Thursday, September 19, 2024

ಪ್ರಾಯೋಗಿಕ ಆವೃತ್ತಿ

ಬರ ಪರಿಸ್ಥಿತಿ ಸುಧಾರಿಸಿದ ನಂತರ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ

ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಮಂಡ್ಯದಲ್ಲಿ ನಡೆಸಲು ಉದ್ದೇಶಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಯಂಪ್ರೇರಿತವಾಗಿ ತಾತ್ಕಾಲಿಕವಾಗಿ ಮುಂದೂಡಿದೆ.

ಬರ ಪರಿಸ್ಥಿತಿ ಸುಧಾರಿಸಿದ ನಂತರ ಅತಿ ಶೀಘ್ರವಾಗಿ ಸರ್ಕಾರದೊಂದಿಗೆ ಚರ್ಚಿಸಿ ಸಮ್ಮೇಳನ ನಡೆಸುವ ದಿನಾಂಕಗಳನ್ನು ನಿಗದಿಗೊಳಿಸಿ ಮಂಡ್ಯದಲ್ಲಿಯೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಡಿಸೆಂಬರ್ 01 ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವ ಕುರಿತು 2023-24ನೇ ಆಯವ್ಯಯದಲ್ಲಿ ಪ್ರಸ್ತಾಪಿಸಿರುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಅವರು ತಿಳಿಸಿದ್ದಾರೆ.

49 ಹುಲಿ ಹಾಗೂ 237 ಆನೆಗಳು ಸಾವು

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 49 ಹುಲಿ ಹಾಗೂ 237 ಆನೆಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ಹುಲಿ ದಾಳಿಯಿಂದ 11 ಹಾಗೂ ಆನೆಗಳ ದಾಳಿಯಿಂದ 84 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಲಿಖಿತ ನೀಡಿರುವ ಸಚಿವರು, 2020-21ರಲ್ಲಿ 14 ಹುಲಿ, 74 ಆನೆ; 2021-22ರಲ್ಲಿ 19 ಹುಲಿ, 90 ಆನೆ ಹಾಗೂ 2022-23ರಲ್ಲಿ 16 ಹುಲಿ, 73 ಆನೆಗಳು ಮೃತಪಟ್ಟಿವೆ ಎಂದು ವಿವರ ನೀಡಿದ್ದಾರೆ.

ರಾಷ್ಟ್ರೀಯ ಹುಲಿ ಗಣತಿ 2022ರ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು 563 ಹುಲಿಗಳಿವೆ. 2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿ ವರದಿಯಂತೆ ರಾಜದಲ್ಲಿ ಅಂದಾಜು 6395 ಆನೆಗಳಿವೆ. 2022-23ನೇ ಸಾಲಿನಲ್ಲಿ ಉತ್ತರ ಪ್ರದೇಶಕ್ಕೆ 4 ಹಾಗೂ ಮಧ್ಯಪ್ರದೇಶಕ್ಕೆ 14 ಬಂಧಿತ ಆನೆಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಪ್ರಾಜೆಕ್ಟ್ ಟೈಗರ್’ ಮತ್ತು ‘ಪ್ರಾಜೆಕ್ಟ್ ಎಲಿಫೆಂಟ್’ ಅಡಿಯಲ್ಲಿ ಹುಲಿ ಮತ್ತು ಆನೆಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಕ್ರಮವಾಗಿ ರೂ. 6782.14 ಲಕ್ಷ ಮತ್ತು ರೂ. 1312.41 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿಹಾರ 

ಕಳೆದ ಮೂರು ವರ್ಷಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟ 11 ಮಂದಿಯ ಕುಟುಂಬಕ್ಕೆ 105 ಲಕ್ಷ ರೂಪಾಯಿ ಹಾಗೂ ಆನೆ ದಾಳಿಯಿಂದ ಮೃತಪಟ್ಟ 84 ಮಂದಿಯ ಕುಟುಂಬಗಳಿಗೆ 695 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!