Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಮಾಹಿತಿ ಕೇಳಿದವರಿಗೆ ಪ. ಜಾ., ಪ.ಪಂ. ದೌರ್ಜನ್ಯ ಕಾಯ್ದೆ ಅಡಿ ಸುಳ್ಳು ಪ್ರಕರಣ ದಾಖಲಿಸಿರುವುದು ಹತಾಶೆಯ ಪ್ರತೀಕಾರ – ಪ್ರಗತಿಪರ ಸಂಘಟನೆಗಳ ಒಕ್ಕೂಟ

ಮದ್ದೂರಿನ  ಸಾಮಾಜಿಕ ಕಾರ್ಯಕರ್ತ ಆನಂದ್ ಮದ್ದೂರು ಪುರಸಭೆಗೆ ಸಂಪನ್ಮೂಲದ ಕ್ರೋಢೀಕರಣಕ್ಕೆ  ಸಂಬಂಧಿಸಿ ಮಾಹಿತಿ ಹಕ್ಕುಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಮಾಹಿತಿ ನೀಡದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆಕಾಯ್ದೆಯಡಿ ಸುಳ್ಳು ದೂರು ದಾಖಲಿಸುವ ಮೂಲಕ ಸತ್ಯ ಮರೆಮಾಚುವ ವ್ಯರ್ಥ ಪ್ರಯತ್ನ ಮಾಡಿರುವುದು ಪುರಸಭೆ ಮುಖ್ಯಾಧಿಕಾರಿ ಆರ್.ಅಶೋಕ್ ಹತಾಶೆಯ ಪ್ರತೀಕಾರವಾಗಿದೆ
ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಸಿ. ಉಮಾಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯವಂತರು ಯಾರಿಗೂ ಹೆದರುವುದು ಬೇಡ. ಆನಂದ್ ಅವರು ದಶಕದಿಂದ ಸಾಮಾಜಿಕ ಕಾರ್ಯಕರ್ತರಾಗಿ ನ್ಯಾಯಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮೇಲೆ ಮಾಹಿತಿ ನೀಡಲಾಗದೆ ಹತಾಶೆಯಿಂದ ಸುಳ್ಳು ದೂರು ದಾಖಲಿಸಿರುವ ಕ್ರಮವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ  ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿ, ಆನಂದ್ ಅವರ ಮೇಲಿನ ಆಧಾರ ರಹಿತ ಸುಳ್ಳು ಪ್ರಕರಣ ದಾಖಲಿಸಿ, ಮಾಹಿತಿ ನೀಡುವುದರಿಂದ ಪಾರಗಬಹುದು ಎಂಬುದು ಪುರಸಭೆ ಮುಖ್ಯಾಧಿಕಾರಿ ಆಶೊಕ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಭರತ್ ಅವರ ಭ್ರಮೆಯಾಗಿದೆ ಎಂದರು.

ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸುವ, ಹಲ್ಲೆ ಮಾಡುವ ಸುಳ್ಳು ಆರೋಪದಂತಹ ಕೃತ್ಯಗಳು ರಾಜ್ಯಾದ್ಯಾಂತ ನಡೆಯುತ್ತಿರುವುದು ಆತಂಕಕಾರಿ ಸಂಗತಿ ಎಂದು ವಿಷಾದಿಸಿದರು.

ಆನಂದ್ ಅವರ ಈ ಪ್ರಕರಣದಲ್ಲಿ ಕಾನೂನಾತ್ಮಕ ಹೊರಾಟ ಹಾಗೂ ನೆರವಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿಲ್ಲಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ನೊಂದವರು ಶೋಷಿತರು, ಆಶಕ್ತರ ನೆರವಿಗೆ ಇದ್ದು, ಇಂತಹ ಪರಿಣಾಮಕಾರಿ ಕಾಯ್ದೆಯನ್ನು ಸರ್ಕಾರಿ ನೌಕರರಾಗಿ ಮುಖ್ಯಾಧಿಕಾರಿ  ಆಶೋಕ್  ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ತನಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ಕೆಳಗಿನ ನೌಕರನಿಗೆ ಸುಳ್ಳು ದೂರು ನೀಡಲು ಕುಮ್ಮಕ್ಕು ನೀಡಿದ್ದಾರೆ. ಅಲ್ಲದೆ ನಿಯಮಾನುಸಾರ ಮಾಹಿತಿ ನೀಡದೇ ಅಪೂರ್ಣ ಮಾಹಿತಿ ನೀಡಿ ಅರ್ಜಿದಾರನಿಗೆ ದಿಕ್ಕು ತಪ್ಪಿಸಿರುವ ಕ್ರಮ ಮಾಹಿತಿ ಹಕ್ಕುಕಾಯ್ದೆಯ ನಿಯಮಗಳ ಉಲ್ಲಂಘನೆ ಆಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿಗಳು, ಸಂಪನ್ಮೂಲದ ಕ್ರೋಢೀಕರಣ ವಿಷಯದಲ್ಲಿ ಮತ್ತು ಆಡಳಿತದಲ್ಲಿ ನಿಯಮಪಾಲನೆ ಮಾಡದೇ, ಕರ್ತವ್ಯಲೋಪ ಮತ್ತು ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದಾರೆ. ಇವರ ಮೇಲೆ ಮೇಲಿನ ಅಧಿಕಾರಿಗಳು ಶಿಸ್ತುಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಸಂಘಟನೆಗಳ ಸಂಚಾಲಕ ಕಾ.ಶ್ರೀನಿವಾಸ್ ಮಾತನಾಡಿ, ಆನಂದ್ ಪ್ರಗತಿಪರ ಮನಸ್ಸುಳ್ಳವರು, ಅವರು ಜಾತಿ ನಿಂದನೆ ಮಾಡುವವರಲ್ಲ, ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸುಳ್ಳು ದೂರು ದಾಖಲಿಸಿದ್ದು ಇದರ ಸತ್ಯಾಸತ್ಯತೆ ಕುರಿತು ಮರು ಪರಿಶೀಲಿಸಬೇಕು ಎಂದರು.

ಒಕ್ಕಲಿಗರ ಸಂಘದ ಯುವ ಅಧ್ಯಕ್ಷ ಮನು ತಿಪ್ಪೂರು, ಕರ್ನಾಟಕ ರೈತ ಸಂಘದ ಕೊತ್ತನಹಳ್ಳಿ ಉಮೇಶ್, ಹಾಗಲಹಳ್ಳಿ ಬಸವರಾಜ್, ಗ್ರಾ.ಪಂ. ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ದಯಾನಂದ, ಸೋಂಪುರ ಉಮೇಶ್,  ಕ್ಯಾತಘಟ್ಟ ಗ್ರಾ.ಪಂ.ಮಾಜಿ ಅಧ್ಯಕ್ಷ ಬಸವರಾಜ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!