Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿಯವರ ಆರೋಪಗಳೂ, ಗಾಂಧೀಜಿಯ ಭ್ರಷ್ಟಾಚಾರವೂ….

✍️ ಗಿರೀಶ್ ತಾಳಿಕಟ್ಟೆ

(ಬಿಜೆಪಿ- ಜೆಡಿಎಸ್ ಮೈತ್ರಿ ಕಾರಣಕ್ಕೆ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿರುವ ಕುಮಾರಸ್ವಾಮಿಯವರ ಕೇಂದ್ರಿತ ಈ ಬರಹ ಮರು ಓದಿಗಾಗಿ, ಸಣ್ಣಪುಟ್ಟ ಪರಿಷ್ಕರಣೆಯೊಂದಿಗೆ…..)

ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಸರ್ಕಾರ ರಚನೆಯಾಗಿ ಕೆಲವೇ ತಿಂಗಳಾಗಿವೆ. ಅಷ್ಟರಲ್ಲಿ ಕುಮಾರಸ್ವಾಮಿಯವರು ಈ ಪರಿ ಮುಗಿಬೀಳುವ ಅಗತ್ಯವಿತ್ತೇ? ಎಂಬ ಪ್ರಶ್ನೆಗೆ ಬಹುಶಃ ಅವರೇ ಉತ್ತರ ಕೊಟ್ಟುಕೊಳ್ಳಬೇಕು. ಯಾಕೆಂದರೆ ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ, ನಲವತ್ತು ಪರ್ಸೆಂಟ್ ಕಮೀಷನ್ ದಂಧೆಯ ಭ್ರಷ್ಟಾಚಾರದ ಆರೋಪಕ್ಕೆ ರಾಜಾರೋಷವಾಗಿ ತುತ್ತಾಗಿದ್ದ ಬೊಮ್ಮಾಯಿಯವರ ಬಿಜೆಪಿ ಸರ್ಕಾರದ ಮೇಲೂ ಕುಮಾರಸ್ವಾಮಿಯವರು ಇಷ್ಟು ತೀವ್ರವಾಗಿ ದಾಳಿ ನಡೆಸಿರಲಿಲ್ಲ. (ಈಗ ಅದೇ ಫಾರ್ಟಿ ಪರ್ಸೆಂಟ್ ಕಮೀಷನ್ ಸರ್ಕಾರ ಕೊಟ್ಟ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇದೆಯಾ ಎನ್ನುವುದು ಬೇರೆ ಪ್ರಶ್ನೆ). ತಮ್ಮ ಪಕ್ಷದ ಹೀನಾಯ ಸೋಲಿನ ಹತಾಶೆ ಹಾಗೂ ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾದದ್ದನ್ನು ಸಹಿಸಿಕೊಳ್ಳಲಾಗದೆ ಅವರು ಹೀಗೆ ವರ್ತಿಸುತ್ತಿದ್ದಾರೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಆ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ.

ಕೋಮುವಾದಿ ಬಿಜೆಪಿ ಜೊತೆಗಿನ ಮೈತ್ರಿಯ ಬಗ್ಗೆ ಕೇಳಿದಾಗಲೆಲ್ಲ, ‘ಈ ಜನವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಡಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ’ ಎಂಬ ಸಮರ್ಥನೆ ಕೊಟ್ಟುಕೊಳ್ಳುತ್ತಾರೆ. ಅವರ ಆ ಮಾತು ಎಷ್ಟು ಪೇಲವ ಅನ್ನೋದು, ಜನರಿಗೆ ಮಾತ್ರವಲ್ಲ, ಸ್ವತಃ ಅವರಿಗೂ ಗೊತ್ತು. ಅಧಿಕಾರಹೀನ ಹತಾಷೆ ಅವರ ಎಲ್ಲಾ ನಡೆ ಮತ್ತು ಹೇಳಿಕೆಗಳ ಹಿಂದಿರುವ ದಿಟ ಎನ್ನುವುದು ವಾಸ್ತವ.

ಈಗ, ಭ್ರಷ್ಟಾಚಾರದ ಕುರಿತು ಇಷ್ಟೆಲ್ಲ ಆರೋಪಗೈಯ್ಯುತ್ತಿರುವ ಇದೇ ಕುಮಾರಸ್ವಾಮಿಯವರು ಹಿಂದೆ ಭ್ರಷ್ಟಾಚಾರವನ್ನು ಹೇಗೆಲ್ಲ ವ್ಯಾಖ್ಯಾನಿಸಿಕೊಂಡಿದ್ದರು ಎಂಬುದಕ್ಕೆ ಕೆಲವೊಂದು ನಿದರ್ಶನಗಳನ್ನು ನೋಡೋಣ.

