Thursday, September 19, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪೂ ಕುರಿತ ಸುಳ್ಳುಗಳು ಹೀಗೆ ಹುಟ್ಟಿಕೊಳ್ಳುತ್ತವೆ… ಒಂದು ಚಾರಿತ್ರಿಕ ನಿದರ್ಶನ

✍️ ಮಾಚಯ್ಯ ಎಂ. ಹಿಪ್ಪರಗಿ


  • ಟಿಪ್ಪೂವಿನ ಬಗ್ಗೆ ಕಪೋಲಕಲ್ಪಿತ ಪಠ್ಯ ರಚಿಸಿದ್ದ ಹರಪ್ರಸಾದ್ ಶಾಸ್ತ್ರಿ

  • ಟಿಪ್ಪೂ ಕುರಿತು ಸಂಶೋಧಿಸಿ ನೈಜ್ಯ ಇತಿಹಾಸ ತೆರದಿಟ್ಟ ಬಿ.ಎನ್.ಪಾಂಡೆ

ಬಿ.ಎನ್.ಪಾಂಡೆಯವರ ಬಗ್ಗೆ ಈಗಿನ ತಲೆಮಾರಿನ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವರು. ಮುಂದೆ ರಾಜ್ಯಸಭಾ ಸದಸ್ಯರಾಗಿ, ಒಡಿಶಾದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದವರು. ಇವೆಲ್ಲಕ್ಕಿಂತ ಮುಖ್ಯವಾಗಿ ಅದ್ಭುತ ಸಂಶೋಧಕರು ಸಹಾ ಹೌದು. ಟಿಪ್ಪೂವಿನ ಕುರಿತೂ ಸಹ ಅವರು ಸಂಶೋಧನೆ ಕೈಗೊಂಡಿದ್ದುಂಟು.

ಒಮ್ಮೆ ಅವರು ತಮ್ಮ ಕಚೇರಿಯಲ್ಲಿ ಕೂತಿರಬೇಕಾದರೆ ಒಂದಷ್ಟು, ಆಂಗ್ಲೋ-ಬಂಗಾಳಿ ಕಾಲೇಜಿನ ವಿದ್ಯಾರ್ಥಿಗಳು ಬಂದರು. ಅವರ ಕಾಲೇಜಿನಲ್ಲಿ ಹೊಸದಾಗಿ ಸ್ಥಾಪನೆಯಾಗಲಿದ್ದ ಅಸೋಸಿಯೇಷನ್ ಆಫ್ ಹಿಸ್ಟರಿಯ ಉದ್ಘಾಟನೆ ಮಾಡಲು ಪಾಂಡೆಯವರನ್ನು ಆಹ್ವಾನಿಸುವುದು ಅವರ ಉದ್ದೇಶವಾಗಿತ್ತು. ಮಾತುಕತೆಯೆಲ್ಲ ಮುಗಿದು, ಅನೌಪಚಾರಿಕವಾಗಿ ಹರಟುತ್ತಿರುವಾಗ, ಒಬ್ಬ ವಿದ್ಯಾರ್ಥಿಯ ಕೈಯಲ್ಲಿದ್ದ ಇತಿಹಾಸದ ಒಂದು ಪಠ್ಯಪುಸ್ತಕ ಪಾಂಡೆಯವರ ಕಣ್ಣು ಸೆಳೆಯಿತು. ಸ್ವತಃ ಇತಿಹಾಸ ಸಂಶೋಧಕರಾಗಿದ್ದ ಪಾಂಡೆಯವರು ಸಹಜ ಕುತೂಹಲದಿಂದ ಅದನ್ನು ಪಡೆದುಕೊಂಡು ಪುಟ ತಿರುವಿ ಹಾಕಲಾರಂಭಿಸಿದರು.

ಅಲ್ಲೊಂದು ಕಡೆ, ಟಿಪ್ಪೂವಿನ ಕುರಿತು ನೀಡಲಾಗಿದ್ದ ಸಾಲುಗಳನ್ನು ಕಂಡು ಅವರು ಹೌಹಾರಿದರು. “ಟಿಪ್ಪೂ ಸುಲ್ತಾನ್ ತಮ್ಮನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿಸಲು ಮುಂದಾಗಿದ್ದರಿಂದ ಮೂರು ಸಾವಿರ ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡರು” ಎಂದು ಅಲ್ಲಿ ಉಲ್ಲೇಖಿಸಲಾಗಿತ್ತು. ಟಿಪ್ಪೂ ಕುರಿತು ಸಂಶೋಧನೆ ನಡೆಸಿದ್ದ ಪಾಂಡೆಯವರಿಗೆ ಇದು ‘ಅಜೀಬ್ ಅನ್ನಿಸಿತು. ಯಾಕೆಂದರೆ ಇಂತಹ ಯಾವ ಐತಿಹಾಸಿಕ ಉಲ್ಲೇಖವನ್ನೂ ಅವರು ಇದುವರೆಗೆ ಗಮನಿಸಿರಲಿಲ್ಲ.

