Friday, September 20, 2024

ಪ್ರಾಯೋಗಿಕ ಆವೃತ್ತಿ

3ನೇ ಬಾರಿಗೆ ಮಂಡ್ಯಕ್ಕೆ ಸಾಹಿತ್ಯ ಸಮ್ಮೇಳಾನಾತಿಥ್ಯ ದೊರೆತಿರುವುದು ಸಂತಸದ ವಿಷಯ: ಚಲುವರಾಯಸ್ವಾಮಿ

ಕನ್ನಡ ಎಂದ ತಕ್ಷಣ ಎಲ್ಲರಿಗೂ ಮನಸ್ಸಿನಲ್ಲಿ ಸಂತೋಷ, ಮಂಡ್ಯ ಜಿಲ್ಲೆಯಲ್ಲಿ ಇದು ಮೂರನೇ ಬಾರಿ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರಕಿರುವುದು ಸಂತೋಷದ ವಿಷಯವಾಗಿದೆ, ಡಿಸೆಂಬರ್ 20,21 ಹಾಗೂ 22 ರಂದು 87ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಪ್ರಾರಂಭಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಇಂದು ಆಯೋಜಿಸಿರುವ ಸಭೆಯು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುವ ಕಾರ್ಯಕ್ರಮವಾಗಿದೆ. ಸಮಿತಿಯಲ್ಲಿರುವ ಪ್ರತಿಯೊಬ್ಬರು ಯಾವುದೇ ಲೋಪ ಉಂಟಾಗದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ. ಶಾಸಕರು ಹಾಗೂ ಇನ್ನಿತರ ಗಣ್ಯರನ್ನು ಸಮಿತಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೇರೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಗಳಿಂದ ಕನ್ನಡಾಭಿಮಾನಿಗಳನ್ನು‌ ಆಗಮಿಸುವಂತೆ ಸಮ್ಮೇಳನವನ್ನು ಸಜ್ಜುಗೊಳಿಸೋಣ, ಪ್ರತಿಯೊಬ್ಬರಿಗೂ ಆಹ್ವಾನ ನೀಡೋಣ ಎಂದರು.

ಯೋಜನೆ ರೂಪಿಸಿಕೊಳ್ಳಿ

ಎಲ್ಲಾ ಸಮಿತಿಯು ಸಮನ್ವಯದಿಂದ ಕಾರ್ಯನಿರ್ವಹಿಸೋಣ ಯಾವುದೇ ಗೊಂದಲ ಇದ್ದರೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಿ. ಸಮ್ಮೇಳನವನ್ನು ಆಕರ್ಷಿತವಾಗಿ ಮಾಡಲು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಿ ಎಂದರು.

ಎಲ್ಲರೂ ಸಂಘಟಿತರಾಗಿ ಕೆಲಸ ನಿರ್ವಹಿಸೋಣ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಚರಿಸಲು 28 ಸಮಿತಿಯನ್ನು ರಚಿಸಲಾಗಿದೆ. ಎಲ್ಲರೂ ಸಂಘಟಿತರಾಗಿ ಕೆಲಸ ನಿರ್ವಹಿಸೋಣ ಎಂದರು.

ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ನಾಮಕರಣವಾದ ನಂತರ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಆಚರಿಸಲಾಯಿತು. ಡಿಸೆಂಬರ್ ಮಾಹೆಯಲ್ಲಿ ಕ್ರಿಸ್ ಮಸ್ ರಜೆಯಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಕನ್ನಡ ಆಸಕ್ತರನ್ನು ಸೇರಿಸುವ ಉದ್ದೇಶದಿಂದ ಡಿಸೆಂಬರ್ 20, 21 ಹಾಗೂ 22 ರಂದು ಆಚರಿಸಲಾಗುತ್ತಿದೆ ಎಂದರು.

ಕ್ರಿಯಾ ಯೋಜನೆ ಸಿದ್ದಪಡಿಸಿ

ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ಆಗಸ್ಟ್ 30 ರೊಳಗೆ ಎಲ್ಲಾ ಸಮಿತಿಗಳು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಒದಗಿಸಬೇಕು. ವಸತಿ, ವೇದಿಕೆ, ಆಹಾರ ಸಮಿತಿ ಅವರು ಕೆಲಸ ಶೀಘ್ರವಾಗಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಲಭ್ಯವಿರುವ ವಸತಿ ಶಾಲೆ, ಹೋಟೆಲ್‌, ರೆಸಾಟ್೯, ಹೋಮ್ ಸ್ಟೇ ಸೇರಿದಂತೆ ವಿವಿಧ‌ ಕಡೆ ಲಭ್ಯವಾಗುವ ವಸತಿಗಳ ವಿವರವನ್ನು ಪಡೆದುಕೊಳ್ಳಿ ಎಂದರು.

