Saturday, May 18, 2024

ಪ್ರಾಯೋಗಿಕ ಆವೃತ್ತಿ

ರೈತರನ್ನು ಯಾಮಾರಿಸಿ ತಮಿಳುನಾಡಿಗೆ ನೀರು: ಸುನಂದ ಜಯರಾಂ

ಮಂಡ್ಯ ಜಿಲ್ಲೆಯ ರೈತರನ್ನು ಯಾಮಾರಿಸಿ, ನಾಲೆಗಳ ಮೂಲಕ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ನಡೆಸಿರುವ ವಂಚಕ ನಡೆ ಖಂಡನೀಯ ಎಂದು ರೈತ ನಾಯಕಿ ಸುನಂದ ಜಯರಾಂ ಅಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಬೆಳೆಗೂ ನೀರು ಬೇಕೆಂದು ಯಾವ ರೈತರೂ ಕೇಳುತ್ತಿಲ್ಲ. ಆದರೂ ವಿ.ನಾಲೆ ಸೇರಿದಂತೆ ಅನೇಕ ನಾಲೆಗಳಿಂದ ನೀರು ಹರಿಸುತ್ತಾ ತಮಿಳುನಾಡಿನ ಹಿತ ಕಾಯಲು ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿದರು.

ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಒಟ್ಟು ನಾಲ್ಕು ಕಟ್ಟು ನೀರು ಹರಿಸಲಾಗುವುದು ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ನಾಲ್ಕು ಕಟ್ಟಿನಲ್ಲಿ ಕೊನೇ ಕಟ್ಟು ನೀರನ್ನು ನ.8 ರಿಂದ ನ. 23ರ ವರೆಗೆ ನೀರು ಹರಿಸಿ ನ.24 ರಿಂದ ಕಾಲುವೆಗಳಲ್ಲಿ ನೀರು ನಿಲ್ಲಿಸಬೇಕಾಗಿತ್ತು. ಆದರೆ, ನ.24ರಿಂದ ಕಾಲುವೆಗಳಲ್ಲಿ ನೀರು ಹರಿಯುತ್ತಲೇ ಇದೆ. ಆ ಮೂಲಕ 18 ದಿನಗಳ ಕಾಲ ನಿರಂತರವಾಗಿ ನೀರನ್ನು ಹರಿಸಲಾಗುತ್ತಿದೆ, ಸಮಿತಿಯು ಈ ವಿಷಯವನ್ನು ಸಂಗ್ರಹಿಸಿ ಖಚಿತಪಡಿಸಿಕೊಂಡಿದೆ ಎಂದು ವಿವರಿಸಿದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಸದ್ಯ ಇರುವ ನೀರಿನ ಸಂಗ್ರಹ ಇನ್ನೂ ಎರಡು ಕಟ್ಟು ನೀರನ್ನು ಬಿಡಲು ಸಾಧ್ಯವಿತ್ತು. ಆದರೆ ಸರ್ಕಾರ ವಾಮಮಾರ್ಗದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಕಿಡಿಕಾರಿದರು. ಇದರಿಂದಾಗಿ ತಮಿಳುನಾಡು ಇದನ್ನೇ ದಾಖಲೆ ಮಾಡಿಕೊಂಡು ಭವಿಷ್ಯದಲ್ಲಿ ನಿರಂತರವಾಗಿ ನಮ್ಮಿಂದ ನೀರನ್ನು ದೋಚಲು ಅವಕಾಶ ಮಾಡಿಕೊಟ್ಟಂತಾಗಿದೆ. ಸರ್ಕಾರದ ಈ ನಡೆ ಕರ್ನಾಟಕ ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಖಂಡಿಸಿದರು.

ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣ ಸಮಿತಿ ಕಾವೇರಿ ನದಿ ರಕ್ಷಣೆಯ ವಿಷಯದಲ್ಲಿ ಅನೇಕ ರೀತಿಯ ಒತ್ತಾಯ ಮಾಡುತ್ತಿದ್ದರೂ ಸಹ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾವೇರಿ ನದಿ ನೀರಿನ ವಿಷಯದಲ್ಲಿ ಚರ್ಚಿಸಲು ಎರಡೂ ಸದನಗಳ ಜಂಟಿ ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿಗಳಿಗೆ ಹಾಗೂ ಎರಡೂ ಸದನಗಳ ಅಧ್ಯಕ್ಷರಿಗೆ, ಬಿಜೆಪಿ-ಜಾ.ದಳ ಪಕ್ಷಗಳ ಶಾಸನಸಭಾ ಮುಖ್ಯಸ್ಥರುಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಆದರೂ ಈ ವಿಷಯದಲ್ಲಿ ಯಾವುದೇ ನಿಲುವು ಪ್ರಕಟಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕಿಡಿಕಾರಿದರು.

ಕಾವೇರಿ ಕೊಳ್ಳದ ನೀರಾವರಿ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಲಾಗಿತ್ತು. ಇವುಗಳ ಬಗ್ಗೆಯೂ ಸರ್ಕಾರ ಮೌನವಹಿಸಿರುವುದು ಸರಿಯಲ್ಲ. ಒಟ್ಟಾರೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಕಾವೇರಿ ನದಿ ನೀರಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಸಡ್ಡೆ ತೋರುತ್ತಿವೆ. ಆದ್ದರಿಂದ ಕಾವೇರಿ ಕೊಳ್ಳದ ರೈತರು, ಸಾರ್ವಜನಿಕರು, ನಾಗರಿಕರು ಒಟ್ಟಾಗಿ ಕಾವೇರಿ ನದಿ ನೀರನ್ನು ಉಳಿಸಿ ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಸರ್ಕಾರ ರೈತರ ಮರಣ ಶಾಸನ ಬರೆಯಲಿದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ನಮ್ಮ ಹೋರಾಟ ಮತ್ತು ಸಂಘಟನೆಯ ಕುರಿತು ಅಸಡ್ಡೆಯಿಂದ ಮಾತನಾಡುವವರಿಗೆ ಸದ್ಯದಲ್ಲೇ ತಕ್ಕ ಉತ್ತರ ನೀಡಲಾಗುವುದು ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್‌ನ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕೆ.ಶಂಕರ್, ದಸಂಸದ ಎಂ.ವಿ.ಕೃಷ್ಣ, ಮಹಾಂತಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!