ಕೂಡಲೇ ಅವರು, ಇಂತಹ ಉಲ್ಲೇಖವನ್ನು ದಾಖಲಿಸಿದ ಇತಿಹಾಸಕಾರ ಯಾರೆಂದು ಪುಟಗಳನ್ನು ತಿರುವಿ ನೋಡಿದರು. ಮಹಾಮಹೋಪಾಧ್ಯಾಯ ಹರಪ್ರಸಾದ್ ಶಾಸ್ತ್ರಿ ಎಂಬ ಹೆಸರು ಸಿಕ್ಕಿತು. ಮರುದಿನವೇ ಪಾಂಡೆಯವರು ಶಾಸ್ತ್ರಿಗೆ ಪತ್ರ ಬರೆದು, ತಮಗೆ ಇಂತಹ ಚಾರಿತ್ರಿಕ ಉಲ್ಲೇಖ ಯಾವ ದಾಖಲೆಯಲ್ಲಿ ಲಭಿಸಿತು? ಎಂದು ಪ್ರಶ್ನಿಸಿದರು. ಉತ್ತರವಿಲ್ಲ. ಮತ್ತೆ ಪತ್ರ ಬರೆದರು. ಆಗಲೂ ಉತ್ತರವಿಲ್ಲ.

ಸತತ ನಾಲ್ಕು ಪತ್ರಗಳನ್ನು ಬರೆದ ತರುವಾಯ “ತಾನು ಈ ಉಲ್ಲೇಖವನ್ನು ಮೈಸೂರು ಗೆಜೆಟಿಯರ್‌ನಿಂದ ಪಡೆದುದಾಗಿ” ಆ ಶಾಸ್ತ್ರಿ ತಿಳಿಸಿದರು. ಅಲಹಾಬಾದ್, ಕಲ್ಕತ್ತಾದ ಲೈಬ್ರರಿಗಳು, ದಾಖಲೆಗಳ ಸಂಗ್ರಹಗಾರದಲ್ಲೆಲ್ಲ ಹುಡುಕಿ ನೋಡಿದರು. ಆದರೆ ಈ ಆಕ್ಷೇಪಾರ್ಹ ಅಂಶವಿರುವ ಮೈಸೂರು ಗೆಜೆಟಿಯರ್ ಅವರ ಕಣ್ಣಿಗೆ ಬೀಳಲಿಲ್ಲ. ಆಗ ತೇಜ್ ಬಹುದ್ದೂರ್ ಸಫ್ರಾ ಎಂಬ ಸ್ನೇಹಿತರೊಬ್ಬರು, ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಪತ್ರ ಬರೆದರೆ ನಿಮಗೆ ನೆರವು ಸಿಗಬಹುದು ಎಂಬ ಸಲಹೆ ಕೊಟ್ಟರು. ತಡ ಮಾಡಲಿಲ್ಲ. ಪಾಂಡೆಯವರು ಇಸ್ಮಾಯಿಲ್ ಅವರಿಗೆ ಪತ್ರ ಬರೆದರು. ಅವರು ಆ ಪತ್ರವನ್ನು ವಿಶ್ವವಿದ್ಯಾಲಯದ ಕುಲಪತಿ ಸರ್ ಬೃಜೇಂದ್ರನಾಥ್ ಸೀಲ್ ಅವರಿಗೆ ರವಾನೆ ಮಾಡಿದರು.