2011ರಲ್ಲಿ ನಡೆದ ಘಟನೆ. ಜನಲೋಕಪಾಲ್ ಮಸೂದೆಯ ಕುರಿತು ಆಗಿನ ಯುಪಿಎ ಸರ್ಕಾರ ಚರ್ಚೆ ನಡೆಸಿತ್ತು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ‘ಜನಲೋಕಪಾಲ್ ಮಸೂದೆಯನ್ನು ರೂಪಿಸುವ ಮೊದಲು ಎಲ್ಲಾ ರಾಜ್ಯಗಳ ಸಿಎಂಗಳ ಸಲಹೆ ಪಡೆಯಬೇಕು’ ಎಂಬ ಹೇಳಿಕೆ ಕೊಟ್ಟಿದ್ದರು. ಅದೇ ಸಂದರ್ಭದಲ್ಲಿ ಕಾರ್ಯನಿಮಿತ್ತ ಹುಬ್ಬಳ್ಳಿಗೆ ಹೋಗಿದ್ದ ಕುಮಾರಸ್ವಾಮಿಯವರನ್ನು ಈ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಪತ್ರಕರ್ತರು ಕೇಳಿದಾಗ, “ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿಯವರು ಇದ್ದಿದ್ದರೆ ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಉಳಿಯಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರನ್ನು ಕೂಡಾ ಈ ಕಾಲದ ಭ್ರಷ್ಟಚಾರದ ಸಹಸಂಗಡಿಗರನ್ನಾಗಿ ವ್ಯಾಖ್ಯಾನಿಸುವ ಮೂಲಕ ಕುಮಾರಸ್ವಾಮಿಯವರು ಭ್ರಷ್ಟಚಾರವನ್ನು ಸಮರ್ಥಿಸಿಕೊಂಡಿದ್ದರು. ಯಥಾ ಪ್ರಕಾರ ಈ ಹೇಳಿಕೆ ವಿವಾದವಾದ ನಂತರ, ತಾನು ಹಾಗೆ ಹೇಳಿಲ್ಲ, ಆದರೆ ಮಾಧ್ಯಮದವರು ಹೇಳಿಕೆಯನ್ನು ತಿರುಚಿದ್ದಾರೆ ಎಂದು ಬಚಾವಾಗುವ ಪ್ರಯತ್ನ ಮಾಡಿದ್ದರು.

