Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಸಂಕ್ರಾಂತಿ ಹಬ್ಬ: ರಾಸುಗಳ ಸಿಂಗಾರದ ಖರೀದಿಗೆ ಪೇಟೆಗೆ ಲಗ್ಗೆ ಇಟ್ಟ ರೈತರು

ವರದಿ : ನ.ಲಿ.ಕೃಷ್ಣ, ಕೃಷಿಕರು.

    • ಸಂಕ್ರಾಂತಿ ಹಬ್ಬ ವ್ಯಾಪಾರ ಕ್ಷೀಣ
    • ಯಾಂತ್ರಿಕರಣಗೊಂಡ ರೈತಾಪಿ ಬದುಕು

ಮದ್ದೂರು ಪೇಟೆ ಬೀದಿ ತುಂಬೆಲ್ಲಾ ರಾಸುಗಳ ಸಿಂಗಾರಕ್ಕೆ ಬೇಕಾದ ಆಲಂಕಾರಿಕ ವಸ್ತುಗಳ ಮಾರಾಟದ ಅಂಗಡಿಗಳು ಗರಿಗೆದರಿದ್ದರೂ ಕೂಡಾ ಇಂದಿನ

ಸಂಕ್ರಾಂತಿ ಸಂಭ್ರಮ -ಸಡಗರ ಈ ಹಿಂದಿನ ದಿನಗಳಂತೆ ಇರಲಿಲ್ಲ. ಪೇಟೆ ಬೀದಿಯಲ್ಲಿ ವಿರಳವಾದ ವ್ಯಾಪಾರ ಇಂದು ಕಂಡುಬಂದಿತು.

ಹತ್ತು ವರ್ಷಗಳ ಹಿಂದೆ ಇದೇ ಮದ್ದೂರು ಪೇಟೆ ಬೀದಿಯು ಜನ ಜಂಗುಳಿಯಿಂದ ಆವೃತ್ತವಾಗುತ್ತಿತ್ತು. ರೈತರು ಸಂಭ್ರಮ ಸಡಗರದಿಂದ ಪೇಟೆ ಬೀದಿಯಲ್ಲಿ ಹಗ್ಗ, ಹುರಿ, ಗುಲಂಪಟ್ಟೆ, ನೀಲಿ ಗೆಜ್ಜೆ, ಘಂಟೆ, ಬತಾಸ್, ದವನ, ಬಲೂನ್ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದರು.

ಆದರೇ ಈ ವರ್ಷ ಹಬ್ಬದ ಕಳೆ ಮಸುಕಾಗಿದೆ. ಆದರೂ ರಾಸು ಇಟ್ಟಿರುವ ರೈತರು ಉತ್ಸಾಹದಿಂದಲೆ ವ್ಯಾಪಾರದಲ್ಲಿ ತೊಡಗಿದ್ದಾರೆ.

ಕೃಷಿ ವಲಯ ಸಂಕಷ್ಠದಲ್ಲಿರುವುದು, ಕೃಷಿಚಟುವಟಿಕೆ ಯಾಂತ್ರಿಕಗೊಳ್ಳುತ್ತಿರುವುದು ಮತ್ತು ರಾಸುಗಳ ಲಾಲನೆ-ಪಾಲನೆ ದುಬಾರಿ ಆಗಿರುವುದರಿಂದ ರಾಸುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಸಂಕ್ರಾಂತಿಯ ಕಿಚ್ಚಿನ ಹುಮ್ಮಸು ಹುರುಪು ಮಸುಕಾಗಿದೆ.

