Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿದಿನ 5 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಮಂಡ್ಯ ಜಿಲ್ಲೆಯ ರೈತರಿಗೆ ಪ್ರತಿದಿನ 5 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡಲೇಬೇಕು. ಈ ಬಗ್ಗೆ ಮತ್ತೊಮ್ಮೆ ದೂರು ಬಂದರೆ ಅಮಾನತು ಮಾಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯ ಎಂಡಿ ಐದು ಗಂಟೆ ತ್ರೀ ಫೇಸ್ ವಿದ್ಯುತ್ ಕೊಡಲು ಸಮಸ್ಯೆ ಇಲ್ಲವೆಂದು ಹೇಳಿದ್ದಾರೆ. ಈ ಸಂಬಂಧ ಸರ್ಕಾರವೂ ಸೂಚನೆ ನೀಡಿದೆ. ಆದಾಗ್ಯೂ ಸಮರ್ಪಕ ವಿದ್ಯುತ್ ಕೊಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸೆಸ್ಕ್ ಅಧಿಕಾರಿಗಳಾದ ಶಂಕರ್, ಕೃಷ್ಣಮೂರ್ತಿ, ಶ್ರೀಧರ್, ಮೂರು ಬ್ಯಾಚ್‌ನಂತೆ ವಿದ್ಯುತ್ ನೀಡಲಾಗುತ್ತಿದೆ. ಬೆಳಗ್ಗೆ 5 ಗಂಟೆಯಿಂದ 10 ರವರೆಗೆ ಮೊದಲ ಬ್ಯಾಚ್, 10ಗಂಟೆಯಿಂದ ಮಧ್ಯಾಹ್ನ 3ರವರೆಗೆ ಎರಡನೇ ಬ್ಯಾಚ್ ಹಾಗೂ ರಾತ್ರಿ 8 ಗಂಟೆಯಿಂದ 1ರವರೆಗೆ ತ್ರೀ ಫೇಸ್ ನೀಡಲಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಕದಲೂರು ಉದಯ್, ರವಿಕುಮಾರ್ ಹಾಗೂ ಎಚ್.ಟಿ.ಮಂಜು ಆಕ್ಷೇಪಿಸಿದರು.

ಅಲ್ಲದೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಅದರಲ್ಲಿಯೂ ರಾತ್ರಿ ಹೊತ್ತು ವಿದ್ಯುತ್ ಸಮಸ್ಯೆಯಾದರೆ ಯಾವ ಅಧಿಕಾರಿಗಳು ಸರಿಪಡಿಸುವುದಿಲ್ಲ. ಹೀಗಾದರೆ ರೈತರ ಸ್ಥಿತಿ ಏನಾಗಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಮೌನಕ್ಕೆ ಶರಣಾದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬ್ಯಾಚ್‌ನಂತೆ ವಿದ್ಯುತ್ ಕೊಡುವುದು ಸರಿ. ಆದರೆ ಎಲ್ಲರಿಗೂ ಸಮರ್ಪಕವಾಗಿ ಪೂರೈಕೆಯಾಗಬೇಕು. ಆದ್ದರಿಂದ ರೋಟೆಷನ್ ನಿಯಮ ಅನುಸರಿಸಿ. ಪ್ರತಿದಿನವೂ ಬದಲಾವಣೆ ಮಾಡಿ ವಿದ್ಯುತ್ ಕೊಡಿ. ಪ್ರಮುಖವಾಗಿ ಯಾವ ಸಮಯದಲ್ಲಿ ಕೊಡುತ್ತೀರಿ ಎನ್ನುವುದನ್ನು ರೈತರಿಗೆ ತಿಳಿಸಿ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಸೂಚನೆ ನೀಡಿದರು.

