Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಲಹರಣ ಮಾಡಿದ್ದೇ ಶಾಸಕ‌ ಅನ್ನದಾನಿ ಸಾಧನೆ

ಕಳೆದ ನಾಲ್ಕೂವರೆ ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ತೋರದೆ ಕಾಲಹರಣ ಮಾಡಿದ್ದೇ ಶಾಸಕ ಅನ್ನದಾನಿ ಸಾಧನೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿಗೆ ತುರ್ತಾಗಿ ಅಗತ್ಯವಿರುವ ರಸ್ತೆ ಕಾಮಗಾರಿಗಳಿಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 2 ಕೋಟಿ ರೂ.ವೆಚ್ಚದ 8 ರಸ್ತೆ ಕಾಮಗಾರಿ ಜಾರಿಗೊಳಿಸಲು ಶ್ರಮಿಸಿದ್ದ ನನ್ನನ್ನು ಶಾಸಕ ಅನ್ನದಾನಿ ಕಾಮಗಾರಿ ಶಂಕುಸ್ಥಾಪನೆಗೆ ಆಹ್ವಾನಿಸದೆ ಸಣ್ಣತನ ತೋರಿದ್ದಲ್ಲದೆ, ಮುಖ್ಯಮಂತ್ರಿ ಅಥವಾ ಲೋಕೋಪಯೋಗಿ ಸಚಿವರ ಭಾವಚಿತ್ರವನ್ನು ಪ್ಲೆಕ್ಸ್ ನಲ್ಲಿ ಹಾಕಿಲ್ಲದಿರುವುದು ಬೇಸರ ತರಿಸಿದೆ ಎಂದು ಕಿಡಿಕಾರಿದರು.

ತಾಲ್ಲೂಕು ರಾಜಕಾರಣದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ನನ್ನ ಅವಧಿಯಲ್ಲಿ ಮಂಜೂರಾದ ಆನೇಕ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರು ನನಗೆ ಉತ್ತರ ಕೊಡಬೇಕೆಂದು ಒತ್ತಾಯಿಸಿದರು.

ಶಿಂಷಾ ಏತ ನೀರಾವರಿ ಯೋಜನೆ, ಇಗ್ಗಲೂರು ಬಲದಂಡೆ ಯೋಜನೆ, ಹೆಬ್ಬಾಳ ಚನ್ನಯ್ಯ ನಾಲೆ ಕಾಮಗಾರಿ ಹಾಗೂ ಹಲಗೂರು ಪೊಲೀಸ್ ಠಾಣೆಯನ್ನು ಮಳವಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡುವ ವಿಚಾರವಾಗಿ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಪೂರಿಗಾಲಿ ಹನಿ ನೀರಾವರಿ ಯೋಜನೆ ಬಗ್ಗೆ ಶಾಸಕರಿಗೆ ಸ್ವಲ್ಪವೂ ಆಸಕ್ತಿ ಇಲ್ಲ. ಸದರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಯಾಗಿ ಸತ್ಯಾಂಶ ಹೊರಬೀಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದಿಂದ ಕಳೆದ ಚುನಾವಣೆಯಲ್ಲೂ ನಾನೇ ಸ್ಪರ್ಧೆ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು 2023ರ ಚುನಾವಣೆಯಲ್ಲೂ ನನಗೆ ಅವಕಾಶ ಕಲ್ಪಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜು ಅವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಕಳೆದ ಚುನಾವಣೆಯಲ್ಲಿ ಆಂತರಿಕ ಒಪ್ಪಂದದಿಂದ ನನಗೆ ಕಡಿಮೆ ಮತಗಳು ಲಭಿಸಿವೆ. ಈ ವಿಚಾರವಾಗಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಅಶೋಕ್ ಕುಮಾರ್, ಶಿವಲಿಂಗೇಗೌಡ, ಸಾಗ್ಯ ರಾಜಣ್ಣ, ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!