ನ.ಲಿ.ಕೃಷ್ಣ. ಕೃಷಿಕರು, ಸಾಮಾಜಿಕ ಕಾರ್ಯಕರ್ತರು.
ರೇಷ್ಮೆಇಲಾಖೆಯ ಬಿತ್ತನೆಕೊಠಿಗೆ ಸೇರಿದ ಎರಡು ಜಾಗ ನ್ಯಾಯಾಂಗ ಇಲಾಖೆ ಹಸ್ತಾಂತರ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಒಂದು ಕಾಲಕ್ಕೆ ಈ ಜಾಗ ವೈಭವಯುತವಾಗಿ ಕಾರ್ಯನಿರ್ವಹಿಸಿ ರೈತಾಪಿಯ ಬದುಕು ಹಸನುಗೊಳಿಸುವಲ್ಲಿ ಕಾರ್ಯನಿರ್ವಹಿಸಿತು.
ರೇಷ್ಮೆ ಬೆಳೆಗಾರರಿಗೆ ಮೊಟ್ಟೆ ಮತ್ತು ಚಾಕಿ ಮರಿಗಳನ್ನು ವಿತರಿಸುತ್ತಾ, ರೈತರಿಗೆ ಹಿಪ್ಪೆನೇರಳೆ ಸೊಪ್ಪನ್ನು ಹಣ ಪಡೆದು ನೀಡಲಾಗುತ್ತದೆ.
ಇಲಾಖೆ ಅಧಿಕಾರಿಗಳ ಬೇಜಾವಬ್ದಾರಿತನದ ಫಲವಾಗಿ ವರ್ಷಗಳು ಕಳೆದಂತೆ ಇಲ್ಲಿನ ವೈಭವ ಕಳೆಗುಂದಿತು. ಖಾಸಗಿ ಮೊಟ್ಟೆ ವಿತರಕರು ಚಾಕಿ ಸೆಂಟರ್ ನವರ ಕಳೆ ಗಟ್ಟಿಗೊಂಡಿತು. ರೇಷ್ಮೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಖಾಸಗಿಯಾಗಿ ರೇಷ್ಮೆಮೊಟ್ಟೆ ಚಾಕಿ ಮಾರಾಟ ಕೇಂದ್ರ ತೆಗೆದರು.
ಇದನ್ನೆಲ್ಲಾ ಗಮನಿಸಬೇಕಾಗಿದ್ದ ರಾಜ್ಯಮಟ್ಟದ ಇಲಾಖೆ ಅಧಿಕಾರಿಗಳು ಸರ್ಕಾರಗಳು ಸುಮ್ಮನಾದವು.
ಈ ಕಾರಣ ರಾಜ್ಯದ ರೇಷ್ಮೆ ಇಲಾಖೆಗೆ ಸೇರಿದ ತರಬೇತಿ ಕೇಂದ್ರಗಳು, ಬಿತ್ತನೆ ಕೊಟ್ಟಡಿಯ ನೆಯ್ಗೆ ಕೇಂದ್ರಗಳು ಪಾಳುಬಿದ್ದವು. ಈ ಎಲ್ಲದರ ಪರಿಣಾಮ ರೇಷ್ಮೆ ಬೆಳೆಗಾರರ ಖರ್ಚುವೆಚ್ಚಗಳು, ರೇಷ್ಮೆಯ ಚಾಕಿ ಮರಿಗಳ ಬೆಲೆ ದುಬಾರಿಯಾಗತೊಡಗಿದವು.
ರೈತ ರೇಷ್ಮೆ ಬೆಳೆದು ಹಗಲಿರುಳು ಶ್ರಮಿಸಿ ಬಂದ ಹಣವನ್ನು ಮೊಟ್ಟೆಗೆ ಮತ್ತು ಮರಿಗೆ ಹಣ ನೀಡಬೇಕಾಗಿದೆ. ರೇಷ್ಮೆ ಇಲಾಖೆಗೆ ಸೇರಿದ ಇಂತಹ ಚಟುವಟಿಕೆಗೆ ಇರಬೇಕಾದ ಜಾಗವನ್ನೆಲ್ಲಾ ಪುನಶ್ಚೇತನ ಮಾಡುವ ಬದಲು, ಮಂತ್ರಿ-ಮಹಾಶಯರು, ಇಲಾಖೆಯ ಮುಖ್ಯಸ್ಥರು ಇಲಾಖೆ ಜಾಗವನ್ನು ಕೇಳಿದವರಿಗೆ ನೀಡಿ ಕೈ ತೊಳೆದು ಕೊಳ್ಳತೊಡಗಿದ್ದಾರೆ.
