Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಲಹರಣ ಮಾಡಿದ್ದೇ ಕೆ.ಸಿ.ನಾರಾಯಣಗೌಡರ ಸಾಧನೆ : ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದು ಬಿಜೆಪಿ ಸೇರಿ ಸಚಿವರಾಗಿರುವ ನಾರಾಯಣಗೌಡರು, ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿ ಮಾಡದೆ ಮೂರೂವರೆ ವರ್ಷ ಕಾಲಹರಣ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಕೀಲ ವಿ.ಎಸ್.ಧನಂಜಯಕುಮಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷವು ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಗೆ ಹಲವಾರು ಯೋಜನೆಗಳು ಹಾಗೂ ಶಾಶ್ವತವಾದ ಕಾಮಗಾರಿಗಳನ್ನು ಕೊಡುಗೆಯಾಗಿ ನೀಡಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಿಜೆಪಿ ಪಕ್ಷ ಸೇರಿದೆ ಎಂದು ಸುಳ್ಳು ಹೇಳಿಕೊಂಡು ತಮಗೆ ರಾಜಕೀಯವಾಗಿ ಜನ್ಮ ನೀಡಿದ ಜೆಡಿಎಸ್ ಪಕ್ಷವನ್ನು ನಿಂದಿಸಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ನಾರಾಯಣಗೌಡರಿಗೆ ತಾಲೂಕಿನ ಪ್ರಜ್ಞಾವಂತ ಮತದಾರರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಗಾಗಿ ಯಾವುದೇ ಹೊಸ ಕಾರ್ಯಕ್ರಮಗಳನ್ನು ತರಲು ವಿಫಲರಾಗಿರುವ ಸಚಿವ ನಾರಾಯಣಗೌಡ ಅವರ ಮೇಲೆ ಕುಮಾರಣ್ಣ ಅವರು ವಿಶ್ವಾಸವಿಟ್ಟು ಎರಡು ಭಾರಿ ಟಿಕೆಟ್ ನೀಡಿ ಗೆಲ್ಲಿಸಿದ್ದಕ್ಕೆ ರೈತನಾಯಕರಾದ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಪಕ್ಷ ಸೇರಿದರು, ‌ಅಲ್ಲಿಗೆ ಹೋಗಿ ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿ ಮಾಡಿದ್ರಾ ಅಂದ್ರೆ ಅದೂ ಇಲ್ಲ. ತಾಲೂಕಿನಾದ್ಯಂತ ಗುಂಡಿಬಿದ್ದು ಹಾಳಾಗಿರುವ ರಸ್ತೆಗಳನ್ನು ನೋಡಿದರೆ ಸಾಕು, ಕೆ.ಆರ್.ಪೇಟೆ ಯಾವ ರೀತಿ ಅಭಿವೃದ್ಧಿಯಾಗಿದೆ ಎಂದು ಕಣ್ಣಿಗೆ ಕಾಣುತ್ತದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ತಾಲೂಕಿನಲ್ಲಿ ಬಲಿಷ್ಠವಾಗಿದೆಯಲ್ಲದೇ ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ವೀರಶೈವ ಸಮಾಜದ ಮತ ಪಡೆದು ಕಳೆದ ಉಪಚುನಾವಣೆಯಲ್ಲಿ ಗೆದ್ದ ನಾರಾಯಣಗೌಡರು ವೀರಶೈವ ಸಮಾಜವನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಇಂದು ವೀರಶೈವ ಸಮಾಜದ ಅಧ್ಯಕ್ಷರೇ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಮ್ಮ ಪಕ್ಷವು ಅಧಿಕೃತವಾಗಿ ಘೋಷಿಸಿರುವ ಜೆಡಿಎಸ್ ಅಭ್ಯರ್ಥಿಯಾದ ಹೆಚ್.ಟಿ.ಮಂಜು ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಣ್ಣ ಅವರು ತಾಲೂಕಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಗಗಳೇ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ವರದಾನವಾಗಲಿದೆ. ಇಂದು ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಇದು ಹೆಚ್.ಟಿ.ಮಂಜು ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಇ

ಇದೇ ವೇಳೆ ವೀರಶೈವ ಸಮಾಜದ ಅಧ್ಯಕ್ಷ ವಿ.ಎಸ್.ಧನಂಜಯ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಜೆಡಿಎಸ್ ಘೋಷಿತ ಅಭ್ಯರ್ಥಿ ಹೆಚ್.ಟಿ.ಮಂಜು, ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎ.ಬಿ.ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!