Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಕ್ತ, ನ್ಯಾಯ ಸಮ್ಮತ ಮತಎಣಿಕೆ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ಆತಂಕ: ಚುನಾವಣಾ ಆಯುಕ್ತರಿಗೆ ಪತ್ರ

ಹದಿನೆಂಟನೇ ಲೋಕಸಭಾ ಚುನಾವಣೆಯ ಮುಕ್ತ ಹಾಗೂ ನ್ಯಾಯ ಸಮ್ಮತ ಮತ ಎಣಿಕೆಯ ಬಗ್ಗೆ ರಾಷ್ಟ್ರೀಯ ರೈತ ಸಂಘಟನೆ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ) ಆತಂಕ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ದೇಶದ ಜನತೆ ಮೇಲುಗೈ ಸಾಧಿಸಬೇಕು ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ ಅವರಿಗೆ ಪತ್ರ ಬರೆದಿದೆ.

ಜೂನ್‌ 4 ರಂದು ನಡೆಯಲಿರುವ ಮತದಾನ ಎಣಿಕೆಯ ಪ್ರಕ್ರಿಯೆಯಲ್ಲಿ ಜನರ ತೀರ್ಪನ್ನು ಹಾಳು ಮಾಡಿ ಸರ್ವಾಧಿಕಾರ ಆಡಳಿತ ನಡೆಸುತ್ತಿರುವವರಿಗೆ ಸಹಾಯ ಮಾಡುವ ಸಾಧ್ಯತೆಯಿರುವ ಕಾರಣ ನಾವು ಭಾರತದಲ್ಲಿರುವ ರೈತರ ಪರವಾಗಿ ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಿಂದಿನ ಚುನಾವಣೆಗಳಿಗಿಂತ ಇದು ವಿಭಿನ್ನವಾಗಿರುವುದರಿಂದ ರೈತರ ವಿವಿಧ ಬೇಡಿಕೆಗಳಿರುವ ಎಂಎಸ್‌ಪಿ ಜಾರಿಯ ಬಗ್ಗೆ ಭಾರತರ ರೈತರಿಗೆ ವಿಶ್ವಾಸ ದ್ರೋಹ ಮಾಡಿದ ಬಿಜೆಪಿಯನ್ನು ಎಸ್‌ಕೆಎಂ ಚುನಾವಣಾ ಪ್ರಚಾರದಲ್ಲಿ ನೇರವಾಗಿ ವಿರೋಧಿಸಿತ್ತು. ಎಸ್‌ಕೆಎಂ ಒಕ್ಕೂಟ ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಒಕ್ಕೂಟವನ್ನು ಉಳಿಸಲು ಹಾಗೂ ರೈತರ, ಕಾರ್ಮಿಕರ ಹಾಗೂ ಎಲ್ಲ ವಲಯಗಳ ಬಡ ವರ್ಗದವರ ಜೀವಂತ ಸಮಸ್ಯೆಗಳನ್ನು ಪರಿಹರಿಸಲು ಶಾಂತಿಯುತವಾಗಿ ಹೋರಾಟ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯು ಬಿಜೆಪಿ ಹಾಗೂ ದೇಶದ ಜನರ ನಡುವಿನ ಹೋರಾಟವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮೂರು ಕಾರ್ಪೋರೇಟ್ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಒಕ್ಕೂಟಗಳ ಬೆಂಬಲದೊಂದಿಗೆ ರೈತರು 13 ತಿಂಗಳ ದೀರ್ಘಕಾಲೀನ ಹೋರಾಟ ನಡೆಸಿದರು. ರೈತರ ಹೋರಾಟದಲ್ಲಿ 750 ರೈತರು ಹುತಾತ್ಮರಾದರು. ಸರ್ವಾಧಿಕಾರವನ್ನು ವಿರೋಧಿಸಿದ ನಾಲ್ವರು ರೈತರು ಹಾಗೂ ಒರ್ವ ಪತ್ರಕರ್ತನ ಹತ್ಯೆಯಾಯಿತು. ರೈತರ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ದೇಶ ವಿರೋಧಿ, ವಿದೇಶಿ ಉಗ್ರರು ಹಾಗೂ ಖಲಿಸ್ತಾನಿಗಳ ಬೆಂಬಲ ಎಂದು ವಿಷ ಉಗುಳಿತ್ತು ಎಂದು ಪತ್ರದಲ್ಲಿ ಎಸ್‌ಕೆಎಂ ತಿಳಿಸಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ನಿರಂತರವಾಗಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದರ ಜೊತೆ ನಿರ್ದಿಷ್ಟ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣವನ್ನು ಮಾಡಿ ಭಾರತದ ಸಂವಿಧಾನವನ್ನು ನಿರಂತರವಾಗಿ ಬೆದರಿಸುವಂತೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಕೊಳಕು ಭಾಷೆಯನ್ನು ಉಪಯೋಗಿಸಿ ನಮ್ಮ ಮಹಾನ್‌ ನಾಯಕರ ಸಾಮರಸ್ಯ ಸಾಮಾಜಿಕ ಜೀವನವನ್ನು ಹಾಳು ಮಾಡಿದ್ದಾರೆ. ಅಲ್ಲದೆ ರೈತರು, ಕಾರ್ಮಿಕರ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಒಡೆದು ಆಳುವ ನೀತಿ ಅನುಸರಿಸಿದ್ದಾರೆ.

