Tuesday, September 17, 2024

ಪ್ರಾಯೋಗಿಕ ಆವೃತ್ತಿ

ಲೋಕ್ ಅದಾಲತ್ ಸದ್ಬಳಕೆ ಮಾಡಿಕೊಳ್ಳಿ

ಲೋಕ್ ಅದಾಲತ್ ಬಗ್ಗೆ ಎಲ್ಲರೂ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಕುಮಾರಿ ಹೇಳಿದರು.

ಮಂಡ್ಯ ತಾಲ್ಲೂಕಿನ ಚೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸಲಹಾ ಕೇಂದ್ರ, ಜಿಲ್ಲಾ ಪಂಚಾಯಿತಿ, ಮಹಿಳಾ ಸರ್ಕಾರಿ ಕಾಲೇಜು ವತಿಯಿಂದ ನಡೆದ ಗ್ರಾಮ ಲೋಕ್ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಕಾನೂನು ಸಲಹಾ ಸೇವಾ ಕೇಂದ್ರ ಕೆಲಸ ಮಾಡುತ್ತದೆ. ಕಾನೂನು ಚೌಕಟ್ಟಿನಡಿ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನೇ ಲೋಕ್ ಅದಾಲತ್‌ ಎನ್ನುತ್ತಾರೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಸಣ್ಣಪುಟ್ಟ ಘಟನೆಗಳು ನಡೆದಿರುತ್ತದೆ. ಅದನ್ನು ರಾಜಿ ಮಾಡಿಕೊಂಡು ಶಾಂತಿ ಕಾಪಾಡಿಕೊಳ್ಳುವುದಕ್ಕೆ ಈ ವ್ಯವಸ್ಥೆ ಮಾಡಲಾಗಿದೆ.

ಅಕ್ಕಪಕ್ಕದ ಮನೆಯವರ ಜೊತೆಯೂ ಸಹ ವಿಶ್ವಾಸ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಕರಣಗಳನ್ನು ಸುಖಾಂತ್ಯ ಮಾಡಿಕೊಳ್ಳಲು ಈ ವೇದಿಕೆ ಅನುಕೂಲಕರವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ವಾಣಿ ಎ.ಶೆಟ್ಟಿ ಅವರು, ಗ್ರಾಮೀಣ ಭಾಗದ ಜನರಿಗೆ ಕಾನೂನು ಸಲಹೆ ಮತ್ತು ಸೂಚನೆಗಳ ಅರಿವು ಇರಬೇಕು. ಲೋಕ್ ಅದಾಲತ್‌ ಅನ್ನು ಬಳಸಿಕೊಳ್ಳುವ ಮೂಲಕ ಗ್ರಾಮದಲ್ಲಿ ಶಾಂತಿಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಆರ್‌.ದಶರಥ್‌ ಮಾತನಾಡಿ, ಗ್ರಾಮೀಣ ಭಾಗದ ಜನರು ಸೇರಿದಂತೆ ಪಟ್ಟಣದ ಕೆಲವು ಜನರು ಸಣ್ಣಪುಟ್ಟ ಜಗಳಕ್ಕೂ ಕೋರ್ಟಿನಲ್ಲಿ ಬಂದು ಸಮಯ ಹಾಳು ಮಾಡಿಕೊಳ್ಳುತ್ತಾರೆ, ಇದರಿಂದ ಹೊರಬರಬೇಕು.

ಹಣ ಮತ್ತು ಶ್ರಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋಗಬೇಕು. ಗ್ರಾಮೀಣ ಭಾಗದಲ್ಲಿ ಜನರು ನ್ಯಾಯಾಲಯಗಳಲ್ಲಿ ಪ್ರಕರಣಕ್ಕೆ ಒತ್ತು ನೀಡದೇ ರಾಜಿ ಸಂಧಾನದ ಮೂಲಕ ಅಲ್ಲಿಯೇ ಬಗೆಹರಿಸಿಕೊಂಡು ಉತ್ತಮ ಜೀವನ ನಡೆಸಬೇಕು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶರಾದ ವಿಜಯಕುಮಾರ್‌ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಎಂ.ಕೆಂಪಮ್ಮ, ಪ್ರಮೋದ್‌ಕುಮಾರ್, ಮುಖ್ಯ ಶಿಕ್ಷಕಿ ಗಿರಿಜಾ, ವಕೀಲ ಲಕ್ಷ್ಮಣ್‌ ಚೀರನಹಳ್ಳಿ, ಕಾನೂನು ಸಹಾಯಕ ಪ್ರಾಧ್ಯಾಪಕ ಕೆ.ಎಸ್‌.ವಿಜಯ್‌ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!