ಇವತ್ತು ಪೆನ್‌ಡ್ರೈವ್ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಇದೇ ಕುಮಾರಸ್ವಾಮಿಯವರನ್ನು 2014ರಲ್ಲಿ ಆಡಿಯೋ ಸಿಡಿಯೊಂದು ಭ್ರಷ್ಟಚಾರದ ಚರ್ಚೆಯಲ್ಲಿ ಸಿಲುಕಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಎಂಎಲ್‌ಸಿ ಚುನಾವಣೆಯ ಸಂದರ್ಭ. ವಿಜಯಪುರದ ಜೆಡಿಎಸ್ ನಾಯಕ ವಿಜುಗೌಡ ಪಾಟೀಲರು ಎಂಎಲ್‌ಸಿ ಟಿಕೇಟಿಗಾಗಿ ಕುಮಾರಸ್ವಾಮಿಯವರನ್ನು ಸಂಪರ್ಕಿಸಿದ್ದರು. ಆಗ ಕುಮಾರಸ್ವಾಮಿಯವರು, ವಿಜುಗೌಡ ಬೆಂಬಲಿಗರಿಗೆ ಹೇಳಿದರನ್ನೆದ ಮಾತುಕತೆಯ ಸಿಡಿಯೊಂದು ತಲ್ಲಣ ಸೃಷ್ಟಿಸಿತ್ತು. ಅದರಲ್ಲಿ ಕುಮಾರಸ್ವಾಮಿಯವರದು ಎನ್ನಲಾದ ಧ್ವನಿ “ನಮ್ಮ ಪ್ರತಿ ಎಂಎಲ್‌ಎನೂ ಒಂದೊಂದು ಕೋಟಿ ದುಡ್ಡು ಕೇಳುತ್ತಿದ್ದಾರೆ. ಆಮೇಲೆ ನೀವು ಯಾರನ್ನು ಬೇಕಾದ್ರೂ ಎಂಎಲ್‌ಸಿ ಮಾಡ್ಕೊಳಿ ಎನ್ನುತ್ತಿದ್ದಾರೆ….. ನಲವತ್ತು ಜನರಿಂದ (ಜೆಡಿಎಸ್ ಎಂಎಲ್‌ಎಗಳು) ನಲವತ್ತು ಕೋಟಿ ಕೇಳ್ತಾ ಇದಾರೆ. ಇದು ನನ್ನ ಪರಿಸ್ಥಿತಿ” ಎಂದು ಸ್ಪಷ್ಟವಾಗಿ ಹೇಳಿತ್ತು. ಅಂದರೆ, ಜನರ ಆಶೋತ್ತರಗಳಿಗೆ ಸದನದೊಳಗೆ ಧ್ವನಿಯಾಗಬೇಕಾದ ಎಂಎಲ್‌ಸಿ ಟಿಕೇಟನ್ನು ದುಡ್ಡಿಗೋಸ್ಕರ ಮಾರಾಟ ಮಾಡಿಕೊಳ್ಳುವ ಭ್ರಷ್ಟಾಚಾರಕ್ಕೆ ಕುಮಾರಸ್ವಾಮಿಯವರ ಧ್ವನಿ ಯಾವ ಮುಲಾಜೂ ಇಲ್ಲದೆ ಬೇಡಿಕೆ ಇಟ್ಟಿತ್ತು. ವಿಪರ್ಯಾಸವೆಂದರೆ, ಕುಮಾರಸ್ವಾಮಿಯವರು ಆ ಧ್ವನಿ ತನ್ನದಲ್ಲ ಎಂದು ಯಾವ ಸಂದರ್ಭದಲ್ಲೂ ನಿರಾಕರಿಸಲಿಲ್ಲ. ಬದಲಿಗೆ, “ಎಲ್ಲಾ ಪಕ್ಷಗಳಲ್ಲೂ ಈ ವ್ಯವಹಾರ ನಡೆಯುತ್ತದೆ, ಅದನ್ನು ನಾನು ಬಾಯಿಬಿಟ್ಟು ಹೇಳಿದ್ದೇನಷ್ಟೆ” ಎಂದು ಸಮರ್ಥಿಸಿಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ’ಬೇರೆ ಪಕ್ಷಗಳಲ್ಲಿ ಏನು ನಡೆಯುತ್ತದೆ ಅನ್ನೋದರ ಮೂಲಕ, ತನ್ನ ಮೇಲಿನ ಈ ಭ್ರಷ್ಟಾಚಾರದ ಆರೋಪವನ್ನು ಕುಮಾರಸ್ವಾಮಿಯವರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂಬ ಮಾತನ್ನು ಸದನದಲ್ಲಿ ಆಡಿದ್ದರೆ; ಆಗಿನ್ನೂ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ದಿವಂಗತ ಅನಂತ್‌ಕುಮಾರ್ ಅವರು “ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಮಾಜಿ ಮುಖ್ಯಮಂತ್ರಿಯೊಬ್ಬರು ಈ ಬಗೆಯ ಭ್ರಷ್ಟಚಾರವನ್ನು ಈ ರೀತಿ ಸಮರ್ಥಿಸಿಕೊಳ್ಳಲು ಮುಂದಾಗಿರುವುದು ದುರಾದೃಷ್ಟಕರ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇನ್ನು ತೀರಾ ಇತ್ತೀಚೆಗೆ, 2018ರ ಜೂನ್ 11ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗಾಂಧಿಭವನದಲ್ಲಿ ಮಾತನಾಡುತ್ತಾ ಮಾಧ್ಯಮದವರ ಎದುರು, “ಏಕಾಏಕಿ ಭ್ರಷ್ಟಾಚಾರ ನಿಲ್ಲಿಸಲು ಮುಂದಾದರೆ ನನ್ನ ಸ್ಥಾನವೇ ಉಳಿಯದು” ಎಂಬ ಮಾತನ್ನು ಹೇಳಿದ್ದರು. ಮುಂದುವರೆದು “ಇತ್ತೀಚೆಗೆ ತಾನು ಶೃಂಗೇರಿ ಮಠದ ಶ್ರೀಗಳನ್ನು ಭೇಟಿ ಮಾಡಿದ್ದ ವೇಳೆ ಅವರು ಭ್ರಷ್ಟಾಚಾರ ನಿಲ್ಲಿಸಿ ಎಂದು ಹೇಳಿದ್ದರು. ಅದಕ್ಕೆ ನಾನು ಸಂಪೂರ್ಣವಾಗಿ ನಿಲ್ಲಿಸೋದು ಕಷ್ಟವೆಂದು ಹೇಳಿದ್ದೆ. ಸಿಬ್ಬಂದಿ-ಅಧಿಕಾರಿಗಳ ವರ್ಗಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲೇ ಭ್ರಷ್ಟಾಚಾರ ನಡೆಯುತ್ತದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೆಲವು ಮಧ್ಯವರ್ತಿಗಳಿದ್ದಾರೆ. ವರ್ಗಾವಣೆ ಮಾಡಿಸಲು ಓಡಾಡುತ್ತಿರುತ್ತಾರೆ” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಆ ಮೂಲಕ ಮತ್ತೊಮ್ಮೆ ಭ್ರಷ್ಟಾಚಾರವನ್ನು ಅವರು ಸಮರ್ಥಿಸಿಕೊಂಡಿದ್ದರು.