ಸೀಲ್ ಅವರು, ಮೈಸೂರು ಗೆಜೆಟಿಯರ್ ಸಂಪಾದನೆ ಮಾಡುತ್ತಿದ್ದ ಪ್ರೊ.ಶ್ರೀಕಂಠಯ್ಯನವರಿಗೆ ಪಾಂಡೆಯವರ ಪತ್ರ ತಲುಪಿಸಿದರು. ಗೆಜೆಟಿಯರ್‌ಗಳನ್ನು ಕೂಲಂಕಷವಾಗಿ ಸಂಶೋಧಿಸಿದ ಶ್ರೀಕಂಠಯ್ಯನವರು “ತಾವು ಉಲ್ಲೇಖಿಸಿದಂತೆ ಟಿಪ್ಪೂವಿನ ಮತಾಂತರ ಭಯದ ಕಾರಣಕ್ಕೆ ಮೂರು ಸಾವಿರ ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡ ಯಾವ ದಾಖಲೆಯೂ ಗೆಜೆಟಿಯರ್‌ನಲ್ಲಿ ಇಲ್ಲ. ನನ್ನ ಸಂಶೋಧನಾ ಅನುಭವದ ಪ್ರಕಾರ ಇಂತದ್ದೊಂದು ಪ್ರಕರಣ ಕೇವಲ ಕಪೋಲಕಲ್ಪಿತ” ಎಂದು ಉತ್ತರಿಸಿದರು!

ಇಂಥಾ ಸುಳ್ಳು ಉತ್ತರಪ್ರದೇಶ, ಬಿಹಾರ, ಒಡಿಶಾ, ಬಂಗಾಲ, ಅಸ್ಸಾಂನ ಪಠ್ಯಗಳಲ್ಲಿ ಪಾಠವಾಗಿತ್ತು! ಈ ಸುಳ್ಳಿನ ಪಠ್ಯವನ್ನು ಯಥಾವತ್ತಾಗಿ ಓದಿದ ವಿದ್ಯಾರ್ಥಿಗಳು ಅದಿನ್ನೆಂತ ಮನಸ್ಥಿತಿ ತಳೆಯಬೇಡ. ಕಳವಳಕ್ಕೀಡಾದ ಪಾಂಡೆಯವರು ಕಲ್ಕತ್ತಾ ವಿವಿಯ ಕುಲಪತಿಗಳಿಗೆ ಬರೆದು, “ನಿಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಉಲ್ಲೇಖವಾದ ಶಾಸ್ತ್ರಿಯವರ ಇತಿಹಾಸ ಪಾಠದಲ್ಲಿ ಟಿಪ್ಪೂವಿನ ಕುರಿತು ಈ ಅಂಶ ಸಂಶಯಾಸ್ಪದವಾಗಿದೆ.

ಅವರೇ ಹೇಳಿದಂತೆ ಮೈಸೂರಿನ ಗೆಜೆಟಿಯರ್‌ನಿಂದ ಅವರು ಅದನ್ನು ಉಲ್ಲೇಖಿಸಿದ್ದರಂತೆ. ನಾನು ಸ್ವತಃ ಗೆಜೆಟಿಯರ್‌ನ ಸಂಪಾದಕರಾದ ಶ್ರೀಕಂಠಯ್ಯನವರನ್ನು ಸಂಪರ್ಕಿಸಿದಾಗ ಅವರಿಂದ ಇದು ತಪ್ಪು ಉಲ್ಲೇಖವೆಂದು ಉತ್ತರ ಬಂತು. ಅವರ ಪತ್ರವನ್ನೂ ಇದರೊಂದಿಗೆ ಲಗತ್ತಿಸಿದ್ದೇನೆ. ನೀವು ಇನ್ನೊಮ್ಮೆ ಪರಿಶೀಲಿಸಿ. ಶಾಸ್ತ್ರಿಯವರ ಉಲ್ಲೇಖ ಐತಿಹಾಸಿಕ ದಾಖಲೆಗಳಿಂದ ಸರಿಯೆಂಬುದು ತಮಗೆ ಸಾಬೀತಾದರೆ, ದಯವಿಟ್ಟು ಈ ನನ್ನ ಪತ್ರ ವ್ಯವಹಾರವನ್ನು ಮನ್ನಿಸಿ ವಾಪಾಸು ಕಳಿಸಿಕೊಡಿ” ಎಂದು ಮನವಿ ಮಾಡಿದರು.