ಪ್ರಜಾಪ್ರಭುತ್ವದ ಆಶಯದ ಮೂಲಕ ಕಳೆದ 77 ವರ್ಷಗಳ ಸ್ವಾತಂತ್ರದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ದೇಶದ ಬಹುತ್ವ ಹಾಗೂ ಜನರ ಏಕೈಕ ಆಧಾರಸ್ತಂಭವಾದ ಜಾತ್ಯತೀತದ ಸಾಂವಿಧಾನಿಕ ತತ್ವಕ್ಕೆ ಈಗ ಏಟು ಬಿದ್ದಿದೆ. ಚುನಾವಣಾ ಪ್ರಚಾರದಲ್ಲಿ ಕಾನೂನನ್ನು ಉಲ್ಲಂಘಿಸಿದ ನರೇಂದ್ರ ಮೋದಿ ಅವರನ್ನು ಚುನಾವಣಾ ಕಣದಿಂದ 6 ವರ್ಷಗಳವರೆಗೆ ನಿಷೇಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್‌ಕೆಎಂ ಚುನಾವಣಾ ಆಯೋಗಕ್ಕೆ ಎರಡು ಬಾರಿ ಮನವಿ ಮಾಡಿದೆ.

ದುರಂತವೇನೆಂದರೆ ಚುನಾವಣಾ ಆಯೋಗ ಮೋದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಕಾನೂನು ಸಲಹೆಗಳನ್ನು ನೀಡುವುದರ ಮೂಲಕ ಇಡೀ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿತು. ಚುನಾವಣಾ ಆಯೋಗವು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿದ್ದು, ಚುನಾವಣಾ ಸಮಯದಲ್ಲಿ ಬಿಜೆಪಿಯ ಒಡೆದು ಆಳುವ ನೀತಿಯನ್ನು ಪಸರಿಸಲು ಸಹಾಯ ಮಾಡಿದೆ ಎಂದು ಎಸ್‌ಕೆಎಂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮತದಾನದ ಅಂಕಿಅಂಶಗಳ ಬಗ್ಗೆಯೂ ಪಾರದರ್ಶಕ ನೀತಿಯನ್ನು ಅನುಸರಿಸಲಿಲ್ಲ. ಸುಪ್ರೀಂ ಕೋರ್ಟ್‌ ತಪರಾಕಿಯ ನಂತರ ಕ್ಷೇತ್ರಾವಾರು ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ಅದಲ್ಲದೆ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಿರುವುದು ನೈತಿಕವಾಗಿ ತಪ್ಪಾಗಿದೆ.

ಸರಣಿ ಲೋಪಗಳನ್ನು ಎಸಗುತ್ತಿರುವ ಚುನಾವಣಾ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅಪನಂಬಿಕೆ ಹುಟ್ಟಿದೆ.  18ನೇ ಲೋಕಸಭಾ ಚುನಾವಣೆಯ ಮುಕ್ತ ಹಾಗೂ ನ್ಯಾಯ ಸಮ್ಮತ ಮತ ಎಣಿಕೆಯ ಬಗ್ಗೆ ರಾಷ್ಟ್ರೀಯ ರೈತ ಸಂಘಟನೆ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ) ಆತಂಕ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ದೇಶದ ಜನತೆ ಮೇಲುಗೈ ಸಾಧಿಸಬೇಕು. ಆದ ಕಾರಣ ಎಸ್‌ಕೆಎಂ ಚುನಾವಣಾ ಆಯೋಗಕ್ಕೆ ಕೆಳಕಂಡ ನೀತಿಗಳನ್ನು ಅನುಸರಿಸುವಂತೆ ಮನವಿ ಮಾಡುತ್ತದೆ.

ನಿಯಮಾನುಸಾರ ಮುಕ್ತ ಹಾಗೂ ನ್ಯಾಯ ಸಮ್ಮತ ಮತಎಣಿಕೆಯನ್ನು ಖಚಿಪಡಿಸಬೇಕು. ಯಾವುದೇ ಲೋಪ, ತಿರುಚುವಿಕೆಯಾಗದಂತೆ ಮತ ಎಣಿಕೆಯ ನಿಖರವಾದ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಬೇಕು. ಉಲ್ಲಂಘನೆಯಾಗಿರುವುದನ್ನು ಪರಿಶೀಲಿಸಿ, ಉಲ್ಲಂಘನೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಹಾಗೂ ಬಲವಾದ ಕ್ರಮ ಕೈಗೊಳ್ಳಬೇಕು. ಅಲ್ಲದೆ ಭಾರತೀಯ ರೈತರ ಕಳವಳಗಳ ಎಲ್ಲ ಚುನಾವಣಾ ಅಧಿಕಾರಿಗಳಿಗೆ ಮನದಟ್ಟು ಮಾಡಿ ಎಂದು ಮನವಿಯಲ್ಲಿ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!