Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಕರು ಆರೋಗ್ಯದ ಕಡೆಗೂ ಗಮನಹರಿಸಲಿ: ಬಿ.ವಿವೇಕಾನಂದ

ಪ್ರಸ್ತುತ ಶಿಕ್ಷಕರು ಒತ್ತಡದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರು ಆರೋಗ್ಯದ ಕಡೆಗೂ ಗಮನ ಹರಿಸಬೇಕು, ಇಂತಹ ಆರೋಗ್ಯ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು, ಮಂಡ್ಯ ತಾಲ್ಲೂಕು ಸಹಶಿಕ್ಷಕರ ಸಂಘ ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹೇಳಿದರು.

ಮಂಡ್ಯ ತಾಲೂಕು, ದಕ್ಷಿಣ ವಲಯದ ಪ್ರೌಢಶಾಲಾ ಸಹಶಿಕ್ಷಕರ ವತಿಯಿಂದ ಮಂಡ್ಯದ ಗುರುಭವನದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಕರು, ಶಿಕ್ಷಕರ ಕುಟುಂಬ ವರ್ಗದವರಿಗೆ ಶ್ರೀಚಾಮುಂಡೇಶ್ವರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಶಿವಣ್ಣಮಂಗಲ ಮಾತನಾಡಿ, ‘ಇಂತಹ ಶಿಬಿರಗಳನ್ನು ಸಂಘ ಆಗಾಗ್ಗೆ ನಡೆಸುವುದರ ಮೂಲಕ ಶಿಕ್ಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ’ ಎಂದು ಹೇಳಿದರು.

ಶಿಬಿರದಲ್ಲಿ ಜನರಲ್ ಮೆಡಿಸಿನ್ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಚರ್ಮ ರೋಗ, ಜನರಲ್ ಸರ್ಜರಿ, ಸ್ತ್ರೀರೋಗ ತಜ್ಞರು, ದಂತ, ನೇತ್ರ ಹಾಗೂ ಮಕ್ಕಳ ತಜ್ಞರೂ ಸೇರಿದಂತೆ ಆಸ್ಪತ್ರೆಯ ಸುಮಾರು ಇಪ್ಪತ್ತೈದು ವೈದ್ಯ ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿದ್ದರು, ಇದೇ ಸಮಯದಲ್ಲಿ ಬಿಪಿ, ಷುಗರ್, ಇಸಿಜಿ, ರಕ್ತ ಪರೀಕ್ಷೆಗಳನ್ನು ಮಾಡಲಾಯಿತು. ಸುಮಾರು 200 ಮಂದಿ ಶಿಕ್ಷಕರು ಹಾಗೂ ಕುಟುಂಬ ವರ್ಗದವರು ಶಿಬಿರದಲ್ಲಿ ಭಾಗವಹಿಸಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಡಿ. ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಕಾರ್ಯದರ್ಶಿ ರವಿಶಂಕರ್, ತಾಲೂಕು ಅಧ್ಯಕ್ಷ ನಂದೀಶ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಕುಮಾರ್, ಶಿಬಿರದ ಸಂಚಾಲಕ ಜಿ.ಎಸ್.ಸಿದ್ದರಾಜು, ಉಪಾಧ್ಯಕ್ಷೆ ಸುರೇಖಾ, ಸಂಘಟನಾ ಕಾರ್ಯದರ್ಶಿ ಡಿ.ಕೆ.ಜಗದೀಶ್, ಪದಾಧಿಕಾರಿಗಳಾದ ಶ್ರೀಧರ್ ಮೂರ್ತಿ, ಸಿ.ಚಿಕ್ಕತಿಮ್ಮಯ್ಯ, ಎಂ.ಚನ್ನಕೃಷ್ಣೇಗೌಡ, ಮತ್ತಿತರರು ಇದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!