಾಯದ ಮೇಲಿನ ಹಿಡಿತಕ್ಕಾಗಿ ಎಸ್.ಎಂ.ಕೃಷ್ಣ ಮತ್ತು ದೇವೇಗೌಡರ ನಡುವೆ ನಡೆದ ಕಾಳಗದಲ್ಲಿ ಕೃಷ್ಣಾಪ್ತ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಿದ್ದವರು. ಆದರೆ ಇತ್ತೀಚೆಗೆ ಅದೆಲ್ಲವೂ ಕರಗಿ, ಆಪ್ತರಾಗಿ ಗುರುತಿಸಿಕೊಂಡಿದ್ದರು. ಸ್ವತಃ ಕುಮಾರಸ್ವಾಮಿಯವರೇ ತನ್ನನ್ನು ಮತ್ತು ಡಿಕೆ ಶಿವಕುಮಾರ್ ಅವರನ್ನು ಜೋಡೆತ್ತು ಎಂದು ಕರೆದುಕೊಂಡಿದ್ದರು. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯನವರು ಮತ್ತು ಶಿವಕುಮಾರ್ ಅವರ ನಡುವೆ ದಿಲ್ಲಿಯಲ್ಲಿ ಹಗ್ಗ ಜಗ್ಗಾಟ ನಡೆದಾಗಲೂ ಗೌಡರ ಪಾಳೆಯ ಡಿ.ಕೆ. ಶಿವಕುಮಾರ್ ಪರವಾಗಿ ಇಲ್ಲಿ ಧ್ವನಿಗಳು ಏಳುವಂತೆ ನೋಡಿಕೊಂಡಿತ್ತು. ಶಿವಕುಮಾರ್ ಕೂಡಾ, ಕುಮಾರಸ್ವಾಮಿಯವರ ಪ್ರಶ್ನೆ ಬಂದಾಗಲೆಲ್ಲ ’ನಮ್ಮ ಅಣ್ಣ, ಏನೋ ಹೇಳ್ತಿದಾರೆ. ಹೇಳ್ಕೊಂಡೋಗಲಿ ಬಿಡಿ’ ಎಂದು ಲಘುವಾಗಿ ಸ್ವೀಕರಿಸುತ್ತಿದ್ದರೇ ವಿನಾ, ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿರಲಿಲ್ಲ.

ಅಂತಹ ಡಿ.ಕೆ. ಶಿವಕುಮಾರ್‌ರ ಮೇಲೆ ಕುಮಾರಸ್ವಾಮಿಯವರು ಏಕಾಏಕಿ ದಾಳಿಗಿಳಿದಿದ್ದಾರೆ, ಅದೂ ಬಿಜೆಪಿಯ ಹೊಸ ರಣತಂತ್ರಕ್ಕೆ ಪೂರಕವಾಗಿ ಅಂದಾಗ, ಕುಮಾರಸ್ವಾಮಿಯವರು ಬಿಜೆಪಿಯ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ನಂಬುವುದು ಹೇಗೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!