130ಕ್ಕೂ ಹೆಚ್ಚು ನಿವೇಶನರಹಿತ ಕುಟುಂಬಗಳಿಗೆ ಸರ್ಕಾರಿ ಭೂಮಿಯಲ್ಲಿ ನಿವೇಶನ ವಿತರಿಸಲು ಆಗ್ರಹಿಸಿ ಬೂದನೂರು ನಿವೇಶನ ರಹಿತರು ಬುಧವಾರ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಸತಿ ರಹಿತರು ಕಳೆದ 8 ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಸುತ್ತಿದ್ದು, ನಿವೇಶನ ರಹಿತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತಮ್ಮ ಗ್ರಾಮ ಪಂಚಾಯತಿ ಆಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ನಿವೇಶನ ದೊರಕಿಸುವ, ವಿತರಿಸುವ ಪ್ರಕ್ರಿಯೆಯಲ್ಲಿ ಯಾವುದೇ ಅಗತ್ಯ ಸಿದ್ದತೆ ಹಾಗೂ ಸರ್ಕಾರಿ ಭೂಮಿಯ ಬಗ್ಗೆ ಮಾಹಿತಿ, ದಾಖಲೆ ಹೊಂದಿಲ್ಲದಿರುವುದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನುಷ್ಠಾನದಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.
ನಿವೇಶನ, ವಸತಿರಹಿತರಿಗೆ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಸಮಿತಿ ರಚಿಸಿ, ಯೋಜನೆ ಅನುಷ್ಠಾನಗೊಳ್ಳಬೇಕು.
ಗ್ರಾಮದ ಸರ್ವೇ ನಂ.84 ಹಾಗೂ 85ರ ಬಗ್ಗೆ ಇರುವ ತಡೆಯಾಜ್ಞೆ ತೆರವುಗೊಳಿಸಲು ಗ್ರಾಮ ಪಂಚಾಯತಿ ವಕಾಲತ್ತು ಹಾಕಬೇಕು.
ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಮಂಜೂರು ಮಾಡಿರುವ 5.25 ಎಕರೆ ಭೂಸ್ವಾಧೀನ ಹಾಗೂ ವಿತರಣೆಗೆ ಕ್ರಮ ಕೈಗೊಳ್ಳಬೇಕು.
ಸರ್ಕಾರಿ ಭೂಮಿಯ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡದ ಕಂದಾಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ನಿರ್ಣಯ ಕೈಗೊಂಡು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಭಾರ ಅಧ್ಯಕ್ಷೆ ಮಾನಸ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಡಿಓ ವಿನಯ್ ಕುಮಾರ್ ಪ್ರತಿಭಟನಾಕಾರರಾದ ಯಲ್ಲಮ್ಮ, ಸವಿತಾ, ಕೆಂಪಮ್ಮ ಸುಧಾ, ರಂಜಿತಾ ಮತ್ತಿತ್ತರಿದ್ದರು.




