Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರಿನಲ್ಲಿ ಚಿರತೆ ಸಂಸಾರ ; 8 ಚಿರತೆ ಮರಿಗಳಲ್ಲಿ ಸೆರೆ ಸಿಕ್ಕಿದ್ದು 2 ಮರಿಗಳು ಮಾತ್ರ !

ವರದಿ : ಪ್ರಭು ವಿ.ಎಸ್

ಮದ್ದೂರು ತಾಲೂಕಿನ ಸೋಮನಹಳ್ಳಿ ಜಿ.ಪಂ.ವ್ಯಾಪ್ತಿಯ ಕೂಳಗೆರೆ ಗ್ರಾಮದ ಜಮೀನೊಂದರಲ್ಲಿ 2 ಚಿರತೆ ಮರಿಗಳು ಪತ್ತೆಯಾಗಿ, 6 ಚಿರತೆ ಮರಿಗಳು ತಪ್ಪಿಸಿಕೊಂಡಿವೆ.

ಕೂಳಗೆರೆ ಗ್ರಾಮದ ಕೆ.ಆರ್. ಶಿವಮೂರ್ತಿ ಎಂಬುವರು ಬುಧವಾರ ಜಮೀನಿನ ಬಳಿ ಹೋದಾಗ ಅಲ್ಲಿರುವ ಕಲ್ಲು ಬಂಡೆ ಬಳಿ ಚಿರತೆ ಮರಿಗಳು ಕಾಣಿಸಿದೆ. ಹತ್ತಿರ ಹೋದಾಗ ತಾಯಿ ಚಿರತೆ ಸೇರಿದಂತೆ ಎಂಟು ಚಿರತೆ ಮರಿಗಳು ಕಂಡಿದೆ. ಜನರನ್ನು ನೋಡಿ ಗಾಬರಿಗೊಂಡ ತಾಯಿ ಚಿರತೆ ಹಾಗೂ 6 ಚಿರತೆ ಮರಿಗಳು ಸ್ಥಳದಿಂದ ಪರಾರಿಯಾದವು. ಸಿಕ್ಕ ಎರಡು ಚಿರತೆ ಮರಿಗಳನ್ನು ರೈತರು ರಕ್ಷಿಸಿ, ಗ್ರಾಮಕ್ಕೆ ಕೊಂಡೊಯ್ದು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಗವಿಯಪ್ಪ ಹಾಗೂ ರವಿ ಅವರು ಸ್ಥಳೀಯ ರೈತರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿದರೂ ಉಳಿದ ಚಿರತೆ ಮರಿಗಳು ಪತ್ತೆಯಾಗಿಲ್ಲ. ಗ್ರಾಮಕ್ಕೆ ಎರಡು ಚಿರತೆ ಮರಿಗಳನ್ನು ಕರೆತಂದಿದ್ದ ಶಿವಮೂರ್ತಿ ಹಾಗೂ ಕೀರ್ತಿ ಅವರಿಂದ ಮಾಹಿತಿ ಪಡೆದು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.

nudikarnataka.com

ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿಕೊಂಡಿರುವ ತಾಯಿ ಚಿರತೆ ಸೇರಿದಂತೆ ಉಳಿದ 6 ಚಿರತೆ ಮರಿಗಳನ್ನು ಸೆರೆಹಿಡಿಯಲು ಅಗತ್ಯ ಕ್ರಮವಹಿಸಿದ್ದು, ಈಗಾಗಲೇ ಅಗತ್ಯವಿರುವ ಸ್ಥಳಗಳಲ್ಲಿ ಬೋನ್‌ ಇಟ್ಟು ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ಜನರ ಆಕ್ರೋಶ

ಸೋಮನಹಳ್ಳಿ ಜಿ.ಪಂ.ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ, ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಚಿರತೆಗಳ ಹಾವಳಿಯಿಂದ ಸ್ಥಳೀಯ ರೈತರು ಜಮೀನುಗಳಿಗೆ ತೆರಳಲು ಆತಂಕಪಡುವ ಪರಿಸ್ಥಿತಿ ಬಂದೊದಗಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಂಡುಬಂದಿರುವ ಸ್ಥಳಗಳಲ್ಲಿ ಬೋನ್‌ಗಳನ್ನಿಟ್ಟು ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದರು.

ಚಿರತೆ ಮರಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೂಳಗೆರೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಚಿರತೆ ಮರಿಗಳ ವೀಕ್ಷಣೆ ಜತೆಗೆ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!