Thursday, September 19, 2024

ಪ್ರಾಯೋಗಿಕ ಆವೃತ್ತಿ

ವಕೀಲರ ಮೇಲೆ ”ಪೊಲೀಸ್ ದೌರ್ಜನ್ಯ” ಖಂಡಿಸಿ ಪ್ರತಿಭಟನೆ


  • ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು 

  • ವಕೀಲರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆ ಕೈ ಬಿಡಲು ಆಗ್ರಹ

ಮಂಗಳೂರಿನ ಬಂಟ್ವಾಳದಲ್ಲಿ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಪೋಲಿಸರು ದೌರ್ಜನ್ಯವೆಸಗಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲಾ ವಕೀಲರ ಸಂಘ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಂದು ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು, ಸಂಘದ ಆವರಣದಿಂದ ಮೆರವಣಿಗೆ ಹೊರಟು ಬೆಂಗಳೂರು ಮೈಸೂರು ಹೆದ್ದಾರಿ, ಆರ್ ಪಿ ರಸ್ತೆ, ಕೆ ಆರ್ ರಸ್ತೆ ಯಲ್ಲಿ ಸಾಗಿ ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ವಕೀಲ ಕುಲದೀಪ್ ಶೆಟ್ಟಿ ಮೇಲೆ ದೌರ್ಜನ್ಯ ನಡೆಸಿ ಸುಳ್ಳು ಮೊಕದ್ದಮೆ ದಾಖಲಿಸಿರುವ ಬಂಟ್ವಾಳ ತಾಲೂಕಿನ ಮುಂಚಾಲಕಟ್ಟೆ ಠಾಣೆಯ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ವಕೀಲ ಕುಲದೀಪ್ ಶೆಟ್ಟಿಯನ್ನು ಗುರಿಯನ್ನಾಗಿಸಿಕೊಂಡು ಅವರ ಮೇಲೆ ಕಳ್ಳತನದ ಸುಳ್ಳು ಆರೋಪ ಮಾಡಿ, ದೌರ್ಜನ್ಯ ನಡೆಸಿದ್ದಾರೆ, ಮನೆಯಲ್ಲಿದ್ದ ವಕೀಲರನ್ನು ಅರೆ ನಗ್ನಾವಸ್ಥೆಯಲ್ಲಿ ಎಳೆದೊಯ್ದ್ದು ದೌರ್ಜನ್ಯ ಮಾಡಿದ್ದಲ್ಲದೆ ಆತನ ತಾಯಿ- ಮಗನನ್ನು ಎಳೆದಾಡಿದ್ದಾರೆ ಎಂದು ದೂರಿದರು.

ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಪೊಲೀಸರು ಯಾರದೋ ಪ್ರಭಾವಕ್ಕೆ ಒಳಗಾಗಿ ದುರುದ್ದೇಶದಿಂದ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ದೌರ್ಜನ್ಯ ಮಾಡಿದ್ದಾರೆ. ಉಪನಿರೀಕ್ಷಕ ಸುರೇಶ್ ಮನೆಯಿಂದ ವಕೀಲನನ್ನು ಅರೆ ನಗ್ನಾವಸ್ಥೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ದೂರಿದರು.

ಕಾನೂನು ಪಾಲನೆ ಮಾಡಬೇಕಾದ ಪೊಲೀಸರು ಗೂಂಡಾ ರೀತಿ ವರ್ತಿಸಿದ್ದಾರೆ. ಯಾವುದೇ ವ್ಯಕ್ತಿ ಮೇಲೆ ಮೊಕದ್ದಮೆ ಇದ್ದರೆ ಆತನನ್ನು ಬಂಧಿಸಲು ಕಾನೂನಿನ ಚೌಕಟ್ಟು ಇರುತ್ತದೆ, ಆದರೆ ಮುಂಚಾಲಕಟ್ಟೆ ಠಾಣೆಯ ಪೊಲೀಸರು ಕಳ್ಳತನದ ಸುಳ್ಳು ಮೊಕದ್ದಮ್ಮೆ ದಾಖಲು ಮಾಡಿ ವಕೀಲನ ವಿರುದ್ಧ ಷಡ್ಯಂತರ ರೂಪಿಸಿದ್ದಾರೆ ಎಂದು ಕಿಡಿಕಾರಿದರು.

ವಕೀಲರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆ ಕೈ ಬಿಡಬೇಕು, ಆತನ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು, ದೌರ್ಜನ್ಯ ನಡೆಸಿರುವ ಪೊಲೀಸ್ ಉಪ ನಿರೀಕ್ಷಕ ಸುರೇಶ್ ಸೇರಿದಂತೆ ತಪ್ಪಿತಸ್ಥ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಿ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಸೀತಾರಾಮು, ಎಂ.ಶ್ರೀನಿವಾಸ್, ರಾಮಚಂದ್ರ ಎನ್., ಕೆ.ಪಿ.ರತಿಕುಮಾರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!