ಕೆರೆ ತುಂಬಿಸಿ 

ಸಭೆಯ ಪ್ರಾರಂಭದಲ್ಲಿ ಬರ ಹಾಗೂ ನೀರಿನ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಹೇಮಾವತಿ ನೀರಾವರಿ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾತನಾಡಿ, ಕಾವೇರಿ ಕಣಿವೆ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಒಟ್ಟು ಬಳಕೆಗೆ ಸಿಗುವಂತೆ 48.306 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ ಮುಂದಿನ ಜು.24ರವರೆಗೆ ಅಂದರೆ 9 ತಿಂಗಳು ಕುಡಿಯಲು 29 ಟಿಎಂಸಿ ನೀರು ಬೇಕಿದೆ. ಆದರೆ ಬೆಳೆದು ನಿಂತಿರುವ ಬೆಳೆಗೆಯೇ ಸುಮಾರು 41 ಟಿಎಂಸಿಯಷ್ಟು ನೀರಿನ ಅವಶ್ಯಕತೆ ಇದೆ. ಆದರೆ ಪ್ರಸ್ತುತ 22 ಟಿಎಂಸಿಯಷ್ಟು ಕೊರತೆ ಎದುರಾಗಿದೆ ಎಂದರು.

ಈ ವೇಳೆ ನರೇಂದ್ರಸ್ವಾಮಿ ಮಾತನಾಡಿ, ಬೆಳೆಗಿರಲಿ ಮಳವಳ್ಳಿ ತಾಲೂಕಿನ ಕೆರೆಗಳನ್ನು ತುಂಬಿಸಿಲ್ಲ. ಈ ಬಗ್ಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಇದು ಕೊನೆಯ ಅವಕಾಶ. ಈ ಬಾರಿ ನೀರು ಬಿಟ್ಟಾಗ ಕೆರೆ ತುಂಬಿಸಿದಿದ್ದರೆ ಸಮಸ್ಯೆಯಾಗಲಿದೆ. ಸಿಎಂ ಮಾತನಾಡಿ, ಜಿಲ್ಲೆಯ ಎಲ್ಲ ಕೆರೆಗಳಿಗೆ ಮೊದಲು ನೀರು ತುಂಬಿಸಿ ಎಂದು ಸೂಚನೆ ನೀಡಿದರು. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ನಾಗಮಂಗಲ ಹಾಗೂ ಬಸರಾಳು ಭಾಗದ ಕೆರೆಗಳನ್ನು ತುಂಬಿಸುವ ಕೆಲಸವಾಗಲಿ ಎಂದರು.

ಹಣ ದುರುಪಯೋಗ ತನಿಖೆಗೆ ಆದೇಶ

ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮಳವಳ್ಳಿ ಪಟ್ಟಣದಲ್ಲಿ ಅಮೃತಯೋಜನೆಯಡಿ ನೀರಾವರಿ ಕೆಲಸಕ್ಕೆಂದು 71 ಕೋಟಿ ರೂ ಅನುದಾನ ತರಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸದೇ ಹಸ್ತಾಂತರ ಮಾಡಲಾಗಿದೆ. ಇಂದಿಗೂ ಹಲವು ಪ್ರದೇಶಕ್ಕೆ ನೀರು ಹೋಗುತ್ತಿಲ್ಲ ಎಂದರು.

ಸಿಎಂ ಮಾತನಾಡಿ, ಆ ಸಮಯದಲ್ಲಿ ಇದ್ದ ಅಧಿಕಾರಿಗಳ ಬಗ್ಗೆ ವಿಚಾರಿಸಿದಾಗ ಜಲಮಂಡಳಿ ಅಧಿಕಾರಿ ನಿವೃತ್ತಿಯಾಗಿರುವುದಾಗಿ ಹಾಗೂ ಪುರಸಭೆ ಅಧಿಕಾರಿ ವರ್ಗಾವಣೆಯಾಗಿರುವುದು ಮಾಹಿತಿ ನೀಡಲಾಯಿತು. ಈ ವೇಳೆ ತಕ್ಷಣವೇ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ನಾಗಭೂಷಣ್‌ಗೆ ಕರೆ ಮಾಡಿ, ಈ ಅವ್ಯವಹಾರ ಸಂಬಂಧ ತುರ್ತು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಒಂದು ವೇಳೆ ನಿವೃತ್ತಿಯಾಗಿದ್ದರೆ ಮಾಶಾಸನ ತಡೆ ಹಿಡಿಯಿರಿ. ಅಂತೆಯೇ ಬೆಂಗಳೂರು ಮೂಲದ ಗುತ್ತಿಗೆದಾರ ಕೆಲಸ ಮಾಡಿದ್ದು, ಆತನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆದೇಶ ನೀಡಿದರು.

