Thursday, May 16, 2024

ಪ್ರಾಯೋಗಿಕ ಆವೃತ್ತಿ

ವಿದೇಶಿ ವರನೊಂದಿಗೆ ಕೆ.ಆರ್.ಪೇಟೆಯ ಕನ್ನಡದ ಹುಡುಗಿಯ ಮದುವೆ !

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ವಿದೇಶಿ ವರನೊಂದಿಗೆ ಕನ್ನಡದ ಹುಡುಗಿಯ ಮದುವೆ ಸೋಮವಾರ ನಡೆಯಿತು.

ಸ್ಪೇನ್ ದೇಶದ ಜಾನ್ ವೈಡಲ್ ಎಂಬ ಯುವಕನನ್ನು ಕೆ.ಆರ್.ಪೇಟೆಯ ದೀಕ್ಷಿತಾ ಎಂಬ ಯುವತಿ ಶಾಸ್ತ್ರೋಕ್ತವಾಗಿ ವಿವಾಹವಾದರು.

ಕೆ.ಆರ್.ಪೇಟೆ ಪಟ್ಟಣದ ಶಮಂತ್ ಟೆಕ್ಸ್ ಟೈಲ್ಸ್ ಮಾಲೀಕ ರವೀಂದ್ರನಾಥ್ ಅವರ ಪುತ್ರಿ ದೀಕ್ಷಿತಾ ಕೊಯಮತ್ತೂರಿನ ಈಶಾ ಫೌಂಡೇಶನ್ ನಲ್ಲಿ ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಸ್ಪೇನ್ ದೇಶದ ಯುವಕ ಜಾನ್ ವೈಡಲ್ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿತ್ತು.

ಈಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿವಾಸುದೇವ್ ಅವರು ಎರಡೂ ಕುಟುಂಬಗಳ ಮನವೊಲಿಸಿದ ಪರಿಣಾಮವಾಗಿ ವಿದೇಶಿ ವರ ಹಾಗೂ ಕನ್ನಡದ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವರ ಜಾನ್ ವೈಡಲ್ ತಂದೆ ತಾಯಿ, ಸಹೋದರ, ಸಹೋದರಿ ಸೇರಿದಂತೆ ವಧುವಿನ ತಂದೆ ತಾಯಿಗಳು, ಬಂಧುಗಳು ಹಾಗೂ ಸ್ನೇಹಿತರ ಸಮಾಕ್ಷಮದಲ್ಲಿ ಈ ಮದುವೆ ನಡೆಯಿತು.

ಜಾನ್ ವೈಡಲ್ ತುಂಬಾ ಒಳ್ಳೆಯ ಹುಡುಗ ನಾನೇ ಹುಡುಕಿದ್ದರೂ ನನ್ನ ಮಗಳಿಗೆ ಇಂತಹ ಒಳ್ಳೆಯ ಸಂಬಂಧವನ್ನು ಹುಡುಕಲು ಸಾಧ್ಯವಾಗುತ್ತಿರಲಿಲ್ಲ. ಮಗಳ ಆಸೆಗೆ ಪ್ರೋತ್ಸಾಹ ನೀಡಿ ಮದುವೆ ಮಾಡಿಕೊಟ್ಟಿದ್ದೇವೆ. ಮಗಳು, ಅಳಿಯ ಇಬ್ಬರೂ ಈಶಾ ಫೌಂಡೇಶನ್ ನಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಗುರುಗಳ ಆಶೀರ್ವಾದವಿದೆ. ಚೆನ್ನಾಗಿ ಸಂತೋಷದಿಂದ ಜೀವನ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ವಧುವಿನ ಪೋಷಕ ರವೀಂದ್ರನಾಥ್ ಹೇಳಿದರು.

ಈಶಾ ಫೌಂಡೇಶನ್ ಗೆ ಯೋಗ ಕಲಿಯಲು ಬಂದ ಜಾನ್ ವೈಡಲ್ ಮೇಲೆ ಪ್ರೀತಿಯಾಯಿತು, ನಮ್ಮ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದು ನಮಗೆ ಸಂತೋಷವಾಗಿದೆ. ಜಾನ್ ಕೂಡಾ ಕನ್ನಡ ಕಲಿಯುತ್ತಿದ್ದಾರೆ. ನಮ್ಮ ಭಾಷೆ ಅವರಿಗೆ ಚೆನ್ನಾಗಿ ಅರ್ಥವಾಗುತ್ತೆ. ನಾನು ಸ್ಪೇನೀಶ್ ಭಾಷೆ ಕಲಿತಿದ್ದೇನೆ. ನಮ್ಮಿಬ್ಬರಲ್ಲಿ ಸಾಮರಸ್ಯವಿದೆ, ಪ್ರೀತಿಯಿದೆ ಇಬ್ಬರೂ ಚೆನ್ನಾಗಿ ಜೀವನ ನಡೆಸಿ ಸಾಧಿಸಿ ತೋರಿಸುತ್ತೇವೆ ಎಂದು ದೀಕ್ಷಿತಾ ನುಡಿದರು.

ವಿದೇಶಿ ಹುಡುಗನೊಂದಿಗೆ ನಡೆದ ಕನ್ನಡದ ಹುಡುಗಿಯ ಮದುವೆಯ ಸಂಭ್ರಮದಲ್ಲಿ ಸಾವಿರಾರು ಜನರು ಬಂಧುಗಳು ಸ್ನೇಹಿತರು, ವಿಶ್ವಾಸಿಗಳು ಭಾಗವಹಿಸಿ ಶುಭ ಹಾರೈಸಿದ್ದು ವಿಶೇಷವಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!