Thursday, April 18, 2024

ಪ್ರಾಯೋಗಿಕ ಆವೃತ್ತಿ

ಕಬ್ಬಡಿ ಕ್ರೀಡಾಪಟುಗಳು ಸಾಂಸ್ಕೃತಿಕ ರಾಯಭಾರಿಗಳು : ಮಧುಬಂಗಾರಪ್ಪ

ದೇಸಿ ಕ್ರೀಡೆ ಕಬ್ಬಡಿ ಕ್ರೀಡಾಪಟುಗಳು ಭಾರತ ದೇಶಕ್ಕೆ ಸಾಂಸ್ಕೃತಿಕ ರಾಯಭಾರಿ ಇದ್ದಂತೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧುಬಂಗಾರಪ್ಪ ಅಭಿಪ್ರಾಯಪಟ್ಟರು.

ನಾಗಮಂಗಲದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಆದಿಚುಂಚನಗಿರಿ ಕ್ಷೇತ್ರದ ಸಹಯೋಗದಲ್ಲಿ ನಡೆದ 67 ನೇ ರಾಷ್ಟ್ರಮಟ್ಟದ 19 ವರ್ಷದೊಳಗಿನ ವಿದ್ಯಾರ್ಥಿಗಳ ಕಬಡ್ಡಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 8 ವರ್ಷದ ನಂತರ 19 ವರ್ಷದೊಳಗಿನ ರಾಷ್ಟ್ರ ಮಟ್ಟದ ಕಬ್ಬಡಿ ಕ್ರೀಡೆ ನಡೆಯುತ್ತಿದೆ. ಆದಿಚುಂಚನಗಿರಿ ಕ್ಷೇತ್ರದ ಸಹಕಾರದಲ್ಲಿ ನಡೆಯುತ್ತಿರುವ ಈ ಕ್ರೀಡೆ ಉತ್ತಮವಾಗಿ ಏರ್ಪಟ್ಟಿದೆ‌.
ಇದಕ್ಕೆ ಸಹಕರಿಸಿದ ಕ್ಷೇತ್ರದ ಪೀಠಾಧ್ಯಕ್ಷರಿಗೆ ಗೌರವ ನಮನಗಳು ಎಂದರು‌.

ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಎಲ್ಲ ಕ್ರೀಡೆಯನ್ನು ಕಲಿಯಬೇಕು. ಕಬ್ಬಡಿ ಕ್ರೀಡೆಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸಿ, 29 ರಾಜ್ಯದಿಂದ ಬಂದಿರುವ ಕ್ರೀಡಾಪಟುಗಳಿಗೂ ಶುಭಾಶಯಗಳು ಎಂದರು.

ಶಿವಮೊಗ್ಗದಲ್ಲಿ ಜನವರಿ 29 ರಂದು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಈ ಮೂಲಕ ಕರ್ನಾಟಕ ರಾಜ್ಯ ಎರಡು ರಾಷ್ಟ್ರೀಯ ಕ್ರೀಡೆಗಳಿಗೆ ಸಾಕ್ಷಿಯಾಗಲಿದೆ ಎಂದರು.

ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ  ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದು, ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ನಿಮಗೆ ಸಿಕ್ಕಿದೆ. ಅವಕಾಶ ಸದ್ಬಳಕೆ ಮಾಡಿಕೊಂಡು ತಮ್ಮ ರಾಜ್ಯದ ಕೀರ್ತಿ ಹೆಚ್ಚಿಸಿ, ಭಾರತ ದೇಶವು ಯುವಜನರೇ ತುಂಬಿದ ದೇಶವಾಗಿದೆ. ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಯುವಕರು ಉತ್ತಮ ಸಾಧನೆ ಮಾಡಿ ಎಂದರು.

ನಂತರ ಕರ್ನಾಟಕ- ಮಹಾರಾಷ್ಟ್ರ ಪುರುಷ ತಂಡಗಳು ಕಬ್ಬಡಿ ಸ್ವರ್ಧೆಗೆ ಹಾಗೂ ಗುಜರಾತ್- ತೆಲಂಗಾಣ ಮಹಿಳಾ ವಿಭಾಗದ ಸ್ಪರ್ಧೆಗಳಿಗೆ ಗಣ್ಯರು ಚಾಲನೆ ನೀಡಿದರು.

29 ರಾಜ್ಯದ ತಂಡಗಳು

ಆಂದ್ರಪ್ರದೇಶ, ಬಿಹಾರ್, ಸಿ.ಬಿ.ಎಸ್.ಇ ವೆಲ್ ಫೇರ್ ಸ್ಪೋರ್ಟ್ಸ್ ಸಂಸ್ಥೆ, ಚಂಡಿಗರ್, ಛತ್ತಿಸ್ ಗಡ್, ಕೌನ್ಸಿಲ್ ಫಾರ್ ದಿ ಇಂಡಿಯಾನ್ ಸ್ಕೂಲ್, ದಾದ್ರ ಮತ್ತು ನಗರ ಹಾವೆಲಿ ಮತ್ತು ದಮನ್, ದವ್ ಕಾಲೇಜ್ ಮ್ಯಾನೇಜಿಂಗ್ ಕಮಿಟಿ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಾಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ನವೋದಯ ವಿದ್ಯಾಲಯ ಸಮಿತಿ, ಒಡಿಸ್ಸಾ, ಪುದುಚೇರಿ,ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ವಿದ್ಯಾಭಾರತಿ, ಪಶ್ಚಿಮ ಬಂಗಾಳದ ಸೇರಿದಂತೆ ಒಟ್ಟು 29 ರಾಜ್ಯದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

29 ಬಾಲಕರ ತಂಡ ಹಾಗೂ 28 ಬಾಲಕಿಯರ ತಂಡಗಳು ಭಾಗವಹಿಸಿದ್ದು, ಒಟ್ಟಾರೆ ಎಲ್ಲಾ ತಂಡಗಳ 346 ಬಾಲಕರು, 336 ಬಾಲಕಿಯರು ಸೇರಿದಂತೆ ಒಟ್ಟು 682 ಕಬ್ಬಡಿ ಆಟಗಾರರು ಭಾಗವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು, ಬಿ.ರೂಪೇಶ್, ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಗುಬ್ಬಿಗೂಡು ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಲುವಯ್ಯ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶಿವರಾಮೇಗೌಡ‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!