Saturday, May 18, 2024

ಪ್ರಾಯೋಗಿಕ ಆವೃತ್ತಿ

ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರ ಮೇಲೆ ಮೊಕದ್ದಮೆ ದಾಖಲಿಸಲು ಆಗ್ರಹ

ಭ್ರಷ್ಟಚಾರದ ಆರೋಪದಡಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಪ್ರಭಾರ ವ್ಯವಸ್ಥಾಪಕ ಎಂ.ಬಿ.ರಾಜೇಶ್ ಅಮಾನತುಗೊಂಡಿದ್ದರೂ ಹೊಸದಾಗಿ ಬಂದಿರುವ ಸಿಒಓ ಅವರಿಗೆ ಅಧಿಕಾರ ನೀಡದೇ ಅಧ್ಯಕ್ಷರ ಬೆಂಬಲದೊಂದಿಗೆ ಮುಂದುವರೆಯುತ್ತಿದ್ದು, ಕೂಡಲೇ ಅಧಿಕಾರ ಹಸ್ತಾಂತರಿಸಬೇಕು ಮತ್ತು ಭ್ರಷ್ಟಾಚಾರ ಮಾಡಿರುವ ಎಂ.ಬಿ.ರಾಜೇಶ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ಎಚ್.ಬಸವರಾಜು ಆಗ್ರಹಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲಿಜಗಲಿಮೋಳೆ ಗ್ರಾಮದ ಮಲ್ಲಯ್ಯ ಬಿನ್ ನಕಲಿ ನಂಜಯ್ಯ ಎಂಬುವವರು 2008ರಲ್ಲಿ ಮೃತರಾಗಿದ್ದರೂ ಅವರ ಹೆಸರಿನಲ್ಲಿ 2014 ಮಾರ್ಚ್ 14ರಲ್ಲಿ ಆರು ವರ್ಷಗಳ ನಂತರ ಸದಸತ್ವ ನೀಡಿ ಮಲ್ಲಯ್ಯ ಅವರ ಜಮೀನಿನ ಆರ್‌ಟಿಸಿಗಳನ್ನು ಅಕ್ರಮವಾಗಿ ಪಡೆದುಕೊಂಡು 98,000 ರೂ. ಕುರಿ ಸಾಲವನ್ನು ನೀಡಿದಂತೆ ಮಾಡಿ ಸೆಲ್ಪ್ ಚೆಕ್ ಮೂಲಕ ತಾವೇ ಹಣ ಮಂಜೂರು ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು.

ಪಿಎಲ್‌ಡಿ ಬ್ಯಾಂಕ್ ಕಟ್ಟಡದ ಮೇಲಂತಸ್ತಿಗೆ ನೀರಿನ ಸಂಪು ಹಾಗೂ ತಡೆಗೋಡೆ ಬಿರುಕು ಬಿಟ್ಟಿರುವುದನ್ನು ಸರಿಪಡಿಸಲು ಇಲಾಖಾ ಅನುಮತಿ ಪಡೆಯದೇ ಅಥವಾ ಆಡಳಿತ ಮಂಡಳಿಯಲ್ಲಿ ಮಂಡಿಸದೇ 3,90,000 ರೂ.ಗಳನ್ನು ಬಳಕೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ದೂರಿದರು.

1000 ರೂ.ಗಳ ಮೇಲಿನ ಹೆಚ್ಚಿನ ಖರ್ಚಿನ ಹಣಕ್ಕೆ ಚೆಕ್ ಮುಖಾಂತರ ಕೊಡಬೇಕೆಂದು ನಿರ್ಣಯ ಕೈಗೊಂಡಿದ್ದರೂ ನೌಕರರಿಗೆ ಸಂಬಳ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಚೆಕ್ ಮೂಲಕ ನೀಡದೇ ನಗದು ರೂಪದಲ್ಲಿ ನೀಡಿದ್ದಾರೆ. ಪಿಎಲ್‌ಡಿ ಬ್ಯಾಂಕ್‌ನಲ್ಲಿ ಬೈಲಾ ಮಿತಿಯನ್ನು ಮೀರಿ ಅಖೈರು ನಗದನ್ನು ಬ್ಯಾಂಕಿಗೆ ಕಟ್ಟದೆ 7,57,515 ರೂ. ಬಡ್ಡಿ ಹಣ ಬ್ಯಾಂಕಿಗೆ ಬರದಂತೆ ಮಾಡಿ ಅರ್ಥಿಕ ನಷ್ಟ ಉಂಟು ಮಾಡಿದ್ದಾರೆಂದು ದೂರಿದರು.

ನಿರ್ದೆಶಕ ಪ್ರಸನ್ನ ಮಾತನಾಡಿ, ಪಿಎಲ್‌ಎಲ್‌ಡಿ ಬ್ಯಾಂಕ್‌ನಲ್ಲಿ ಎಂ.ಬಿ.ರಾಜೇಶ್ ಮಾಡಿರುವ ಅವ್ಯವಹಾರವನ್ನು ಪರಿಶೀಲಿಸಿ ಕೇಂದ್ರ ಸಿಸಿಸಿ ಕಾರ್ಯಾಲಯವು ಅಮಾನತು ಅದೇಶವನ್ನು ನೀಡಿದೆ, ಕೆ.ಆರ್‌.ಪೇಟೆಯಿಂದ ಹೊಸದಾಗಿ ಸಿಇಓ ಆಗಿ ಪ್ರಭುಸ್ವಾಮಿ ಎಂಬುವವರು ನೇಮಕವಾಗಿದ್ದರೂ, ಅಧ್ಯಕ್ಷರು ಕರ್ತವ್ಯಕ್ಕೆ ಹಾಜರಾಗಲು ಬಿಡುತ್ತಿಲ್ಲ, ಇವೆಲ್ಲವನ್ನು  ನೋಡಿದರೇ ಅಧ್ಯಕ್ಷರೇ ಭ್ರಷ್ಟಚಾರದಲ್ಲಿ ಶಾಮೀಲು ಆಗಿರುವಂತೆ ಸಂಶಯ
ಮೂಡುತ್ತಿದೆ, ರೈತರ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ ಮಾಡಿರುವ ಅಪರ ಸಿಇಓ ರಾಜೇಶ್ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಬೇಕು, ಪ್ರಭುಸ್ವಾಮಿಗೆ ಅಧಿಕಾರ ಹಸ್ತಾಂತರಿಸಬೇಕು, ಇಲ್ಲದಿದ್ದರೇ ಷೇರುದಾರರು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ನಿರ್ದೆಶಕರಾದ ರಮ್ಯ, ಶಿವಮಾದೇಗೌಡ, ಸುರೇಶ್, ಶಿವರಾಜು, ಮಾಜಿ ಅಧ್ಯಕ್ಷ ವೆಂಕಟರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!