ಮದ್ದೂರಿನಲ್ಲಿರುವ ಸಂಜಯ ಚಿತ್ರಮಂದಿರದ ಎದುರು ಇರುವ, ರಾಷ್ಟೀಯ ಹೆದ್ದಾರಿ ಪಕ್ಕದ ರೇಷ್ಮೆ ಇಲಾಖೆ ಜಾಗವನ್ನು, ಮದ್ದೂರಿನ ನ್ಯಾಯಾಲಯದ ತತ್ಸಂಬಂಧಿತ ಉಪಯೋಗಕ್ಕೆ, ಎರಡು ಗಿರಣಿ ಮತ್ತು ಬಿ ಜಿ ಎಸ್ ನವರಿಗೂ ಮಂಜೂರಾದ ಸುದ್ದಿ ಕೇಳಿಬಂದಿದೆ.
ತೋಟಗಾರಿಕೆ ಇಲಾಖೆಗೆ ಸೇರಿದ ಹಸಿರು ವಲಯವನ್ನು ಪೆಟ್ರೋಲ್ ಬಂಕ್,ಕಾಫಿ ಡೇ ಹೋಟೆಲ್,ಕೆಎಸ್ಆರ್ ಟಿಸಿ ಬಸ್ ಸ್ಟಾಪ್ ಮತ್ತು ಡಿಪೋ , ಪುರಸಭೆ, ಪೋಲೀಸ್ ಠಾಣೆ, ನ್ಯಾಯಮೂರ್ತಿಗಳ ವಸತಿ ಗೃಹ ಹಿಗೆ ಎಲ್ಲದಕ್ಕೂ ಆಕ್ರಮಿಸಿಕೊಂಡಿದ್ದಾರೆ. ಹೀಗೆ ಇನ್ನೂ ಹಲವಕ್ಕೆ ಜಾಗದ ದುರ್ಬಳಕೆ ಆಗುತ್ತಿದೆ.
ರೈತಾಪಿ ಬದುಕಿಗೆ ನೆರವಾಗಲು ಇದ್ದ ಫಲವತ್ತತೆಯ ಜಾಗವನ್ನು, ನ್ಯಾಯಮೂರ್ತಿಗಳನ್ನೊಳಗೊಂಡ ಅಧಿಕಾರಿಗಳು ಅಧಿಕಾರವನ್ನು ಬಳಸಿ ಪಡೆಯುವುದು ಧರ್ಮವಲ್ಲ. ಆದರೆ ಇದಕ್ಕೆ ಪರಿಹಾರ ಸೂಚಿಸುವ ಬದಲು ವ್ಯತಿರಿಕ್ತವಾಗುವ ಕ್ರಮಗಳಿಗೆ ಸಂಭಂದಿಸಿದವರೇ ಮುಂದಾಗಿರುವ ಕ್ರಮ ಸರಿಯಲ್ಲ.
ಕಟ್ಟಡಗಳ ನಿರ್ಮಾಣಕ್ಕೆ ಬದಲಿ ಜಾಗ ಗುರುತಿಸಿ , ಜೀವಂತಿಕೆಯ ರೇಷ್ಮೆ ಇಲಾಖೆ ಜಾಗವನ್ನು ಮರಳಿ ಇಲಾಖೆಗೆ ನೀಡಿ, ಆ ಮೂಲಕ ಮಾದರಿ ನಡೆಯನ್ನು ನ್ಯಾಯಾಂಗ ಇಲಾಖೆ ಮತ್ತು ಆದಿಚುಂಚನಗಿರಿಯವರು ಅನುಸರಿಸಿ, ಆ ಜಾಗವನ್ನು ಕೈ ಬಿಡಬೇಕೆಂದು ತಾಲೂಕಿನ ಜನ ಕೇಳುತ್ತಿದ್ದಾರೆ.
ಇದನ್ನೂ ಓದಿ:ಮನ್ಮುಲ್ ನೇಮಕಾತಿಯಲ್ಲಿ ಅಕ್ರಮ : ಮಧುಚಂದನ್ ಆರೋಪ