ಕಲ್ಕತ್ತಾದ ಕುಲಪತಿಗಳು ಪಠ್ಯ ರಚಿಸಿದ ಹರಪ್ರಸಾದ್ ಶಾಸ್ತ್ರಿಯನ್ನು ಕರೆದು, ಶ್ರೀಕಂಠಯ್ಯನವರ ಗೆಜೆಟಿಯರ್ ಪತ್ರವನ್ನೂ ಹಾಜರುಪಡಿಸಿ ಸ್ಪಷ್ಟನೆ ಕೇಳಿದಾಗ, “ನಾನಿದನ್ನು ಮೈಸೂರು ಗೆಜೆಟಿಯರ್‌ನಿಂದ ಉಲ್ಲೇಖಿಸಿದ್ದೇನೆ ಎಂದುಕೊಂಡಿದ್ದೆ. ಆದರೆ ಈಗ ನನಗೂ ಗೊಂದಲವಾಗುತ್ತಿದೆ. ಎಲ್ಲಿಂದ ಉಲ್ಲೇಖಿಸಿದೆನೋ ಗೊತ್ತಿಲ್ಲ.” ಎಂದು ಹಾರಿಕೆಯ ಉತ್ತರ ಕೊಟ್ಟನಂತೆ. ಕೂಡಲೇ ಹರಪ್ರಸಾದ್ ಶಾಸ್ತ್ರಿಯವರ ಪಾಠಗಳನ್ನು ಇತಿಹಾಸದ ಪಠ್ಯಗಳಿಂದ ವಾಪಾಸ್ ಪಡೆದು ಆದೇಶ ಹೊರಡಿಸಿ, ಆದೇಶದ ಒಂದು ಪ್ರತಿಯನ್ನು ಕುಲಪತಿಗಳು ಪಾಂಡೆಯವರಿಗೂ ಕಳುಹಿಸಿಕೊಟ್ಟರು.

ಅಕಸ್ಮಾತ್ ಪಾಂಡೆಯವರಂತಹ ಇತಿಹಾಸಕಾರರ ಕಣ್ಣಿಗೆ ಆ ಅಂಶ ಬೀಳದೆ ಹೋಗಿದ್ದರೆ, ಅದು ಇಷ್ಟೊತ್ತಿಗಾಗಲೇ ಅಪ್ಪಟ ಇತಿಹಾಸವಾಗಿ ನಮ್ಮ ಯುವಪೀಳಿಗೆಯ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿರುತ್ತಿತ್ತು. ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲೇ ಟಿಪ್ಪೂವಿನ ಮುಖಕ್ಕೆ ಮಸಿ ಬಳಿಯಲು ಇಷ್ಟೆಲ್ಲ ಆಟ ಆಡಿದವರು, ಇವತ್ತಿನ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳುಗಳ ಸಂತೆಯಲ್ಲಿ ಎಂತೆಂಥಾ ಕಥೆ ಕಟ್ಟಬೇಡ.

ಈ ನಿದರ್ಶನದಿಂದ ಒಂದು ಅಂಶವಂತೂ ಸಾಬೀತಾಗುತ್ತದೆ. ಏನೆಂದರೆ, ಚರಿತ್ರೆಯ ಕಾಲಚಕ್ರದಲ್ಲಿ ಟಿಪ್ಪೂವನ್ನು ನಿರಂತರವಾಗಿ ದ್ವೇಷಿಸಿಕೊಂಡು ಬರಲಾಗುತ್ತಿದೆ. ಹೀಗೆ ದ್ವೇಷಿಸಿಕೊಂಡು ಬರುತ್ತಿರುವವರು ಹಿಂದೂಗಳಲ್ಲ, ಬದಲಿಗೆ ಬ್ರಾಹ್ಮಣರು ಮಾತ್ರ! ಯಾಕೆ? ಉತ್ತರ ಸ್ಪಷ್ಟವಾಗಿದೆ. ಬ್ರಾಹ್ಮಣರು ಪೋಷಿಸಿಕೊಂಡು ಬಂದ ವರ್ಣವ್ಯವಸ್ಥೆಗೆ ಟಿಪ್ಪೂ ಮರ್ಮಾಘಾತ ನೀಡಿದ.