ಹಲವು ಹಳ್ಳಿಗಳಲ್ಲಿ ಬೆರಳೆಣಿಕೆ ಸಂಖ್ಯೆಗೆ ರಾಸುಗಳ ಸಂಖ್ಯೆ ಕುಸಿದಿದೆ. ಮುಂಜಾನೆಯ ರಾಸುಗಳನ್ನು ಹೊಳೆ, ಕೆರೆ-ಕಟ್ಟೆಗಳಲ್ಲಿ ಈಜಾಡಿಸಿ ತಂದು ದಿನವಿಡಿ ಹಸಿರು ಹುಲ್ಲು ಹಾಕಿ, ಮೇಯಿಸಿ ಸಂಜೆ ಕಿಚ್ಚು ಹಾಯಿಸಲು ತಮ್ಮ ರಾಸುಗಳನ್ನು ದೇವಸ್ಥಾನದ ಬಳಿ ಕರೆತರೆವುದೆ ಒಂದು ಸಂಭ್ರಮ.

ರೈತರು, ಯುವ ಜನರು, ತಾ ಮುಂದು ನಾಮುಂದು ಎಂದು ರಾಸುಗಳನ್ನು ಬೆಂಕಿಯ ಮೇಲೆ ಹಾರಿಸಿಕೊಂಡು ಹೋಗುವುದನ್ನು ಕಣ್ ತುಂಬಿಕ್ಕೊಳ್ಳಲು ಊರಿಗೆ ಊರೆ ದೇವಾಲಯದ ಬಳಿ ನೆರೆದಿರುತ್ತಿತ್ತು.

ವೈಭವದ ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ಈಗ ದೊರೆಯುತ್ತದೆ. ಹೀಗೆ ಸಂಕ್ರಾಂತಿಯ ಸಂಭ್ರಮ ನಾಡಿನ ಎಲ್ಲಾ ಭಾಗಗಳಲ್ಲಿಯೂ ಕಂಡು ಬರುತ್ತದೆ

ಹೀಗೆ ವರ್ಷವಿಡಿ ದುಡಿದು ದಣಿದ ರಾಸುಗಳು ಕಿಚ್ಚು ಹಾಯ್ದು ಬಂದ ತಕ್ಷಣ, ರೈತ ತಾಯಂದಿರು ಆರತಿ ಬೆಳಗಿಸಿ ಮನೆ ತುಂಬಿಸಿಕ್ಕೊಳ್ಳಲು ಮನೆ ಬಾಗಿಲಲ್ಲಿ ಕಾಯುತ್ತಿದ್ದರು.

ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ. ಧವಸ, ಧಾನ್ಯ ಬೆಳೆಯಲು ಸಹಾಯಕವಾದ ರೈತನ ಸ್ನೇಹಿತ ದನಕರುಗಳಿಗೂ ಆ ದಿನ ರೈತ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸುತ್ತಾರೆ. ಕೊಂಬುಗಳನ್ನು ಶುಭ್ರಗೊಳಿಸಿ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಾರೆ. ಕಬ್ಬು, ಬೆಲ್ಲ, ಬಾಳೆಹಣ್ಣು, ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ.

ದಿನೇ ದಿನೇ ಜನರ ಬದುಕಿನ ಆರ್ಥಿಕ ಮಟ್ಟ ಇಳಿಮುಖವಾಗುತ್ತಿರುವುದು ಕೂಡಾ ಹಬ್ಬದಿನಗಳು ಕೂಡ ನಿರಸ ದಿನಗಳಾಗಿ ಕಾಣುವುದಕ್ಕೆ ಕಾರಣವಾಗಿದೆ. ಜನ ಜೀವನದ ಆರ್ಥಿಕ ಶೈಲಿಗಳು, ಪ್ರತಿದಿನದ ಆದ್ಯತೆಗಳು ಕೂಡ ಬೇರೆ ಬೇರೆಯಾಗಿದೆ. ಕುಟುಂಬಗಳು ಕೂಡ ಸಣ್ಣ ಸಣ್ಣ ಕುಟುಂಬಗಳಾಗಿ ವಿಘಟಿತವಾಗಿದೆ. ಎಲ್ಲರೂ ದೂರದ ಊರಿನಿಂದ ಬಂದು ಸೇರುವುದು ಕಷ್ಟಸಾಧ್ಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಂಕ್ರಾಂತಿ ಹಬ್ಬವು   ಸಾಂಕೇತಿಕ ಗೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!