ಮೇಲಿನ ಮೂರೂ ನಿದರ್ಶನಗಳಲ್ಲಿ, ಇವತ್ತಿನ ವ್ಯವಸ್ಥೆಯ ಭ್ರಷ್ಟಾಚಾರದ ಹುಳುಕನ್ನು ಯಾವ ಮುಲಾಜೂ ಇಲ್ಲದೆ ಹೊರಗೆಡವಿದ ಕುಮಾರಸ್ವಾಮಿಯವರ ದಿಟ್ಟತನ ಕೆಲವರಿಗೆ ಕಾಣಿಸಬಹುದಾದರೂ, ಅಂತಹ ವ್ಯವಸ್ಥೆಯನ್ನು ಬದಲಾಯಿಸುವ ಅಪೇಕ್ಷೆಗಿಂತ ಅದನ್ನು ಒಪ್ಪಿ ಸ್ವೀಕರಿಸುವ ಹಾಗೂ ಸಹಜೀಕರಿಸುವ ಉಮೇದೇ ಅವರ ಮಾತುಗಳಲ್ಲಿ ಧ್ವನಿಸುತ್ತಿರುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ.

ಭ್ರಷ್ಟಾಚಾರದ ಕುರಿತು ತಮ್ಮೊಳಗೆ ಈ ರೀತಿಯ ಗೊಂದಲಮಯ ವ್ಯಾಖ್ಯಾನೆಗಳನ್ನು ಹೊಂದಿರುವ ಕುಮಾರಸ್ವಾಮಿಯವರು ಇವತ್ತು ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದನ್ನು ರಾಜಕೀಯ ವಿಶ್ಲೇಷಕರು ಹತಾಶೆಯ ಮಾನದಂಡದಲ್ಲಿ ಅಳೆಯುತ್ತಿರುವುದು ಸಮರ್ಪಕವಾಗಿಯೇ ಇದೆ. ಯಾಕೆಂದರೆ ಸ್ವತಃ ತಾನು ಮುಖ್ಯಮಂತ್ರಿಯಾಗಿದ್ದಾಗಲು ವರ್ಗಾವಣೆ ದಂಧೆ ನಿರಾತಂಕವಾಗಿ ನಡೆಯುತ್ತಿದ್ದುದನ್ನೂ, ಅದನ್ನು ವಿಧಾನಸೌಧದ ಮೂರನೇ ಮಹಡಿಯ ಮಧ್ಯವರ್ತಿಗಳು ನಡೆಸುತ್ತಿರುವುದನ್ನೂ ಅಸಹಾಯಕರಾಗಿ ಒಪ್ಪಿಕೊಂಡಿದ್ದ ಕುಮಾರಸ್ವಾಮಿಯವರು, ಈಗ ಅದೇ ವರ್ಗಾವಣೆಯ ದಂಧೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಮಗ ನಡೆಸುತ್ತಿದ್ದಾರೆ ಎಂದು ಆರೋಪಿಸಿದರೆ ಹತಾಶೆ ಎನ್ನದೆ ಬೇರ‍್ಯಾವ ರೀತಿಯಲ್ಲಿ ಸ್ವೀಕರಿಸಲು ಸಾಧ್ಯ? ಆದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಹೊಣೆಗಾರಿಕೆಯನ್ನು ನಾವು ತಳ್ಳಿಹಾಕಲು ಬರುವುದಿಲ್ಲ. ಸರ್ಕಾರವನ್ನು ಸದಾ ಎಚ್ಚರಿಕೆಯಲ್ಲಿಡುವಂತಹ ಪ್ರಯತ್ನಗಳನ್ನು ವಿರೋಧ ಪಕ್ಷಗಳು ಖಂಡಿತ ಮಾಡಬೇಕು, ಆದರೆ ಅದು ಬೆದರಿಕೆಯೊಡ್ಡುವಂತಹ ಪ್ರಯತ್ನಗಳಾಗಿರಬಾರದು ಎಂಬುದನ್ನು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್, ಮೂರೂ ಪಕ್ಷಗಳು ತಿಳಿದಿರಬೇಕಾದ್ದು ಉತ್ತಮ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!