ನುಗ್ಗೆಮರದ ರೆಂಬೆ ಕಡಿಯುತ್ತಿದ್ದ ವ್ಯಕ್ತಿಗೆ ವಿದ್ಯುತ್ ತಗುಲಿ, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಮಂಡ್ಯ ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.
ಉಮ್ಮಡಹಳ್ಳಿ ಗ್ರಾಮದ ಸಿದ್ದು (50) ಮೃತ ವ್ಯಕ್ತಿ. ಸಿದ್ದು ಅವರು ಸುತ್ತಮುತ್ತಲ ಗ್ರಾಮದಲ್ಲಿ ನುಗ್ಗೆ ಸೊಪ್ಪು ಖರೀದಿಸಿ ಮಾರಾಟ ಮಾಡುತ್ತಿದ್ದರು. ಇಂದು ಕೂಡ ಬಸವನಪುರದಲ್ಲಿ ನುಗ್ಗೆ ಸೊಪ್ಪು ಕೀಳಲು ಮರದ ರೆಂಬೆ ಕಡಿಯುತ್ತಿದ್ದ ಸಂದರ್ಭದಲ್ಲಿ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸೆಸ್ಕಾಂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಸಿದ್ದು ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಶವಾಗಾರಕ್ಕೆ ಸಾಗಿಸಲಾಗಿದ್ದು, ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