ನೀರಿನ ದರ ಇಳಿಕೆಗೆ ಸೂಚನೆ

ಮಂಡ್ಯ ನಗರದ ನಿವಾಸಿಗಳ ಹಲವು ದಿನ ಬೇಡಿಕೆಯಾಗಿದ್ದ ನೀರಿನ ಶುಲ್ಕ ಕಡಿತಗೊಳಿಸುವ ಮನವಿಗೆ ಸಿಎಂ ಗ್ರೀನ್‌ಸಿಗ್ನಲ್ ನೀಡಿದರು. ಶಾಸಕ ರವಿಕುಮಾರ್ ಗಣಿಗ, ನೀರಿನ ಶುಲ್ಕ ಕಡಿಮೆ ಮಾಡುವಂತೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೂ ನೆಪ ಹೇಳಲಾಗುತಿದೆ. 280 ರೂ ಇರುವ ನೀರಿನ ದರವನ್ನು 220 ರೂಗೆ ಬಡ್ಡಿ ರಹಿತವಾಗಿ ಇಳಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ, ಪೌರಾಡಳಿತ ಇಲಾಖೆ ನಿರ್ದೇಶಕ ಮಂಜುಶ್ರೀ ಅವರಿಗೆ ಇಳಿಕೆ ಆದೇಶ ನಾಳೆಯೇ ಆಗಬೇಕೆಂದು ಸೂಚನೆ ನೀಡಿದರು. ಮಾತ್ರವಲ್ಲದೆ ಆದೇಶ ಆಗದಿದ್ದರೆ ನನ್ನ ಗಮನಕ್ಕೆ ತನ್ನಿ. ಕ್ರಮ ತೆಗೆದುಕೊಳ್ಳುತ್ತೇನೆ ಎಂದು ರವಿಕುಮಾರ್‌ಗೆ ತಿಳಿಸಿದರು.

ಮಂಡ್ಯ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲು ಕ್ರಮ

ಮಿಮ್ಸ್‌ನಲ್ಲಿರುವ ಸಿಬ್ಬಂದಿ ಕೊರತೆ, ಅರ್ಧಕ್ಕೆ ನಿಂತಿರುವ ಗ್ರಂಥಾಲಯ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲು ತುರ್ತು ಕ್ರಮ ವಹಿಸುವಂತೆ ಚಲುವರಾಯಸ್ವಾಮಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕ್ಯಾನ್ಸರ್ ಆಸ್ಪತ್ರೆಗೆಂದು 5.65 ಕೋಟಿ ರೂ ಅನುದಾನ ಎರಡು ಮೂರು ದಿನದಲ್ಲಿ ಬಿಡುಗಡೆಯಾಗಲಿದೆ. ಅಂತೆಯೇ ಯಂತ್ರೋಪಕರಣ ಖರೀದಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಟೆಂಡರ್ ಮಾಡಲಾಗುವುದು. ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಬೇಕು. ಅಂತೆಯೇ ಗ್ರಂಥಾಲಯ ಕಾಮಗಾರಿಗೆ ಅನುದಾನದ ಬಗ್ಗೆ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಎನ್.ಯತೀಶ್, ಎಡಿಸಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!