ಶ್ಯಾನಭೋಗಿಕೆಯ ಮೂಲಕ ಊರಿನ ಶ್ರಮಿಕ ರೈತರನ್ನು, ಕುಲಕಸುಬಿನ ಶ್ರಮಿಕರನ್ನು ಪುಕ್ಕಟೆ ದುಡಿಸಿಕೊಂಡು, ಆರಾಮಾಗಿ ಕೂತು ತಿನ್ನುತ್ತಿದ್ದ ಅವರ ಆಟೋಟಗಳಿಗೆ ತಡೆ ಹಾಕಿದ ಟಿಪ್ಪೂ, ಕೆಳ ಜಾತಿಯವರಿಗೆ ಭೂ ಒಡೆತನದ ಹಕ್ಕು ನೀಡಿದ. ಯಾರು ಭೂಮಿಯನ್ನು ಉಳುಮೆ ಮಾಡುತ್ತಾನೊ, ಅವನ ಜಾತಿ ಯಾವುದೇ ಆಗಿರಲಿ, ಅವನೇ ಭೂಮಿಯ ಒಡೆಯ. ಅದಕ್ಕೆ ಪ್ರತಿಯಾಗಿ ಪ್ರಭುತ್ವಕ್ಕೆ ಇಂತಿಷ್ಟು ಕಂದಾಯ ಕಟ್ಟಿದರೆ ಸಾಕು ಎಂದ. ಇದರಿಂದಾಗಿ ಬ್ರಾಹ್ಮಣರ ಯಜಮಾನಿಕೆಯಲ್ಲಿದ್ದ ಭೂಮಿಗಳು ಬಡವರ ಕೈಸೇರಿದವು. ಇದರಿಂದ ಹೆಚ್ಚು ಲಾಭ ಪಡೆದದ್ದು, ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯ.

ಇತಿಹಾಸದ ಕಾಲಗರ್ಭದಲ್ಲಿ ದಲಿತರಿಗೆ, ಭೂ ಒಡೆತನ ಅಂತದಕ್ಕಿದ್ದು ಸಹಾ ಟಿಪ್ಪೂವಿನ ಕಾಲಘಟ್ಟದಲ್ಲಿ. ಬ್ರಾಹ್ಮಣರಿಗಷ್ಟೇ ಸೀಮಿತವಾಗಿದ್ದ ಶ್ಯಾನಭೋಗಿಕೆಯನ್ನು, ಒಕ್ಕಲಿಗ ಸಮುದಾಯಕ್ಕೂ ನೀಡಿ ಅವರನ್ನು ಪಟೇಲರನ್ನಾಗಿಸಿದ, ಊರಿನ ಗೌಡರನ್ನಾಗಿಸಿದ. ಇವೆಲ್ಲವೂ ಬ್ರಾಹ್ಮಣರನ್ನು ರೊಚ್ಚಿಗೆಬ್ಬಿಸಿದವು.

ಬ್ರಾಹ್ಮಣ ಸಮುದಾಯದ ದಿವಾನ್ ಪೂರ್ಣಯ್ಯ ಇದೇ ಕಾರಣಕ್ಕೆ ಟಿಪ್ಪೂವಿಗೆ ದ್ರೋಹ ಬಗೆದ. ಟಿಪ್ಪೂವಿನ ಮೇಲೆ ತಮ್ಮ ಸಮುದಾಯಕ್ಕಿರುವ ಸಿಟ್ಟನ್ನು ಸಮಸ್ತ ಹಿಂದೂಗಳ ಸಿಟ್ಟು ಎಂದು ಬಿಂಬಿಸಲು ಅವನಿಗೆ ‘ಮತಾಂಧ’, ’ಮತಾಂತರ’ ಸುಳ್ಳಿನ ಪಟ್ಟ ಕಟ್ಟುತ್ತಾ ಬಂದರು. ಅದನ್ನು ನಮ್ಮ ಇವತ್ತಿನ ಯುವಪೀಳಿಗೆ ನಂಬುತ್ತಾ ಸಾಗುತ್ತಿದೆ. ನೆನಪಿರಲಿ, ಮೈಸೂರು ಗೆಜೆಟಿಯರ್ ಅನ್ನು ಸಂಪಾದಿಸಿದ ಪ್ರೊ. ಶ್ರೀಕಂಠಯ್ಯನವರು, ಟಿಪ್ಪೂ ಪ್ರತಿವರ್ಷ ದಾನದತ್ತಿ ನೀಡುತ್ತಿದ್ದ 156 ಹಿಂದೂ ದೇವಾಲಯಗಳನ್ನು ಪಟ್ಟಿ ಮಾಡಿದ್ದಾರೆ. ಇದು ಇವತ್ತಿಗೂ ಅಧಿಕೃತ ಚರಿತ್ರೆ! ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳುಗಳ ಮುಂದೆ ಇಂತಹ ಅಪ್ಪಟ ಚರಿತ್ರೆಗಳು ಯಾರಿಗೆ ಬೇಕಾಗಿದೆ ಅಲ್ಲವಾ……

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!