ಎಲ್ಲಾ ಸಮಿತಿಗಳು ಅನುದಾನವನ್ನು ಪಾರದರ್ಶಕವಾಗಿ ವೆಚ್ಚ ಮಾಡಬೇಕು. ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಸದಸ್ಯ ಕಾರ್ಯದರ್ಶಿಗಳು ಹಾಗೂ ಸಂಚಾಲಕರು ಸರಿಯಾದ ರೀತಿಯಲ್ಲಿ ಕಡತ ನಿರ್ವಹಿಸಿ ಸಮಿತಿಯಲ್ಲಿ ಮಂಡಿಸಬೇಕು. ಸಭೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾಡಳಿತ, ಸರ್ಕಾರಕ್ಕೆ ಸೀಮಿತ ಮಾಡದೇ ಪ್ರತಿಯೊಬ್ಬರು ಸೇರಿ ಕೊಂಡು ಐತಿಹಾಸಿಕ ಹಬ್ಬವಾಗಿ ಆಚರಿಸಿ. ದಾಖಲೆ ಸೃಷ್ಠಿಸುವ ರೀತಿ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಮನಸ್ಸಿನಲ್ಲಿ ಸವಿ ನೆನಪಾಗಿ ಉಳಿಯುವ ರೀತಿ ಮಾಡೋಣ ಎಂದರು.

ಕನ್ನಡ ಭಾಷೆಯ ಹಬ್ಬವನ್ನು ಸಂಭ್ರಮಿಸೋಣ

ಕನ್ನಡ ಸಾಹಿತ್ಯ ಸಮ್ಮೇಳನದ ಮಹಾಪೋಷಕ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು ನುಡಿ, ಭಾಷೆಯನ್ನು ಸಂಭ್ರಮಿಸುವ ಹಬ್ಬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಭೌತಿಕ, ಮಾನಸಿಕ ಶಕ್ತಿ ನೀಡುವ ನಮ್ಮ ಕನ್ನಡ ಭಾಷೆಯ ಹಬ್ಬವನ್ನು ಸಂಭ್ರಮಿಸೋಣ. ಪ್ರತಿಯೊಂದು ಕಲಿಕಾ ವಿಭಾಗ ಹಾಗೂ ಕ್ಷೇತ್ರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.

ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಡಿಂಡಿಮವನ್ನು ಬಾರಿಸಬೇಕು ಇದಕ್ಕೆ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲು ಸತ್ತಂತಿಹರನ್ನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸಿ ಸಮ್ಮೇಳನವನ್ನು ಉತ್ತಮವಾಗಿ ಆಚರಿಸೋಣ ಎಂದರು.

ಇಂಜಿನಿಯರಿಂಗ್ ವಿಭಾಗದಲ್ಲಿ ಕನ್ನಡ ಭಾಷೆಯ ಮೂಲಕ ಕಲಿಕೆಗೆ ಅವಕಾಶ ನೀಡಿದರು ವಿದ್ಯಾರ್ಥಿಗಳು ದಾಖಲಾಗುವುದಿಲ್ಲ, ಇದಕ್ಕೆ ಮುಖ್ಯ ಕಾರಣ ಮುಂದಿನ ದಿನಗಳಲ್ಲಿ ಕೆಲಸದ ಭದ್ರತೆ ಇಲ್ಲ ಎಂದು. ಕನ್ನಡ ಭಾಷೆಯಲ್ಲಿ ಕಲಿತ ನಂತರ ಉದ್ಯೋಗದ ಭದ್ರತೆ ಒದಗಿಸುವ ರೀತಿ ಚಿಂತನೆ ನಡೆಸಬೇಕು ಎಂದರು.

ಕನ್ನಡ ಜ್ಯೋತಿ ರಥ ಯಾತ್ರೆ

ಕನ್ನಡ ಜ್ಯೋತಿ ರಥ ಯಾತ್ರೆ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ. ಸಮ್ಮೇಳನದ ಪ್ರಮುಖ್ಯತೆ ಹಾಗೂ ಆಹ್ವಾನ ನೀಡಲಿದೆ. ಇದರ ಮಾದರಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಸಿದ್ಧಪಡಿಸಿ ಚಾಲನೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷರಾದ ಡಾ. ಮೀರಾ ಶಿವಲಿಂಗಯ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಮಾಜಿ ಶಾಸಕ ಅನ್ನದಾನಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು, ಸದಸ್ಯರು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!