Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಅಬ್ಬರ ಜೋರು

✍️ ಎನ್. ನಾಗೇಶ್ 

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮದ್ದೂರು ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳ ಅಬ್ಬರ ಜೋರಾಗಿದೆ. ಇದುವರೆಗಿನ ಮದ್ದೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳನ್ನು ನೋಡಿದರೆ  ಹಿಂದೆಂದೂ ಕಂಡಿರದ ಚುನಾವಣೆ ಈ ಬಾರಿ ನಡೆಯಲಿದೆ ಎಂದು ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ.

ಕದಲೂರು ಉದಯ್

ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಎಂಟ್ರಿ ನೀಡಿರುವ ಕದಲೂರು ಉದಯ್ ಎಂಬ ಉದ್ಯಮಿಯಿಂದ ಕ್ಷೇತ್ರದಲ್ಲಿ ಅಬ್ಬರ ಹೆಚ್ಚಾಗಿದೆ. ಕಳೆದ ಒಂದೂವರೆ ವರ್ಷಗಳಿಂದಲೇ ಅಬ್ಬರದ ಪ್ರಚಾರಕ್ಕೆ ಕೈ ಹಾಕಿದ ಕದಲೂರು ಉದಯ್ ಕ್ಷೇತ್ರದಲ್ಲಿ ಇಂದಿಗೂ ಶರವೇಗದಲ್ಲಿ ಸಾಗುತ್ತಿದ್ದಾರೆ.

ಬರುವ ಸಂಕ್ರಾಂತಿ ಹಬ್ಬಕ್ಕೆಂದು ಕದಲೂರು ಉದಯ್ ಕ್ಷೇತ್ರದ ಪ್ರತಿ ಮನೆಗೂ ತೆರಳಿ ಹೆಣ್ಣು ಮಕ್ಕಳಿಗೆ ಸೀರೆ, ಬಳೆ,ಎಳ್ಳು ಬೆಲ್ಲ ಹಾಗೂ ಕ್ಯಾಲೆಂಡರ್ ಒಳಗೊಂಡ ಬಾಗಿನ ಹಂಚುವ ಮೂಲಕ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡಿದ್ದಾರೆ.

ಈ ಹಿಂದೆಯೂ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಪರಿಕರಗಳನ್ನು ನೀಡಿದ್ದಾರೆ. ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಕಿಸಿ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಬೃಹತ್ ಮಟ್ಟದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ,ಆರೋಗ್ಯ ತಪಾಸಣೆ,ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಕ್ಷೇತ್ರದ ಶಿಕ್ಷಕರಿಗೆ ಸೋಮನಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಬ್ಯಾಗ್, ಟಿಫನ್ ಬಾಕ್ಸ್ ನೀಡುವ ಮೂಲಕ ಚುನಾವಣಾ ವಂದನೆ ಸಲ್ಲಿಸಿದ್ದಾರೆ. ಧರ್ಮಸ್ಥಳಕ್ಕೆ ಸಾವಿರಾರು ಜನರನ್ನು ಕಳುಹಿಸಿ ದರ್ಶನ ಮಾಡಿಸಿರು ವುದಲ್ಲದೆ, ಓಂ ಶಕ್ತಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಧನಸಹಾಯ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದವಾಗಿರುವ ಕದಲೂರು ಉದಯ್, ಕ್ಷೇತ್ರದಲ್ಲಿ
ನಾನಾ ವಿಧದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈಗಾಗಲೇ ಜನರಿಗೆ, ವಿವಿಧ ಪಕ್ಷಗಳ ರಾಜಕೀಯ ಮುಖಂಡರಿಗೆ ಈ ಬಾರಿಯ ಮದ್ದೂರು ಕ್ಷೇತ್ರದ ಚುನಾವಣೆ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ.

ಎಸ್.ಪಿ.ಸ್ವಾಮಿ

ಬಿಜೆಪಿ ಟಿಕೆಟ್ ಆಕಾಂಕ್ಷಿ ಮನ್ಮುಲ್ ನಿರ್ದೇಶಕ ಎಸ್. ಪಿ.ಸ್ವಾಮಿ ಕೂಡ ಜನರ ಮನಗೆಲ್ಲಲು ವಿವಿಧ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕ್ಷೇತ್ರದ 20,000 ಜನರಿಗೆ ಕಂಬಳಿ ವಿತರಿಸಿದ್ದಾರೆ. ತಮ್ಮ ಪುತ್ರ ಶ್ರೀನಿಧಿ ಗೌಡ ಟ್ರಸ್ಟ್ ಮುಖಾಂತರ ಧರ್ಮಸ್ಥಳ ಯಾತ್ರೆಗೆ ಸಾವಿರಾರು ಜನರನ್ನು ಕಳುಹಿಸಿ ದರ್ಶನ ಮಾಡಿಸಿದ್ದಾರೆ.

