Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಹಿತಿಗಳು ಮತ್ತು ಭಂಡತನ

  ✍🏿 ಗಿರೀಶ್ ತಾಳಿಕಟ್ಟೆ


  • ಪ್ರತಿಯೊಬ್ಬ ಸಾಹಿತಿಯೂ ಭಂಡರಾಗಬೇಕಾದ ಕಾಲ ಒದಗಿ ಬಂದಿದೆ

  • ಪ್ರಸ್ತುತ ಕಾಲಘಟ್ಟದಲ್ಲಿ ‘ಪಕ್ಷಾತೀತ’ ಎಂಬ ಕವಚ ಧರಿಸಿಕೊಳ್ಳುವುದು ಅಪರಾಧವಾಗುತ್ತದೆ

ಇತ್ತೀಚೆಗಷ್ಟೆ, ಕನ್ನಡದ ಖ್ಯಾತ ಬರಹಗಾರ-ಚಿಂತಕರೊಬ್ಬರನ್ನು ಭೇಟಿಯಾಗಿದ್ದೆ. ಅದೂ ಇದು ಚರ್ಚೆ ಮಾಡುತ್ತಾ, ಮಾತಿನ ನಡುವೆ ಮೊನ್ನೆ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರಿಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ತಾವು ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿ, ಅವರಿಗೆ ಮಾರ್ಗದರ್ಶನ ಮಾಡಿ ಬಂದಿದ್ದರ ಕುರಿತು ಹೇಳಿದರು.

ನನಗೆ ತುಸು ಆಶ್ಚರ್ಯವಾಯ್ತು. ತುಂಬಾ ಸೂಕ್ಷ್ಮ ಸಂವೇದನೆಯ ಅವರು ಮೊದಲಿನಿಂದಲೂ ರಾಜಕೀಯವಾಗಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಾ ಬಂದವರು. ಯಾವ ಪಕ್ಷದ ಜೊತೆಗೂ ನೇರವಾಗಿ, ಅಧಿಕೃತವಾಗಿ ಗುರುತಿಸಿಕೊಂಡವರಲ್ಲ. ನನ್ನ ತುಮುಲವನ್ನು ತಡೆದುಕೊಳ್ಳಲಾಗಲಿಲ್ಲ. ’ಸಾರ್, ನೀವೂ ಕಾಂಗ್ರೆಸ್ ಕಾರ್ಯಕರ್ತರ ವಿಚಾರ ಸಂಕಿರಣಕ್ಕೆ ಹೋಗಿದ್ದಿರಾ!’ ಎಂದು ಕೇಳಬೇಕು ಅನ್ನುವುಷ್ಟರಲ್ಲಿ ಅವರೇ ನನ್ನ ಕಾತರವನ್ನು ಗ್ರಹಿಸಿ, “ಏನಪ್ಪಾ ಇವ್ರು ಭಂಡತನದಿಂದ ಹೀಗೆ ಹೇಳ್ಕೋತಿದಾರೆ? ಅಂತ ಯೋಚಿಸ್ತಿದೀರಾ” ಎಂದು ಕೇಳಿದರು.

ಮುಂದುವರೆದು, “ಸಾಹಿತಿಯಾದವನು ಒಂದು ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಳ್ಳುವುದು ಭಂಡತನ ಅನ್ನೋದಾದರೆ, ಒಮ್ಮೊಮ್ಮೆ ಸಾಹಿತಿಗಳು ಅಂತಹ ಭಂಡತನ ಪ್ರದರ್ಶಿಸುವ ಕಾಲವೂ ಬರುತ್ತಲಿರುತ್ತೆ. ನನ್ನ ಪ್ರಕಾರ ಈ ನೆಲದ ಸಾಂಸ್ಕೃತಿಕ, ಸೌಹಾರ್ದತೆಯ ಪರಂಪರೆಯನ್ನು ಗೌರವಿಸುವ ಪ್ರತಿಯೊಬ್ಬ ಸಾಹಿತಿ ಭಂಡರಾಗಬೇಕಾದ ಕಾಲ ಈಗ ಒದಗಿ ಬಂದಿದೆ ಅನ್ನಿಸುತ್ತೆ. ಸಾಹಿತಿ ಪಕ್ಷಾತೀತನಾಗಿರಬೇಕು ಅನ್ನೋದು ಸರಿ. ಆದರೆ ಪ್ರತಿಯೊಂದು ರಾಜಕೀಯ ಪಕ್ಷಗಳೂ ತಮ್ಮದೇ ಸಿದ್ಧಾಂತಗಳ ತಳಹದಿಯ ಮೇಲೆ ರೂಪುಗೊಂಡಿರುತ್ತವೆ.

