ಕಾರ್ತಿಕ ಮಾಸದ ಪೂಜೆಗೆ ಪೋಷಕರ ಜೊತೆ ತೆರಳಿದ್ದ ಐದು ವರ್ಷದ ಬಾಲಕನ ಮೇಲೆ ದೇವಾಲಯದ ಗೇಟ್ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೆಚ್.ಜೆ ಸಿದ್ದರಾಜು -ಸುಮಿತ್ರ ದಂಪತಿಗಳ ಪುತ್ರ ಜಿಷ್ಣು ಹೆಚ್.ಎಸ್ (5) ಸಾವನ್ನಪ್ಪಿದ ಬಾಲಕ.
ಚಿನ್ಮಯ ವಿದ್ಯಾಲಯದಲ್ಲಿ ಎಲ್ ಕೆ ಜಿ ಓದುತ್ತಿದ್ದ ಜಿಷ್ಣು, ಸ್ವಗ್ರಾಮ ಹುಂಜನಕೆರೆಯ ಚೆನ್ನಕೇಶವ ದೇವಾಲಯದಲ್ಲಿ ಎರಡನೇ ಕಾರ್ತಿಕ ಸೋಮವಾರದ ವಿಶೇಷ ಪೂಜೆ ಇದ್ದುದ್ದರಿಂದ ಪೋಷಕರ ಜೊತೆ ದೇವಾಲಯಕ್ಕೆ ತೆರಳಿದ್ದ. ಆ ಸಂದರ್ಭದಲ್ಲಿ ಶಿಥಿಲಾವಸ್ಥೆ ಕಬ್ಬಿಣದ ಗೇಟ್ ಹಿಡಿದುಕೊಂಡಿದ್ದಾಗ ಮಗುವಿನ ಮೇಲೆ ಬಿದ್ದಿದ್ದು,ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ.
ಗಾಯಗೊಂಡ ಬಾಲಕನ ಚೀರಾಟ ಯಾರಿಗೂ ಕೇಳಿಸಿಲ್ಲ, ಸ್ವಲ್ಪ ಹೊತ್ತಿನ ನಂತರ ಮಗು ಕಾಣದಿದ್ದಾಗ ಪೋಷಕರ ಹುಡುಕಿದಾಗ ಗೇಟಿನ ಕೆಳಗಡೆ ಮಗು ಸಿಲುಕಿರುವುದು ಕಂಡು ಬಂದಿತು, ತಕ್ಷಣ ಆತನನ್ನು ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ಮಗು ಸಾವಿಗೀಡಾಗಿತ್ತು.
ಅರಕೆರೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