ಕ್ಷೇತ್ರದ ಹಲವೆಡೆ ಆರೋಗ್ಯ ಶಿಬಿರ ಮತ್ತು ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿ ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಟ್ಟಿದ್ದಾರೆ. ಮಾಲಗಾರನಹಳ್ಳಿಯಲ್ಲಿ ನೇತ್ರ ಚಿಕಿತ್ಸೆ ಶಿಬಿರದ ಜೊತೆಗೆ ಗ್ರಾಮದ ಎಲ್ಲಾ ಮನೆಗಳಿಗೆ ಹಾಟ್ ಬಾಕ್ಸ್ ವಿತರಿಸಿದ್ದಾರೆ. ಓಂ ಶಕ್ತಿ ಯಾತ್ರಾರ್ಥಿಗಳಿಗೆ ಧನಸಹಾಯ,ಶಾಲಾ ಮಕ್ಕಳಿಗೆ ಪರಿಕರಗಳ ವಿತರಿಸಿರುವ ಎಸ್. ಪಿ. ಸ್ವಾಮಿ ಮತದಾರರ ಮನ ಗೆಲ್ಲಲು ನಾನಾ ಕಸರತ್ತು ಮಾಡಿದ್ದಾರೆ.

ಎಸ್.ಎಂ.ಗುರುಚರಣ್

2023 ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣರ ಸಹೋದರ ಎಸ್ ಎಂ ಶಂಕರ್ ಅವರ ಪುತ್ರ ಎಸ್ ಎಂ ಗುರುಚರಣ್ ಕ್ಷೇತ್ರದ ಮತದಾರರ ಮನ ಸೆಳೆಯಲು ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಬಸ್ಸುಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಜನರನ್ನು ಕಳುಹಿಸಿ ಮಲೈ ಮಹದೇಶ್ವರನ ದರ್ಶನ ಮಾಡಿಸಿದ್ದಾರೆ. ಪ್ರತಿದಿನ ಹತ್ತಾರು ಬಸ್ ಗಳು ಮಲೈ ಮಹದೇಶ್ವರನ ಸನ್ನಿಧಿಗೆ ಹೋಗುತ್ತಿದೆ.
ಕ್ಷೇತ್ರದಲ್ಲಿರುವ ಎಲ್ಲಾ ಹಾಲು ಉತ್ಪಾದಕರ ಸಂಘದ ಶೇರುದಾರ ರೈತರಿಗೆ ಹಾಲಿನ ಕ್ಯಾನುಗಳನ್ನು ವಿತರಣೆ ಮಾಡಿದ್ದಾರೆ.ಮಾಜಿ ಮುಖ್ಯಮಂತ್ರಿ ಕುಟುಂಬದ ಕುಡಿಯಾಗಿರುವ ಗುರುಚರಣ್ ಈ ಬಾರಿ ಕ್ಷೇತ್ರದ ಮತದಾರರ ಮನ ಗೆಲ್ಲಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ.

ಶಾಸಕ ಡಿ.ಸಿ‌.ತಮ್ಮಣ್ಣ

ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಡಿ.ಸಿ.ತಮ್ಮಣ್ಣ,ಇತರ ಆಕಾಂಕ್ಷಿಗಳ ಅಬ್ಬರ ನೋಡಿಕೊಂಡು ಸುಮ್ಮನೆ ಇದ್ದಾರೆ.ಮಲೆ ಮಹದೇಶ್ವರ,ಧರ್ಮಸ್ಥಳ ಯಾತ್ರೆಯಂತಹ ಯಾವ ಯಾತ್ರೆಯನ್ನೂ ಮಾಡಿಸಿಲ್ಲ. ಉಡುಗೊರೆಯನ್ನೂ ನೀಡಿಲ್ಲ.

ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಮಾಡಿ ಅದರ ಯಶಸ್ಸು ಕಂಡು ತಮ್ಮ ಪಾಡಿಗೆ ತಾವಿದ್ದಾರೆ.ಏನಾದರೂ ಹಂಚಿಕೊಳ್ಳಿ,ಯಾವ ಯಾತ್ರೆಯಾದರೂ ಮಾಡಿಕೊಳ್ಳಿ, ನಾನು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು,ಮತ ಕೇಳುತ್ತೇನೆ ಎಂದು ಸಮಾಧಾನ ಹೇಳಿಕೊಂಡು ಸುಮ್ಮನಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಯುವಕ ಮಿತ್ರರು ನಡೆಸುವ ಕಬಡ್ಡಿ, ಕ್ರಿಕೆಟ್ ಮೊದಲಾದ ಕ್ರೀಡಾ ಪಂದ್ಯಾವಳಿಗೆ ಧನ ಸಹಾಯ,ಅನಾರೋಗ್ಯ ಗೊಂಡವರಿಗೆ,ದೇವಸ್ಥಾನಗಳಿಗೆ,ವಿದ್ಯಾರ್ಥಿಗಳಿಗೆ,ಶಬರಿಮಲೆ ಅಯ್ಯಪ್ಪ, ಓಂ ಶಕ್ತಿ ಮಾಲಾಧಾರಿಗಳ ಯಾತ್ರೆಗೆ ಎಲ್ಲಾ ಅಕಾಂಕ್ಷಿಗಳು ತಮ್ಮ ಶಕ್ತಾನುಸಾರ ಧನ ಸಹಾಯ ಮಾಡಲೇ ಬೇಕಾದ ಪರಿಸ್ಥಿತಿ ಇದೆ.ಒಟ್ಟಾರೆ ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಹೊರಟಿರುವವರ ಅಬ್ಬರ ಸಾಕಷ್ಟು ಜೋರಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!