ಆ ಸಿದ್ಧಾಂತದ ಒಟ್ಟಾರೆ ಸಾರಾಂಶ ಜನಪರವಾದದ್ದೂ, ಮುಂಚಲನೆಗೆ ಪ್ರೇರಣೆಯಾದದ್ದೂ ಆಗಿರಬೇಕು. ಅಂತಹ ಸಿದ್ಧಾಂತಗಳನ್ನಿಟ್ಟುಕೊಂಡು ಅಧಿಕಾರದ ಸಂಘರ್ಷ ನಡೆಸುವ ರಾಜಕೀಯ ಪಕ್ಷಗಳ ವಾತಾವರಣದಲ್ಲಿ ಸಾಹಿತಿಯಾದವನು ಸಮಾನ ದೂರದಲ್ಲಿ ಉಳಿದುಕೊಂಡು, ಆ ಸಿದ್ಧಾಂತಗಳ ಓರೆಕೋರೆಗಳನ್ನು ತಿದ್ದುವ ಅರ್ಹತೆನ್ನು ಉಳಿಸಿಕೊಳ್ಳಬೇಕು.

ಆದರೆ ಸಂಪೂರ್ಣ ಜನದ್ರೋಹಿಯಾದ, ಈ ನೆಲದ ಪರಂಪರೆ ಮತ್ತು ಸಂವಿಧಾನವನ್ನೇ ಅಮೂಲಾಗ್ರವಾಗಿ ಅಳಿಯುವ, ಅವುಗಳ ಮೇಲೆ ದಾಳಿ ನಡೆಸುವ ವಿಲೋಮ ಸಿದ್ದಾಂತಗಳು ಪ್ರಭುತ್ವಕ್ಕೇರಿ ದೇಶದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿರುವಾಗಲೂ ಸಾಹಿತಿಯಾದವನು ‘ಪಕ್ಷಾತೀತ’ ಎಂಬ ಕವಚ ಧರಿಸಿಕೊಳ್ಳುವುದು ನನ್ನ ಪ್ರಕಾರ ಅಪರಾಧವಾಗುತ್ತೆ. ಸಾಹಿತ್ಯ ಕೇವಲ ರಂಜನೆಗಾಗಿ ಹುಟ್ಟಿಕೊಂಡ ಬದುಕಿನ ಪ್ರಾಕಾರವಲ್ಲ. ಅದರ ಆಶಯ ಸಮಾಜದ, ಅಂದರೆ ಜನರ ಮುಂಚಲನೆ. ಅದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ನಮ್ಮ ಸುತ್ತ ಘಟಿಸುತ್ತಿದ್ದಾಗ, ನಾವು ತುಸು ಭಂಡರಾಗುವ ಧೈರ್ಯ ತೋರದೆ ಹೋದರೆ ನಮ್ಮೊಳಗಿರುವ ಸಾಹಿತ್ಯ ಸರಕಿನ ಘನತೆಯಾದರೂ ಹೇಗೆ ಉಳಿದೀತು?” ಅಂದರು.

ಅವರ ಮಾತಿನಲ್ಲಿ ಅರ್ಥ ಇದೆ ಅನ್ನಿಸಿತು. ಅವರು ‘ಭಂಡ’ ಎಂದು ಪ್ರಯೋಗಿಸಿದ ಪದ, ನಮ್ಮ ಸಾಹಿತ್ಯದೊಳಗೆ ಹಾಸುಹೊಕ್ಕಾಗಿರುವ ‘ಬಂಡಾಯ’ವನ್ನು ನನಗೆ ನೆನಪಿಸಿತು. ಈ ಬಂಡಾಯ ಸಾಹಿತ್ಯವು, ಹಿಂದೆ ಇದೇ ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ಟೀಕಿಸಿದೆ, ವಿಮರ್ಶಿಸಿದೆ, ಪ್ರತಿರೋಧ ಒಡ್ಡಿದೆ. ಈಗ ಕಾಲಚಕ್ರ ತಿರುಗಿದೆ. ಬಂಡಾಯವನ್ನು ಲೆಕ್ಕಿಸದ, ವಿಮರ್ಶೆಯನ್ನೂ ಸಹಿಸದ, ಪ್ರತಿರೋಧಗಳನ್ನು ಬಲಪ್ರಯೋಗದಿಂದ ಹತ್ತಿಕ್ಕುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಬದಲಾದ ಕಾಲಘಟ್ಟದಲ್ಲಿ ಜೀವಸ್ನೇಹಿ, ಜನಮುಖಿ, ಮುಮ್ಮುಖಿ ಸಾಹಿತಿ, ಚಿಂತಕರು, ಬುದ್ದಿಜೀವಿಗಳು ಒಂದು ಹೆಜ್ಜೆ ಮುಂದಿಟ್ಟು ಯೋಚಿಸಬೇಕಾದ ತುರ್ತಿರುವುದನ್ನು ಅವರ ಮಾತು ಅರ್ಥ ಮಾಡಿಸಿತು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!